ಧಾರಕಾರ ಮಳೆ ಸುರಿದರೆ ಇಲ್ಲಿನ ಮಕ್ಕಳಲ್ಲಿ ಆತಂಕ ಏಕೆ ಗೊತ್ತಾ..?
ಹಳ್ಳದ ದಂಡೆಯಲ್ಲಿ ರಾತ್ರಿ ಕಳೆದ ಶಾಲಾ ಮಕ್ಕಳು..!
ಸೊನ್ನಾಪುರ ಗ್ರಾಮಕ್ಕೆ ತೆರಳಲು ಮಕ್ಕಳು, ಗ್ರಾಮಸ್ಥರ ಪರದಾಟ
ಶಹಾಪುರ: ಮಕ್ಕಳು ಶಾಲೆಗೆ ಹೋದಾಗ ಧಾರಕಾರ ಮಳೆ ಸುರಿತಾ ಇದ್ರೆ, ಇತ್ತ ಶಾಲೆಯಲ್ಲಿ ಕುಳಿತ ಹಲವು ಮಕ್ಕಳ ಎದೆಯಲ್ಲಿ ಡವಡವ ಶುರು. ಹಾಂ..ಎಂದು ಹುಬ್ಬೇರಿಸದಿರಿ..
ಹೌದು.. ಜಿಲ್ಲೆಯ ಸುರಪುರ ತಾಲೂಕಿನ ಸೊನ್ನಾಪುರ ಗ್ರಾಮದ ಪರಿಸ್ಥಿತಿ ಇದು. ನಿನ್ನೆ ಧಾರಕಾರವಾಗಿ ಸುರಿದ ಮಳೆಗೆ ಸೊನ್ನಾಪುರ ಗ್ರಾಮದ ಶಾಲೆಗೆ ತೆರಳಿದ್ದ ನಾಲ್ಕು ಮಕ್ಕಳು ತಮ್ಮ ಸ್ವಗ್ರಾಮಕ್ಕೆ ಬರಲಾಗದೆ ಹಳ್ಳದ ದಂಡೆಯಲ್ಲಿ ಕಾಯ್ದು ಕಾಯ್ದು ಹಳ್ಳದ ನೀರು ಹಿಂದೆ ಸರಿಯದ ಕಾರಣ, ತಡರಾತ್ರಿವರೆಗೆ ಅಲ್ಲಿಯೇ ದಡದಲ್ಲಿ ಕಾಯ್ದು, ನಂತರ ಗ್ರಾಮದ ಪರಿಚಯಸ್ಥ ಮತ್ತು ಸಂಬಂಧಿಕರ ಮನೆಯಲ್ಲಿ ಉಳಿದ ಘಟನೆ ಜರುಗಿದೆ.
ಗ್ರಾಮದ ಹಳ್ಳದಾಚೆಯ ಜಮೀನೊಂದರಲ್ಲಿ ಸುಮಾರು 30 ಮನೆಗಳಿವೆ. ಅಂದಾಜು 150 ಕ್ಕೂ ಹೆಚ್ಚು ಜನರು ಅಲ್ಲಿ ವಾಸವಿದ್ದಾರೆ. ಅಲ್ಲಿನ ಮಕ್ಕಳು ಸೊನ್ನಾಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಅಭ್ಯಾಸ ಮಾಡುತ್ತಾರೆ.
ಗುರುವಾರ ಧಾರಕಾರ ಮಳೆ ಸುರಿದ ಪರಿಣಾಮ ಮಕ್ಕಳು ತಮ್ಮ ಮನೆಗೆ ತಲುಪಲು ಸಾಧ್ಯವಾಗಿಲ್ಲ. ಗ್ರಾಮದ ಸಂಬಂಧಿಕರ ಮತ್ತು ಪರಿಚಯಸ್ಥರ ಮನೆಯಲ್ಲಿಯೇ ರಾತ್ರಿ ಕಳೆದು, ಬೆಳಗ್ಗೆ ಹಿರಿಯರ ಸಹಾಯದಿಂದ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದ ಹಳ್ಳದ ನೀರಿನಿಂದ ಆಚೆ ದಡ ಸೇರಿದ್ದಾರೆ.
ಮಕ್ಕಳು ತಡ ರಾತ್ರಿವರೆಗೂ ಕಾಯ್ದರು ಹಳ್ಳದ ನೀರು ಕಡಿಮೆಯಾಗದ ಪರಿಣಾಮ, ಅನಿವಾರ್ಯವಾಗಿ ರಾತ್ರಿ ಅಲ್ಲಿಯೇ ಉಳಿಯಬೇಕಾಯಿತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆಯುಧ ಪೂಜೆ ಹಬ್ಬ ಬೇರೆ ಇರುವದರಿಂದ ಗ್ರಾಮದ ಹಲವರ ಸಹಾಯದಿಂದ ಮಕ್ಕಳನ್ನು ಆಚೆ ದಾಟಿಸಲು ಹರಸಾಹಸ ಪಡುವಂತಾಯಿತು.
ಇಂತಹ ಸಂದರ್ಭದಲ್ಲಿ ಅವಘಡ ಸಂಭವಿಸಿದರೆ, ಮಕ್ಕಳ ಸ್ಥಿತಿ ದೇವರಿಗೆ ಪ್ರೀತಿ. ಮಳೆಗಾಲ ಬಂದಲ್ಲಿ ಈಚೆಗಿನ ಮಕ್ಕಳು ಶಾಲೆಗೆ ಹೋಗುವುದು ಅಪರೂಪ ವೆಂಬಂತಾಗಿದೆ. ಶಾಲೆಗೆ ಹೋದಾಗ ಮಳೆ ಬಂದರೆ ಮುಗೀತು. ಇತ್ತ ಪಾಲಕರಲ್ಲಿ ಆತಂಕ, ಅತ್ತ ಮಕ್ಕಳಲ್ಲೂ ಭಯ ಮೂಡಿರುತ್ತದೆ. ಇಂತಹ ವಿಷಮಸ್ಥಿತಿಯಲ್ಲಿ ಇಲ್ಲಿನ ಜನರು ಕಾಲಕಳೆಯುವಂತಾಗಿದೆ.
ಸರ್ಕಾರ ಮಕ್ಕಳಿಗೆ ಶಿಕ್ಷಣ ಪಡೆಯುವ ಹಕ್ಕು ನೀಡಿದೆ. ಶೈಕ್ಷಣಿಕವಾಗಿ ಅನುಕೂಲ ಕಲ್ಪಿಸಲು ಹಲವಾರು ಯೋಜನೆಗಳಡಿ ಕೋಟಿಗಟ್ಟಲೆ ಅನುದಾನ ಬಿಡುಗಡೆ ಮಾಡಿದೆ. ಆದಾಗ್ಯು ಮಕ್ಕಳ ಶೈಕ್ಷಣಿಕ ವ್ಯವಸ್ಥೆಗೆ ಹಲವಡೆ ಇಂತಹ ಸಮಸ್ಯೆಗಳಿವೆ. ಅವುಗಳ ಕುರಿತು ಸಮಗ್ರ ವರದಿ ತಯಾರಿಸಿಕೊಡುವ ಜವಬ್ದಾರಿ ಮತ್ತು ಕರ್ತವ್ಯ ಸಂಬಂಧಿತ ಅಧಿಕಾರಿಗಳದ್ದಾಗಿದೆ. ಸಮರ್ಪಕವಾಗಿ ಸಮಸ್ಯೆ ಬಗ್ಗೆ ಗಮನ ಸೆಳೆದಲ್ಲಿ ಸರ್ಕಾರ, ಜಿಲ್ಲಾಡಳಿತ ಸ್ಪಂಧಿಸುತ್ತದೆ. ಆದರೆ ಅದನ್ನು ಕಾಳಜಿ ಪೂರ್ವಕವಾಗಿ ವರದಿ ಒಪ್ಪಿಸುವ ಕೆಲಸವಾಗುತ್ತಿಲ್ಲ ಎಂಬುದಕ್ಕೆ ಈ ಸ್ಟೋರಿ ನಿದರ್ಶನವಾಗಿದೆ.
ಈಗಾಗಲೇ ಇದೇ ಹಳ್ಳದಲ್ಲಿ ಬಾಲಕನೋರ್ವ ಜೀವ ಕಳೆದುಕೊಂಡ ಉದಾಹರಣೆ ಇದೆ. ಇನ್ನೂ ಯಾವುದೇ ಅವಘಡ ಸಂಭವಿಸಿದಕ್ಕೂ ಮುಂಚಿತವಾಗಿ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಅಲ್ಲಿನ ಮಕ್ಕಳಿಗೆ ಶೈಕ್ಷಣಿಕ ಸೌಲಭ್ಯಕ್ಕಾಗಿ ಬೇಕಾದ ವ್ಯವಸ್ಥೆ ಕಲ್ಪಿಸಲಿ. ಶೀಘ್ರದಲ್ಲಿ ಸೇತುವೆ ನಿರ್ಮಾಣದ ಅನುಕೂಲ ಕಲ್ಪಿಸಲಿ ಎಂಬುದೇ “ವಿನಯವಾಣಿ” ಆಶಯ.
–ಮಲ್ಲಿಕಾರ್ಜುನ ಮುದನೂರ.