SSLC RESULT: ಟೋಪರ್ಸ್ ಗಳಿಗೆ ಸನ್ಮಾನಿಸಿ, ಬಂಪರ್ ಬಹುಮಾನ ನೀಡಿದ ಸಿಎಂ ಸಿದ್ದರಾಮಯ್ಯ!
ಬೆಂಗಳೂರು: ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಪಡೆದ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಮೆಳ್ಳಿಗೇರಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತ ಹಾಗೂ ದ್ವಿತೀಯ ರ‍್ಯಾಂಕ್ ಪಡೆದ ಮಂಡ್ಯ ತಾಲೂಕಿನ ತುಂಬಿಗೆರೆ ಮೊರಾರ್ಜಿ ಶಾಲೆಯ ವಿದ್ಯಾರ್ಥಿ ನವನೀತ್ ಕೆ.ಸಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಸನ್ಮಾನಿಸಿದ್ದು, ಶುಭ ಹಾರೈಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಿದ್ದರಾಮಯ್ಯ, ಅಮೋಘ ಸಾಧನೆ ಮಾಡಿದ ಈ ವಿದ್ಯಾರ್ಥಿಗಳ ಮುಂದಿನ ವಿಧ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂದು ಅಂಕಿತಾಗೆ 5 ಲಕ್ಷ ರೂ. ಹಾಗೂ ನವನೀತ್ ಗೆ 3 ಲಕ್ಷ ರೂ.ಗಳ ನೆರವನ್ನು ನೀಡುತ್ತಿರುವುದಾಗಿ ತಿಳಿಸಿದ್ದಾರೆ.
ಗ್ರಾಮೀಣ ಮಕ್ಕಳು ಇನ್ನಷ್ಟು ಶೈಕ್ಷಣಿಕ ಸಾಧನೆಗಳನ್ನು ಮಾಡುವಂತಾಗಲಿ, ಈ ಮಕ್ಕಳು ಓದಿದ ಶಾಲೆ ಮತ್ತಷ್ಟು ಸರ್ಕಾರಿ ಶಾಲೆಗಳಿಗೆ ಸ್ಪೂರ್ತಿಯಾಗಲಿ ಎಂದು ಅಂಕಿತಾ ಓದಿದ ಶಾಲೆಯ ಅಭಿವೃದ್ಧಿಗೆ ಒಂದು ಕೋಟಿ ರೂ. ಹಾಗೂ ನವನೀತ್ ವ್ಯಾಸಂಗ ಮಾಡಿದ ಶಾಲೆಯ ಅಭಿವೃದ್ಧಿಗೆ 50 ಲಕ್ಷ ರೂ.ಗಳ ಅನುದಾನ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.