ದಿ.ಅಚ್ಚಪ್ಪಗೌಡ ಸುಬೆದಾರ ಟ್ರಸ್ಟ್ 5 ನೇ ವಾರ್ಷಿಕೋತ್ಸವ
5 ಸಾವಿರ ಮಹಿಳೆಯರಿಗೆ ಉಡಿ ತುಂಬಿದ ಟ್ರಸ್ಟ್, ಸಂಸದರಿಂದ ಗೋಪೂಜೆ
yadgiri, ಶಹಾಪುರಃ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ಪ್ರಾಣದ ಹಂಗು ತೊರೆದು, ಕೆಚ್ಚೆದೆಯ ಹೋರಾಟ ನಡೆಸುವ ಮೂಲಕ ಈ ಭಾಗಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಅವಿರತ ಶ್ರಮವಹಿಸಿದ ದಿ.ಅಚ್ಚಪ್ಪಗೌಡ ಸುಬೇದಾರರ ಜೀವನ ಚರಿತ್ರೆ ಯುವ ಪೀಳಿಗೆಗೆ ತಿಳಿಸಬೇಕಿದೆ ಎಂದು ಮಾಜಿ ಸಚಿವ, ಶಾಸಕ ರಾಜುಗೌಡ ಹೇಳಿದರು.
ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ ದಿ.ಅಚ್ಚಪ್ಪಗೌಡ ಸುಬೇದಾರ ರೂರಲ್ ಮತ್ತು ಅರ್ಬನ್ ಟ್ರಸ್ಟನ್ 5 ನೇ ವಾರ್ಷಿಕೋತ್ಸವ, ಬೃಹತ್ ಉಚಿತ ಆರೋಗ್ಯ ಶಿಬಿರ ಹಾಗೂ 5001 ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲಾ, ಕಾಲೇಜು ದಿನದಲ್ಲಿ ನಾವೆಲ್ಲ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಓದಿದ್ದೇವೆ. ಆದರೆ ನಮ್ಮ ಭಾಗದ ಅಚ್ಚಪ್ಪಗೌಡರಂಥ ದಿಟ್ಟ ಹೋರಾಟಗಾರರು ಸಾಕಷ್ಡು ಜನರಿದ್ದಾರೆ. ಅಂಥವರ ಸಮಗ್ರ ಮಾಹಿತಿ ಕಲೆಹಾಕಿ ಅವರ ಜೀವನ ಚರಿತ್ರೆ ಕುರಿತು ಪುಸ್ತಕ ರಚನೆ, ಧಾರವಾಹಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸ್ವಾತಂತ್ರ್ಯಕ್ಕಾಗಿ ಹುತಾತ್ಮರಾದಂತ ಮಹಾನ್ ವ್ಯಕ್ತಿಗಳ ಕುರಿತು ಶಾಶ್ವತ, ಸ್ಮರಣೀಯವಾಗಿ ಉಳಿಯುವಂತ ಕೆಲಸ ಮಾಡಬೇಕಿದೆ.
ದಿ. ಅಚ್ಚಪ್ಪಗೌಡರು, ಹುಣಸಗಿಯ ವಿರುಪಾಕ್ಷಪ್ಪನವರು ಸೇರಿದಂತೆ ನಮ್ಮ ಭಾಗದ ಸಾಕಷ್ಟು ಮಹನೀಯರು ನಮಗೆಲ್ಲ ಸ್ವಾತಂತ್ರ್ಯ ದೊರಕಿಸಿ ಕೊಟ್ಟಿದ್ದಾರೆ. ಇಂತಹ ಮಹನೀಯರ ಕಥೆ ಕುರಿತು ಮಕ್ಕಳಿಗೆ, ಯುವಕರಿಗೆ ತಿಳಿಸುವ ಅಗತ್ಯವಿದೆ.
ಡಾ.ಚಂದ್ರಶೇಖರ ಸುಬೇದಾರ ಅವರು ವೈದ್ಯರಾಗಿ ಬೆಂಗಳೂರ ಅಥವಾ ಬೇರೆ ದೊಡ್ಡ ಸಿಟಿಯಲ್ಲಿ ಜೀವನ ಕಟ್ಟಿಕೊಳ್ಳಬಹುದಿತ್ತು. ಆದರೆ ಅವರು ಜನ್ಮ ಕೊಟ್ಟ ಊರಲ್ಲಿ ಸೇವೆ ಮಾಡಬೇಕೆಂಬ ಮಹಾದಾಸೆಯಿಂದ ತಮ್ಮ ವೈದ್ಯಕೀಯ ವೃತ್ತಿ ಜೀವನವನ್ನು ನಗರದಲ್ಲಿಯೇ ನಡೆಸಿಕೊಂಡು ಬಂದಿದ್ದಾರೆ. ಇನ್ನು ಹೆಚ್ಚಿನ ಸೇವೆ ಸಲ್ಲಿಸುವ ಭಾಗ್ಯ ದೇವರು ಕಲ್ಪಿಸಲಿ ಎಂದು ಹರಸಿದರು.
ಮುಂಚಿತವಾಗಿ ಗೋವು ಪೂಜೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ, ಸ್ವಾತಂತ್ರ್ಯ ತಂದು ಕೊಟ್ಟ ಹೋರಾಟಗಾರರನ್ನು ಸದಾ ಸ್ಮರಸಬೇಕು. ಅವರೆಲ್ಲ ತಮ್ಮ ಜೀವ ಒತ್ತೆ ಇಟ್ಟು ಹೋರಾಟ ನಡೆಸಿ ಸ್ವಾತಂತ್ರ್ಯ ತಂದು ಕೊಟ್ಟಿದ್ದು, ಇಂದು ನಾವೆಲ್ಲ ನೆಮ್ಮದಿಯಿಂದ ಜೀವನ ನಡೆಸುವಂತಾಗಿದೆ. ಸುಬೇದಾರ ಕುಟುಂಬ ಗೋವು ಪೂಜೆ ಮತ್ತು ಮುತೈದೆಯರಿಗೆ ಉಡಿ ತುಂಬುವ ಕಾರ್ಯ ಶ್ಲಾಘನೀಯವಾಗಿದ್ದು, ಅವರ ಜನಹಿತ ಕಾರ್ಯ ಮುಂದುವರೆಯಲಿ ಎಂದು ಹಾರೈಸಿದರು.
ಸಾಹಿತಿ ಸಿದ್ಧರಾಮ ಹೊನ್ಕಲ್ ಬರೆದ ವಿಮೋಚನಾ ಹೋರಾಟಗಾರ ಸಗರದ ಅಚ್ಚಪ್ಪಗೌಡ ಸುಬೇದಾರ ಪುಸ್ತಕ ಬಿಡುಗಡೆ ಮಾಡಲಾಯಿತು. ಮಾಜಿ ಶಾಸಕ ಗುರು ಪಾಟೀಲ್, ಮಾಜಿ ಎಂಎಲ್ಸಿ ಅಮಾತೆಪ್ಪ ಕಂದಕೂರ, ಸಾಹಿತಿ ಸಿದ್ಧರಾಮ ಹೊನ್ಕಲ್ ಮಾತನಾಡಿದರು.
ಗುರುಪಾದ ಶ್ರೀ ಮತ್ತು ಬಸಯ್ಯ ಶರಣರು ಸಾನ್ನಿಧ್ಯವಹಿಸಿದ್ದರು. ಮಾಜಿ ಎಂಎಲ್ಸಿ ಅಮರನಾಥ ಪಾಟೀಲ್, ಯಾದಗಿರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ಶರಣಭೂಪಾಲರಡ್ಡಿ, ಬಿ.ಜಿ.ಪಾಟೀಲ್, ದೊಡ್ಡಪ್ಪಗೌಡ ಪಾಟೀಲ್ ನರಿಬೋಳಿ ಸೇರಿದಂತೆ ಇತರರಿದ್ದರು. ಇದೇ ಸಂದರ್ಭದಲ್ಲಿ 35 ವಷ ಸುದೀರ್ಘ ಸೇವೆ ಸಲ್ಲಿಸಿದ ಡಾ.ಸುಬೇದಾರ ಅವರನ್ನು ಸಂಸದರು ಸೇರಿದಂತೆ ಗಣ್ಯರು ಸನ್ಮಾನಿಸಿ ಅಭಿನಂದಿಸಿದರು. ಸುಬೇದಾರ ಕುಟುಂಬದ ಮಹಿಳೆಯರು 5 ಸಾವಿರಕ್ಕೂ ಹೆಚ್ಚು ಮುತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಸಿಕೊಟ್ಟರು. ಊಟದ ವ್ಯವಸ್ಥೆ ಮಾಡಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಉಚಿತ ಆರೋಗ್ಯ ಶಿಬಿರದಲ್ಲಿ ಸಾವಿರಾರು ಜನರು ತಪಾಸಣೆ ಮಾಡಿಕೊಂಡರು.
35 ವರ್ಷಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ನನಗೆ ಇನ್ನಷ್ಟು ಕ್ಷೇತ್ರದ ಜನ ಸೇವೆ ಮಾಡಲು ನನ್ನ ಆರೋಗ್ಯ ಸ್ಥಿರವಾಗಿರುವಂತೆ ಎಲ್ಲರೂ ಆ ದೇವರಲ್ಲಿ ಪ್ರಾರ್ಥಿಸುವ ಮೂಲಕ ನನಗೆ ಆಶೀರ್ವಾದ ಮಾಡಿ.
-ಡಾ.ಚಂದ್ರಶೇಖರ ಸುಬೇದಾರ.