ಸಾಹಿತ್ಯ

‘ಶಹಾಪುರ ದರ್ಶನ’ ಮಾಡಿಸಿದ ಸಾಹಿತಿ ಪ್ರೊ. ಸೂಗಯ್ಯ ಹಿರೇಮಠ ಇನ್ನಿಲ್ಲ!

ಹಿರೇಮಠರು ಹೇಳಿದ್ದು : ಹೈದರಾಬಾದ್ ಕರ್ನಾಟಕ ಹಿಂದುಳಿದ ಪ್ರದೇಶವಲ್ಲ, ಹಿಂದುಳಿಸಿದ ಪ್ರದೇಶ!

ಪ್ರೊ.ಸೂಗಯ್ಯ ಹಿರೇಮಠ ಅಂದರೆ ಸಾಕು ಶಹಾಪುರ ದರ್ಶನ ಕೃತಿ ನೆನಪಾಗದೆ ಇರದು. ಸಗರನಾಡಿನ ನೆಲದ ನಂಟನ್ನು ಕೃತಿ ಮೂಲಕ ಸೊಗಸಾಗಿ ಬಿಚ್ಚಿಡುವ ಮೂಲಕ ಜಗಕೆ ಶಹಾಪುರ ದರ್ಶನ ಮಾಡಿಸಿದವರು ಸೂಗಯ್ಯ ಹಿರೇಮಠ. ಅಂತ ಅಪರೂಪದ ಬಂಡಾಯ ಸಾಹಿತಿ ಸೂಗಯ್ಯ ಹಿರೇಮಠ ಅವರು ನಿನ್ನೆಯಷ್ಟೇ ಈ ಜಗದ ದರ್ಶನ ಮುಗಿಸಿರೋದು ವಿಷಾದದ ಸಂಗತಿ.

ಸೂಗಯ್ಯ ಹಿರೇಮಠ ಅವರು ಶಹಾಪುರ ತಾಲೂಕಿನ ಸಿಂಗನಹಳ್ಳಿ ಗ್ರಾಮದವರಾಗಿದ್ದು ಕಲಬುರ್ಗಿ ವಿಶ್ವವಿದ್ಯಾಲಯದಲ್ಲಿ ಎಂ.ಎ.ಕನ್ನಡ ಪದವಿ ಪಡೆದಿದ್ದರು. ಎಚ್.ಕೆ.ಇ. ಸಂಸ್ಥೆಯ ಪದವಿ ಮಹಾವಿದ್ಯಾಲಯ ಚಿಂಚೋಳಿಯಲ್ಲಿ ಉಪನ್ಯಾಸಕಾರಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು. ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದ ಹಿರೇಮಠರು ಉಂಡು ಮಲಗಿದವರು (ಕವನ ಸಂಕಲನ), ಪಂಚಾಂಗದ ವಚನಗಳು (ಸಂಪಾದಿತ), ಉರಿಲಿಂಗ ಪೆದ್ದಿ (ಜೀವನ ಚರಿತ್ರೆ), ನೀರು ನೆಲೆ (ಕವನ ಸಂಕಲನ), ಅಂತರ (ಸಣ್ಣ ಕಥೆಗಳು), ಸರಳ ಕನ್ನಡ ವ್ಯಾಕರಣ, ಶಹಾಪುರ ದರ್ಶನ ಕೃತಿ ಸೇರಿದಂತೆ 35ಕ್ಕ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಶಹಾಪುರ ದರ್ಶನ ಕೃತಿ ಈಗಲೂ ಸಂಶೋಧಕರಿಗೆ ಆಕರ ಗ್ರಂಥವಾಗಿದೆ.

ಹಿರೇಮಠರು ತಮ್ಮ ಬಂಡಾಯದ ನುಡಿಗಳನ್ನು ಕೃತಿಗಳಲ್ಲೂ ಪ್ರಕಟಿಸಿದ್ದಾರೆ. ಅಂತೆಯೇ ಶಹಾಪುರದಿಂದ ಪ್ರಕಟವಾಗುತ್ತಿದ್ದ “ಹೊಸದಿಕ್ಕು” ಎಂಬ ದ್ವೈಮಾಸಿಕ ಸಾಹಿತ್ಯಿಕ ಪತ್ರಿಕೆಯ ಸಲಹೆಗಾರರಾಗಿದ್ದ ಹಿರೇಮಠರು ಮೊನಚಾದ ಬರಹಗಳನ್ನು ಪ್ರಕಟಿಸಿ ಪತ್ರಿಕೆಗಳ ಮೂಲಕವೂ ಯುವ ಪೀಳಿಗೆಗೆ ಹೊಸದಿಕ್ಕು ತೋರಿದ್ದಾರೆ. ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಅವರು ಕಲಬುರ್ಗಿ ಜಿಲ್ಲೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು

ಹಿರೇಮಠರು ವಿದ್ಯಾರ್ಥಿ ದೆಸೆಯಲ್ಲಿಯೇ ಬರೆಯುವ ಹವ್ಯಾಸ ಬೆಳೆಸಿಕೊಂಡವರು. ಉತ್ತಮ ಬರವಣಿಗೆ ಮೂಲಕ ನಾಡಿನ ಓದುಗರಿಗೆ ಚಿರಪರಿಚಿತರು. ಶೈಕ್ಷಣಿಕ, ಸಾಮಾಜಿಕ, ಸಂಘಟನೆ ಹಾಗೂ ಸಮಸ್ಯೆಗಳಿಗೆ ಸದಾ ಸ್ಪಂದಿಸುವ ಅವರ ಉತ್ಸಾಹ, ಸ್ಪಷ್ಟ ಮಾತುಗಾರಿಕೆ ಹಲವು ಸಲ ಕೇಳುಗರನ್ನು ಬೆರಗುಗೊಳಿಸುತ್ತಿತ್ತು. ಎಂಥ ಕಠಿಣ ಸಂದರ್ಭದಲ್ಲಿಯೂ ಎದೆಗುಂದದೆ ಧೈರ್ಯದಿಂದ ಎದುರಿಸುವ ತಾಕತ್ತು ಹಿರೇಮಠರ ವಿಶಿಷ್ಟ ಗುಣವಾಗಿತ್ತು. ಸಮಾಜ, ಶಿಕ್ಷಣ, ಸಾಹಿತ್ಯ ಹಾಗೂ ರಾಜಕೀಯ ಚಿಂತನೆಯೊಂದಿಗೆ ನಾಡಿನ ವಿವಿಧ ಸಂಘಟನೆಗಳಿಗೆ ಪ್ರೇರಕ ಶಕ್ತಿಯಾಗಿದ್ದರು. ಸ್ನೇಹಮಯಿಯಾಗಿದ್ದ ಹಿರೇಮಠರು. ಎಲ್ಲ ವಯೋಮಾನದವರ ಜೊತೆಗೂ ಮುಕ್ತವಾಗಿ ಪ್ರೀತಿ, ಸ್ನೇಹ, ನಂಬಿಕೆ, ವಿಶ್ವಾಸದ ಭಾವದೊಂದಿಗೆ ಬೆರೆತು ಬದುಕುವ ಮನೋಧರ್ಮ ಅವರದ್ದಾಗಿತ್ತು.

ಹಿರೇಮಠರದು ಬಹುಮುಖಿ ಸಾಹಿತ್ಯ ಸೇವೆ. ಪ್ರಾಧ್ಯಾಪಕ, ಕವಿ, ಕಥೆಗಾರ, ಪ್ರಬಂಧಕಾರ, ಜಾನಪದ ವಿದ್ವಾಂಸ, ಗ್ರಂಥ ಸಂಪಾದಕ, ಪ್ರಗತಿಪರ ಚಿಂತಕ, ಸಂಘಟಕ, ಹೋರಾಟಗಾರ -ಹೀಗೆ ಅವರ ಸಾಹಿತ್ಯಿಕ ಹಾಗೂ ಸಾಮಾಜಿಕ ಸೇವೆ ಹಲವು ಕವಲುಗಳಲ್ಲಿ ವಿಸ್ತಾರವಾಗಿ ಬೆಳೆದಿದೆ. ಬಂಡಾಯ ಸಾಹಿತ್ಯ ಸಂದರ್ಭದಲ್ಲಿ ಬೆಳೆದು ಬಂದ ಪ್ರೊ. ಸೂಗಯ್ಯ ಹಿರೇಮಠರ ಬರಹಕ್ಕೆ ಅನೇಕ ಆಯಾಮಗಳಿವೆ. ಅವು ಮೂಲತಃ ಆಕ್ರೋಶ, ವ್ಯಂಗ್ಯದ ಒಡಲಲ್ಲಿ ಹುಟ್ಟಿದರೂ ಆಳದಲ್ಲಿ ತಣ್ಣನೆಯ ಧ್ಯಾನ, ಭವಿಷ್ಯದ ಕುರಿತು ಪ್ರಗತಿಪರ ಚಿಂತನೆ ಮೂಡಿಸುತ್ತವೆ. ಭಾಷೆ, ಬಂಡಾಯದಂತಹ ಹಲವು ಚಳವಳಿಯ ಬೀಸುಗಾಲದ ನಡುವೆ ಅವರ ಬರಹ ಶ್ರಮಿಕ, ದಮನಿತ, ಶೋಷಿತರ ಪರವಾಗಿ ಹಂಬಲಿಸಿದೆ; ಅದನ್ನು ಕಣ್ಣರೆಪ್ಪೆಯಲ್ಲಿಟ್ಟು ಜೋಪಾನವಾಗಿ ಕಾಪಾಡಿದೆ ಅಂದರೆ ಅತಿಶಯೋಕ್ತಿಯಲ್ಲ.

ಜನಪರವಾದ ನಿಲುವುಗಳಿಗೆ ಸದಾ ಸ್ಪಂದಿಸುತ್ತ ಉದಾರವಾದ ಮಾನವತಾವಾದದಲ್ಲಿ ತಮ್ಮ ಕಾವ್ಯವನ್ನು ನೆಲೆಗೊಳಿಸಿದ್ದಾರೆ. ನೇರ, ನಿಷ್ಠುರ, ಗಟ್ಟಿ ಧ್ವನಿಯ, ಗಂಭೀರ ಪ್ರವೃತ್ತಿಯ ಹಿರೇಮಠವರೊಡನೆ ಸಾಹಿತ್ಯ ಸಲ್ಲಾಪ ನಡೆಸುವುದು ಒಂದು ಅಪರೂಪದ ಅನುಭವ. ‘ಹೈದರಾಬಾದ್ ಕರ್ನಾಟಕ ಹಿಂದುಳಿದ ಪ್ರದೇಶವಲ್ಲ ಹಿಂದುಳಿಸಿದ ಪ್ರದೇಶ’ ಎಂಬುದು ಅವರ ಸ್ಪಷ್ಟ ಕಲ್ಪನೆಯಾಗಿತ್ತು. ಬೌದ್ಧಿಕ,ಭೌತಿಕ ಮತ್ತು ಸಾಂಸ್ಕಂತಿಕ ದೃಷ್ಟಿಯಿಂದಲೂ ಈ ಭಾಗದವರು ಶೋಷಣೆಗೆ ಒಳಗಾಗುವಂತಹ ಸ್ಥಿತಿ ನಿರ್ಮಾಣವಾಗಿದ್ದು ಇಂದಿಗೂ ಯಾವುದೇ ಬದಲಾವಣೆ ಕಂಡು ಬರುತ್ತಿಲ್ಲವೆಂದು ಅವರು ತೀವ್ರ ವಿಷಾದ ವ್ಯಕ್ತಪಡಿಸುತ್ತಿದ್ದರು. ನಮ್ಮೆದುರು ನುಗ್ಗಿ ಬರುತ್ತಿರುವ ಜಾಗತೀಕರಣಕ್ಕೆ ಪ್ರತಿರೋಧವಾಗಿ ನಮ್ಮ ದೇಶೀಯ ಜ್ಞಾನಪರಂಪರೆಯನ್ನು ಪುನರ್‍ಶೋಧಿಸಿ ಕುಸಿಯುತ್ತಿರುವ ನಮ್ಮ ಬೇರುಗಳನ್ನು ಬಲಗೊಳಿಸಬೇಕಾಗಿದೆ. ಭಾಷೆ,ಸಾಹಿತ್ಯ, ವ್ಯಾಕರಣ, ಛಂದಸ್ಸು, ಚರಿತ್ರೆ, ಕೃಷಿ, ವೈದ್ಯ, ಪರಿಸರ ಮುಂತಾದ ಅಧ್ಯಯನ ವಿಷಯಗಳನ್ನು ಹೊಸ ಆಲೋಚನೆಯ ನೆಲೆಯಲ್ಲಿ ವಿಶ್ಲೇಷಿಸುವುದು ಅವಶ್ಯಕವೆಂದು ಅವರು ಅಭಿಪ್ರಾಯಪಡುತ್ತಿದ್ದರು.

ಪ್ರೊ. ಸೂಗಯ್ಯ ಹಿರೇಮಠವರು ಮೂವತ್ತೈದಕ್ಕೂ ಅಧಿಕ ಮೌಲಿಕ ಕೃತಿಗಳನ್ನು ನಾಡಿನ ಸಾರಸ್ವತ ಲೋಕಕ್ಕೆ ಕೊಟ್ಟಿದ್ದಾರೆ. ಹಿರೇಮಠರ ಸಾಹಿತ್ಯಿಕ ಸಾಧನೆಯನ್ನು ಗುರುತಿಸಿ ರಾಜ್ಯ ಸರಕಾರ, ಪ್ರತಿಷ್ಠಿತ ಸಂಘ, ಸಂಸ್ಥೆಗಳು ಕೊಡಮಾಡುವ ಪ್ರಶಸ್ತಿ, ಗೌರವಗಳು ಅವರನ್ನು ಹುಡುಕಿಕೊಂಡು ಬಂದಿವೆ. ಅವರ ಕವಿತೆ, ಕಥೆ, ಪ್ರಬಂಧಗಳು ನಾಡಿನ ಕೆಲವು ವಿಶ್ವವಿದ್ಯಾಲಯಗಳ ಪದವಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳಾಗಿ ಬೋಧಿಸುತ್ತಿರುವುದು ಹೆಮ್ಮೆಯ ಸಂಗತಿಯೇ ಸರಿ. ಆದರೆ, ಅಂಥ ಅಪರೂಪದ ಮೇಷ್ಟ್ರು ಇನ್ನಿಲ್ಲ ಎಂಬುದು ನಿಜಕ್ಕೂ ಸಾರಸ್ವತ ಲೋಕಕ್ಕೆ ಬರಸಿಡಿಲು!

– ಸಿ.ಎಸ್.ಭೀಮರಾಯ, ಲೇಖಕರು
ಆಂಗ್ಲ ಉಪನ್ಯಾಸಕರು, ಶಹಾಪುರ

9008438993

Related Articles

Leave a Reply

Your email address will not be published. Required fields are marked *

Back to top button