ಶಹಾಪುರಃ ಕೆಪಿಎಸ್ ಬ್ಯಾಂಕ್ ಚುನಾವಣೆ
ಶಹಾಪುರ :ಕೃಷ್ಣ ಪಟ್ಟಣ ಸಹಕಾರ ಬ್ಯಾಂಕ್ ಚುನಾವಣೆ
ಹಿರೇಮಠ ಪೆನಲ್‍ಗೆ ಭರ್ಜರಿ ಜಯ
ಶಹಾಪುರಃ ನಗರದ ಪ್ರತಿಷ್ಠಿತ ಕೃಷ್ಣ ಪಟ್ಟಣ ಸಹಕಾರ ಬ್ಯಾಂಕ್‍ನ ಚುನಾವಣೆ ಫಲಿತಾಂಶ ಬುಧವಾರ ರಾತ್ರಿ 11ಗಂಟೆಗೆ ಹೊರಬಿದ್ದಿದೆ. 9 ಸಾಮಾನ್ಯ ಸ್ಥಾನಗಳಿಗಾಗಿ ನಡೆದ ಚುನಾವಣೆಯಲ್ಲಿ ಬಸವರಾಜ ಹಿರೇಮಠ ಬಣಕ್ಕೆ ಸಂಪೂರ್ಣ ಜಯ ದೊರೆತಂತಾಗಿದೆ.
ಒಟ್ಟು 15 ನಿರ್ದೇಶಕ ಸ್ಥಾನಗಳಲ್ಲಿ 6 ಜನ ಅವಿರೋಧವಾಗಿ ಆಯ್ಕೆಗೊಂಡಿದ್ದರು. ಅದರಲ್ಲಿ ಇಬ್ಬರು ಮಹಿಳೆಯರು, ಒಂದು ಎಸ್ ಸಿ ಒಂದು ಎಸ್ ಟಿ ಸೇರಿದಂತೆ ಹಿಂದುಳಿದ ವರ್ಗದ ಇಬ್ಬರು ಅವಿರೋಧ ಆಯ್ಕೆಗೊಂಡಿದ್ದರು. ಉಳಿದ 9 ಸಾಮಾನ್ಯ ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಿತು.
ಅವಿರೋಧವಾಗಿ ಆಯ್ಕೆಗೊಂಡ 6 ಅಭ್ಯರ್ಥಿಗಳ ಹೆಸರು ಇಂತಿದೆ.
ಶರಣಗೌಡ ಜಿ.ಕಟ್ಟಿಮನಿ, ಮನೋಹರ ಅಲಬನೂರ, ಮಹ್ಮದ್ ಹಸನ್ (ಹಾಜಿ ಭಾಯಿ), ಮಲ್ಲಿಕಾರ್ಜುನ ಎಸ್ ದೊರೆ, (ಯಕ್ಷಿಂತಿ), ವಿಮಲಾ ಆರ್ ಕಲಬುರ್ಗಿ, ಕಲಾವತಿ ವಿ.ಕೋನೇರ ಅವಿರೋಧ ಆಯ್ಕೆಯಾಗಿದ್ದಾರೆ.
ಇನ್ನುಳಿದ 9 ಸಾಮಾನ್ಯ ಸ್ಥಾನಕ್ಕೆ ಬುಧವಾರ ನಡೆದ ಮತಾದನ ಪ್ರಕ್ರಿಯೇಯಲ್ಲಿ 2972 ಅರ್ಹ ಸದಸ್ಯರಲ್ಲಿ 1432ಸದಸ್ಯರು ಮತದಾನ ಮಾಡಿದ್ದರು. ಸಾಯಂಕಾಲ 5ಗಂಟೆಯ ನಂತರ ಪ್ರಾರಂಭವಾದ ಮತ ಎಣಿಕೆ ರಾತ್ರಿ 11 ಗಂಟೆಯ ಸುಮಾರಿಗೆ ಮುಕ್ತಾಯಗೊಂಡಿತು. ಬಸವರಾಜ ಹಿರೇಮಠ ಪೆನಲ್ ಎಂದೇ ಗುರುತಿಸಿಕೊಂಡಿದ್ದ 9 ಜನರು ಅದ್ಧೂರಿ ಜಯ ಗಳಿಸಿದ್ದಾರೆ.
1432ಚಲಾಯಿತ ಮತಗಳಲ್ಲಿ ಬಸವರಾಜ ಹಿರೇಮಠ (1065), ಬಸವರಾಜ ಹೇರುಂಡಿ (1096), ಘೇವರಚಂದ ಜೈನ್ (1017), ಚೆನ್ನಪ್ಪಗೌಡ ಪಾಟೀಲ ಶಿರವಾಳ(1119), ಗೂಳಪ್ಪ ಬಾಳಿ (1110), ಮಲ್ಲಿಕಾರ್ಜುನ ಬುಕ್ಕಿಷ್ಠಗಾರ (1023), ಬಸವರಾಜ ಆನೆಗುಂದಿ (1059), ಮಾಂಗೀಲಾಲ್ ಜೈನ್ (943), ಮಲ್ಲಿಕಾರ್ಜುನ ಮುಡಬೂಳ (995) ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ರುದ್ರಗೌಡ ಪಾಟೀಲ ರಾತ್ರಿ 11 ಗಂಟೆಯ ಸುಮಾರಿಗೆ ಘೋಷಿಸಿದ್ದಾರೆ.
ಮತಗಟ್ಟೆಯ ಎದುರುಗಡೆ ತಡ ರಾತ್ರಿಯವರೆಗೂ ಫಲಿತಾಂಶಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳು ಫಲಿತಾಂಶ ಹೊರಬೀಳುತ್ತಿದ್ದಂತೆ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಎದುರಾಳಿಗಳಾದ ಬಸವರಾಜ ಕೆ.ಅರುಣಿ (503). ಅಶೋಕ ಕರೆಗಾರ (333), ಚಂದ್ರಶೇಖರ ಯಾಳಗಿ (244), ಬಸವರಾಜ ಶಿರಡ್ಡಿ (134), ಸಿದ್ದಯ್ಯಸ್ವಾಮಿ ಕೋರವಾರ (103) ಮತಗಳಿಗೆ ತೃಪ್ತಿ ಪಡಬೇಕಾಯಿತು.
ಹಲವು ದಿನಗಳಿಂದ ನಗರದಲ್ಲಿ ಈ ಚುನಾವಣೆ ಬ್ಯಾಂಕ್‍ನ ಸದಸ್ಯರಲ್ಲಿ ಕುತೂಹಲ ಮೂಡಿಸಿತ್ತು. ಬ್ಯಾಂಕಿನ ಆಡಳಿತಾತ್ಮಕ ವಿಷಯದಲ್ಲಿ ಹಲವಾರು ಆರೋಪ ಪ್ರತ್ಯಾರೋಪಗಳು ಕೇಳಿ ಬಂದಿದ್ದವು. ಆದರೆ ಚುನಾವಣೆ ಮಾತ್ರ ಶಾಂತಿಯುತವಾಗಿ ನಡೆಯುವ ಮೂಲಕ ಮಾದರಿ ಎನಿಸಿತು.
1997ರಲ್ಲಿ ಬ್ಯಾಂಕ್‍ನ ಚುನಾಯಿತ ನಿರ್ದೇಶಕನಾಗಿ ಆಯ್ಕೆಯಾಗಿದ್ದ ಬಸವರಾಜ ಹಿರೇಮಠ ಅವರನ್ನು 2002ರಿಂದ ಅಧ್ಯಕ್ಷರನ್ನಾಗಿ ಸುಮಾರು 18ವರ್ಷಗಳಿಂದ ಇಂದಿನವರೆಗೂ ಮುನ್ನಡೆಸಿಕೊಂಡು ಬಂದಿದ್ದಾರೆ. ಇದು ಹಲವು ಸದಸ್ಯರಲ್ಲಿ ತಳಮಳವನ್ನುಂಟು ಮಾಡಿತ್ತು. ಆದಾಗ್ಯೂ ಮತ್ತೆ ಈ ಬಾರಿಯ ಚುನಾವಣೆಯಲ್ಲಿ ಬಸವರಾಜ ಹಿರೇಮಠರ ಬಣಕ್ಕೆ ಜನತೆ ಮತದಾನ ಮಾಡುವ ಮೂಲಕ ಅವರಿಗೆ ಬೆಂಬಲ ನೀಡಿದ್ದಾರೆ. ಮತ್ತೊಮ್ಮೆ ಅಧ್ಯಕ್ಷರಾಗಿ ಹಿರೇಮಠ ನೇಮಕಗೊಳ್ಳುವ ಸಾಧ್ಯತೆಗಳು ಹೆಚ್ಚಿವೆ.
9 ಜನರಲ್ಲಿ ಅತ್ಯಧಿಕ ಮತ ಪಡೆದ ಚನ್ನಪ್ಪಗೌಡ ಶಿರವಾಳ
ಇದೇ ಕೃಷ್ಣ ಪಟ್ಟಣ ಸಹಕಾರಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಕೇವಲ 1 ಮತದಿಂದ ಗೆಲುವು ಸಾಧಿಸಿದ್ದ ಚನ್ನಪ್ಪಗೌಡ ಶಿರವಾಳ, ಈ ಬಾರಿ ಸ್ಪರ್ಧೆಯಲ್ಲಿದ್ದ ಎಲ್ಲರಿಗಿಂತ ಅತ್ಯಧಿಕ ಮತ ಪಡೆಯುವ ಮೂಲಕ ಪ್ರಥಮ ಸ್ಥಾನ ಕಾಯ್ದುಕೊಂಡಿದ್ದಾರೆ.
ಕಳೆದ ಚುನಾವಣೆಯಲ್ಲಿ ಒಂದೇ ಒಂದು ಮತದಿಂದ ಗೆಲುವ ಸಾಧಿಸಿದ್ದ ಇವರು, ಈ ಬಾರಿ ಗೆಲುವು ಸಾಧಿಸಿದ ಎಲ್ಲಾ ಅಭ್ಯರ್ಥಿಗಳಿಗಿಂತ ಅತಿ ಹೆಚ್ಚಿನ ಮತಗಳನ್ನು ಪಡೆಯುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಕಳೆದ ಐದು ವರ್ಷದ ಅವಧಿಯಲ್ಲಿ ನಿರ್ದೇಶಕರಾಗಿ ಬ್ಯಾಂಕ್ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿರುವದು ಈ ಬಾರಿನ ಅಭೂತಪೂರ್ವ ಗೆಲುವಿಗೆ ಕಾರಣವಾಗಿದೆ ಎನ್ನಲಾಗಿದೆ.
ಕಾರ್ಯಕರ್ತರು ಸ್ನೇಹಿತರು ಮತದಾರರ ಆಶೀರ್ವಾದದಿಂದ ಈ ಬಾರಿ ಅತ್ಯಧಿಕ ಮತಗಳನ್ನು ಪಡೆದಿರುವದು ಸಂತಸ ತಂದಿದೆ ಎಂದು ವಿಜೇತ ಅಭ್ಯರ್ಥಿ ಚನ್ನಪ್ಪಗೌಡ ಶಿರವಾಳ ಸಂತಸ ವ್ಯಕ್ತಪಡಿಸಿದ್ದಾರೆ.