Homeಜನಮನಪ್ರಮುಖ ಸುದ್ದಿ

ಶಿರೂರು ಗುಡ್ಡಕುಸಿತ; ಅರ್ಜುನ್‌ ಶೋಧಕ್ಕೆ ಪಿಣರಾಯಿ ಸಿಎಂ ಸಿದ್ದರಾಮಯ್ಯಗೆ ಮನವಿ

ಕಾರವಾರ: ಅಂಕೋಲಾ ಶಿರೂರು ಗುಡ್ಡಕುಸಿತ (Uttara Kannada Landslide, Ankola landslide) ಪ್ರಕರಣದಲ್ಲಿ ನಾಪತ್ತೆಯಾದವರಿಗಾಗಿ ನಡೆಯುತ್ತಿರುವ ಶೋಧ ಕಾರ್ಯಾಚರಣೆ (search Operation) 12ನೇ ದಿನಕ್ಕೆ ಕಾಲಿಟ್ಟಿದೆ. ಗುಡ್ಡಕುಸಿತದಲ್ಲಿ ನಾಪತ್ತೆಯಾಗಿದ್ದ 11 ಮಂದಿ ಪೈಕಿ 8 ಶವ ಪತ್ತೆಯಾಗಿದ್ದು, ಇನ್ನೂ ಮೂವರಿಗಾಗಿ ನದಿಯಲ್ಲಿ ಶೋಧ ಮುಂದುವರಿದಿದೆ. ಕೇರಳದ ಡ್ರೈವರ್‌ ಶೋಧಕ್ಕಾಗಿ ಹೆಚ್ಚಿನ ಪ್ರಯತ್ನ ವಹಿಸಲು ಸಿಎಂ ಸಿದ್ದರಾಮಯ್ಯ (CM Siddaramaiah) ಅವರಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ (Kerala CM Pinarayi Vijayan) ಮನವಿ ಮಾಡಿದ್ದಾರೆ.

ಈಗಾಗಲೇ ಹೆದ್ದಾರಿಯಲ್ಲಿ ಬಿದ್ದಿದ್ದ ಟನ್ನುಗಟ್ಟಲೆ ಮಣ್ಣನ್ನು ಅಲ್ಲಿಂದ ತೆರವು ಮಾಡಲಾಗಿದೆ. ಹೋಟೆಲ್‌ ಅವಶೇಷಗಳೂ ದೊರೆತಿವೆ. ಆದರೆ ಇನ್ನೂ ಮೂವರ ಶವಗಳು ಮಾತ್ರ ಪತ್ತೆಯಾಗಿಲ್ಲ. ಗಂಗಾವಳಿ ನದಿಯಲ್ಲಿ ದೆಹಲಿಯ ಎನ್‌ಡಿಆರ್‌ಎಫ್ ತಂಡ‌ ಡ್ರೋನ್ ಮೂಲಕ ಸ್ಕ್ಯಾನಿಂಗ್ ನಡೆಸಿದ್ದು, ನದಿಯಲ್ಲಿ ಸ್ಕ್ಯಾನಿಂಗ್ ಮೂಲಕ ಲಾರಿ ಇರುವ ಸ್ಥಳ ಗುರುತು ಮಾಡಲಾಗಿದೆ. ಆದರೆ ಡೈವಿಂಗ್ ಮಾಡಿ ಲಾರಿಯನ್ನು ಪರಿಶೀಲಿಸಲು ನದಿಯ ಹರಿವು ಅಡ್ಡಿಯಾಗಿದೆ. ಡೈವಿಂಗ್‌ಗೆ ಅನುಕೂಲವಾಗುವಂತೆ ಜಿಲ್ಲಾಡಳಿತ ಫ್ಲೋಟಿಂಗ್ ಫ್ಲಾಟ್‌ಫಾರಂ ತರಿಸುತ್ತಿದೆ. ಇಂದು ಫ್ಲೋಟಿಂಗ್ ಫ್ಲಾಟ್‌ಫಾರಂ ಬಳಸಿ ನದಿಯಲ್ಲಿರುವ ಲಾರಿಯ ಶೋಧಕ್ಕೆ ಪ್ರಯತ್ನಿಸಲಾಗುತ್ತದೆ.

ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಕೇರಳದ ಲಾರಿ ಚಾಲಕ ಅರ್ಜುನ್‌ ಪತ್ತೆಗೆ ಹೆಚ್ಚಿನ ಕ್ರಮ ವಹಿಸುವಂತೆ ಸಿಎಂ ಸಿದ್ದರಾಮಯ್ಯ ಹಾಗೂ ಕೇಂದ್ರ ರಕ್ಷಣಾ ಸಚಿವರಿಗೆ ಕೇರಳ‌ ಸಿಎಂ ಪಿಣರಾಯಿ ವಿಜಯನ್ ಮನವಿ ಮಾಡಿದ್ದಾರೆ. ದಕ್ಷಿಣ ಮತ್ತು ಪೂರ್ವ ನೌಕಾ ಕಮಾಂಡ್‌ಗಳಿಂದ ಹೆಚ್ಚಿನ ಮುಳುಗು ತಜ್ಞರನ್ನು ನೇಮಿಸಲು, ರಿಮೋಟ್ ಚಾಲಿತ ವಾಹನಗಳು, ಆಧುನಿಕ ಉಪಕರಣಗಳನ್ನು ಶೋಧ ಕಾರ್ಯಕ್ಕೆ ನೀಡಲು ಅವರು ಮನವಿ ಮಾಡಿದ್ದಾರೆ.

 

Related Articles

Leave a Reply

Your email address will not be published. Required fields are marked *

Back to top button