ಕಂಪ್ಯೂಟರ್ ಖರೀದಿಯಲ್ಲಿ ಅವ್ಯವಹಾರ: ತನಿಖೆಗೆ ಮಾಜಿ ಶಾಸಕ ಒತ್ತಾಯ

ಕಂಪ್ಯೂಟರ್ ಖರೀದಿಯಲ್ಲಿ ಅವ್ಯವಹಾರ: ತನಿಖೆಗೆ ಒತ್ತಾಯ
yadgiri, ಸುರಪುರ: ಹುಣಸಗಿ ತಾಲೂಕಿನ 18 ಗ್ರಾಮ ಪಂಚಾಯತಿಯಲ್ಲಿ 14 ಮತ್ತು 15ನೇ ಹಣಕಾಸು ಯೋಜನೆಯಲ್ಲಿ ಕಂಪ್ಯೂಟರ್ ಖರೀದಿ ಮತ್ತು ನಿರ್ವಹಣೆ ನೆಪದಲ್ಲಿ ವ್ಯಾಪಕ ಅವ್ಯವಹಾರ ನಡೆಸಿ ಅನುದಾನ ದುರುಪಯೋಗ ಪಡಿಸಿಕೊಂಡವರ ವಿರುದ್ಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕಂಪ್ಯೂಟರ್ ನಿರ್ವಹಣೆ ಮತ್ತು ಖರೀದಿಗಾಗಿ ಅಂದಾಜು ಕೋಟಿ ರೂ.ಗೂ ಅಧಿಕ ಮೊತ್ತದ ಅವ್ಯವಹಾರ ನಡೆದಿದೆ. ಈ ಪ್ರಕರಣದಲ್ಲಿ ಆಯಾ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಮತ್ತು ಕೋಳಿಹಾಳ ಗ್ರಾಮ ಪಂಚಾಯತ್ ಕಂಪ್ಯೂಟರ್ ಆಪರೇಟರ್ ಎಂದು ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ತಮ್ಮದೆ ಆದ ಏಜೆನ್ಸಿಗೆ ಹಣ ವರ್ಗಾಯಿಸಿದ್ದಾರೆ ಎಂಬುದು ದಾಖಲೆಗಳಿವೆ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಅಕ್ರಮಗಳಲ್ಲಿ ವಿಶೇಷವಾಗಿ ಕಂಪ್ಯೂಟರ್ ಆಪರೇಟರ್ ಯಾವುದೇ ರೀತಿಯ ಕಂಪ್ಯೂಟರ್‍ಗೆ ಸಂಬಂಧಿಸಿದ ಸಾಮಗ್ರಿಗಳನ್ನು ಖರೀದಿಸದೆ ಮತ್ತು ಅದರ ನಿರ್ವಹಣೆ ಮಾಡದೆ ತಮ್ಮದೇ ಆದ ಏಜೆನ್ಸಿಯ ಬಿಲ್‍ಗಳನ್ನು ಸೃಷ್ಟಿಸಿ ಅಧಿಕ ಮೊತ್ತದ ಸರ್ಕಾರದ ಧನವನ್ನು ಸಿಬ್ಬಂದಿಯ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗಿದೆ. ಬೈಚಬಾಳ, ಕೋಳಿಹಾಳ, ಮಾಳನೂರು, ಬರದೇವನಾಳ, ಜೋಗುಂಡಭಾವಿ ಮತ್ತಿತರ ಗ್ರಾಮ ಪಂಚಾಯತಿಗಳಲ್ಲಿ ಅವ್ಯವಹಾರದ ಬಗ್ಗೆ ಹುಣಸಗಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಈಗಾಗಲೇ ಸಾರ್ವಜನಿಕರು ದೂರನ್ನು ಸಲ್ಲಿಸಿದ್ದಾರೆ.
ಜಿಪಂ ಸಿಇಒ ಅವರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಖುದ್ದಾಗಿ ಪರಿಶೀಲಿಸಿ ಅವ್ಯವಹಾರದಲ್ಲಿ ಭಾಗಿಯಾದವರನ್ನು ಅಮಾನತುಗೊಳಿಸಬೇಕು. ದುರ್ಬಳಕೆ ಮಾಡಿದ ಸಂಪೂರ್ಣ ಅನುದಾನ ಮರಳಿ ಸರಕಾರದ ಬೊಕ್ಕಸಕ್ಕೆ ಪಾವತಿಸಬೇಕು ಎಂದು ಒತ್ತಾಯಿಸಿದ್ದಾರೆ.