ಆ ಹುಚ್ಚರ ಹೊಟ್ಟೆ ತುಂಬಿಸುವರ್ಯಾರೀಗ.?
ಆ ಹುಚ್ಚರ ಹೊಟ್ಟೆ ತುಂಬಿಸುವವರಾರು ? ಈಗ
***************
ನಮ್ಮ ಸ್ಟೋರ್ ಮುಂದೆ ಆಗಾಗ
ರಾತ್ರಿ ಮಲಗಿರುವ ಆ ಹುಚ್ಚ!ನಿಗೆ
ಮೈ ಮೇಲೆ ಬಟ್ಟೆ ಇಲ್ಲ,
ಆದರೆ ಆ ಮರ್ಯಾದೆ
ಮುಚ್ಚಿಕೊಳ್ಳುವಷ್ಟು ತುಂಡು
ಸುತ್ತಿರುತ್ತಾನೆ
ಅದಷ್ಟೆ ಪ್ರಜ್ಞೇ
ಹೇಗೆ ಉಳಿಸಿದನೋ ಈ ಹುಚ್ಚನಿಗೆ !
ಅನ್ನೋದು ಆ ಮೇಲಿನ ಹುಚ್ಚ!ನಿಗೆ ಗೊತ್ತು.
ಇರಲಿ ನೋಡೋಣ ಅಂತ
ನನ್ನ ಶರ್ಟಗಳನ್ನು ಕೊಟ್ಟರೆ
ಮತ್ತೆ ಅಲ್ಲಿಯಷ್ಟೆ ಅದನ್ನು
ಕಟ್ಟಿಕೊಳ್ಳುವನು,ಉಟ್ಟದ್ದು ಕಾಣೆ
ಸುಮ್ಮನೇ ಮಲಗಿರುವ
ಅವನು ಸ್ಮಶಾನದಿಂದ
ಎದ್ದು ಬಂದ ಬೈರಾಗಿಯ
ಧೂಳು ಕೊಳೆ ಮೈಮೇಲೆಲ್ಲ,
ನೀರು ಕಂಡು ದಶಕಗಳೇ ಕಳೆದಿರಬಹುದು
ಅಯ್ಯೋ,ಪಾಪ!
ಹೊಟ್ಟೆಗೇನು ಮಾಡುವನೋ…?!
ಪಕ್ಕದ ಬೇಕರಿಯವರ,
ರಸ್ತೆ ಬದಿಯ ತಿಂಡಿ ವ್ಯಾಪಾರಿಗಳಿಗೆ
ಕೈ ಚಾಚುವನಂತೆ ಹಸಿವಾದಾಗ
ಅವರು ಕೊಟ್ಟಷ್ಟು ತಿಂದು
ತಿರುಗುವನಂತೆ…ಊರತುಂಬಾ
ಅವರೇ ಹೇಳಿದರು ,
ಆಗಾಗ ಎಲ್ಲೆಂದರಲ್ಲಿ
ಮಲಗುವನಂತೆ ಹೀಗೆ…
ಜೀವ ತಡೆಯದೆ ಆಗಾಗ
ಹತ್ತಿಪ್ಪತ್ತರ ನೋಟು ಕೊಡುತ್ತಿದ್ದೆ,
ನನ್ನಂತೆ ಹಲವರು ಕೊಡುತ್ತಿರಬಹುದು,
ಅದರ ಬೆಲೆ ಅವನಿಗೆ ಗೊತ್ತಿದ್ದಂತಿಲ್ಲ
ಕಾದಿಟ್ಟುಕೊಳ್ಳಲು ಮೈ ತೊಗಲು
ಬಿಟ್ಟರೆ ಬೇರೆ ಜೇಬುಗಳಿಲ್ಲ ಮೈ ಮೇಲೆ
ಸದಾ ತಿಂಡಿ ಮಾರುವ ಬೀದಿ ವ್ಯಾಪಾರಿಗಳಿಗೆ
ಇಲ್ಲ ಬೇಕರಿಯವರಿಗೆ
ನಮ್ಮಂಥವರು ಕೊಟ್ಟ ಆ ಕಾಗದಗಳ ಕೊಟ್ಟು,
ಅವರು ಕೊಟ್ಟಷ್ಟು ತಿಂದು ಮುಂದೆ
ಹೋಗುವದ ಕಂಡಿರುವೆ….
ಇಂತಹವರೀಗ ದೇಶದ ತುಂಬಾ ಲಕ್ಷಾಂತರ
ಅವರಿಗೆ ಆಧಾರ ಬೀದಿಯಂಗಡಿಗಳು
ಅವೇ ಬಂದಾದಾಗ
ಅವರ ಹೊಟ್ಟೆ ತುಂಬಿಸುವವರಾರು ?
ಮುಚ್ಚಿದ ಬಾಗಿಲುಗಳ
ಈ ಜಗದಿ ಈಗ…!
ಇಂದು ಯುಗಾದಿಯಂತೆ
ಬೇವಿನೊಂದಿಗೆ ಬೆಲ್ಲವು ಸಹ
ಕಹಿಯಾಯಿತು ನನ್ನಂತವರಿಗಿಂದು…
ಹುಟ್ಟಿಸಿದ ದೇವರು ಹುಲ್ಲು ಮೇಯಿಸಲಾರ
ಅನ್ನೋ ಮಾತಾದರು ನಿಜವಾಗಲಿ ಈಗ…
-ಸಿದ್ಧರಾಮ ಹೊನ್ಕಲ್,