ಸ್ಮಶಾನದಿಂದಲೇ ಹೆಸರಾದ ಸುರಪುರದ ರಾಜನಕೋಳೂರು.!
ಬುಡ್ಡರ ಮನೆ, ಶಿಲಾ ಸಮಾಧಿ ಇತಿಹಾಸ ಕುರಿತು ಪಾಟೀಲ್ ಬರಹ
ಒಂದು ಸ್ಥಳವನ್ನು ಅಲ್ಲಿನ ಪರಿಸರದಿಂದ, ದೇವಸ್ಥಾನಗಳು, ಮಠಗಳು, ಜಾತ್ರೆಗಳು, ಕೋಟೆ ಕೊತ್ತಲುಗಳು, ರಾಜಮಹಾರಾಜರು ಹೀಗೆ ನಾನಾ ರೀತಿಯಿಂದ ಗುರುತಿಸಬಹುದು. ಉದಾಹರಣೆಗೆ ಮೈಸೂರು-ಅರಮನೆ, ಬೆಂಗಳೂರು-ವಿಧಾನಸೌಧ, ಶಿವಮೊಗ್ಗ-ಮಲೆನಾಡು, ಚಿತ್ರದುರ್ಗ-ಕೋಟೆ, ಧಾರವಾಡ-ಪೇಡಾ, ವಿಜಯಪುರ-ಗೋಲಗುಂಬಜ್, ಕಲಬುರ್ಗಿ-ಶರಣಬಸವೇಶ್ವರ, ಸುರಪುರ-ದೊರೆಗಳು, ಕೆಂಭಾವಿ-ಭೋಗಣ್ಣ, ಮುದನೂರು-ದಾಸಿಮಯ್ಯ, ಹೀಗೆ ಒಂದೊಂದು ಸ್ಥಳವನ್ನು ಒಂದೊಂದು ಬಗೆಯಾಗಿ ಅದರ ವೈವಿಧ್ಯತೆಯಿಂದ ಗುರುತಿಸಬಹುದು.
ಅದೇ ರೀತಿ ಸ್ಮಶಾನದಲ್ಲಿನ ಸಮಾಧಿಗಳಿಂದಲೂ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ಸ್ಥಳವೆಂದರೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಹುಣಸಗಿಯಿಂದ ಸು.10 ಕಿ.ಮೀ. ಅಂತರದಲ್ಲಿರುವ ರಾಜನಕೋಳೂರು ಗ್ರಾಮ. ಕೇವಲ ಸಮಾಧಿಗಳಿಂದಷ್ಟೇ ಅಲ್ಲದೆ ನಿಜಾಮ್ ಸರಕಾರದ ವಿರುದ್ಧ, ರಜಾಕಾರರ ಅನ್ಯಾಯ, ಅತ್ಯಾಚಾರಗಳ ವಿರುದ್ಧ ಸೆಟೆದು ನಿಂತು ಕೊನೆಗೆ ತನ್ನ ಜೀವವನ್ನೇ ಪಣಕ್ಕಿಟ್ಟು ಹೋರಾಡಿ ಮಡಿದ ಕೆಚ್ಚೆದೆಯ ಕೇಸರಿ ದಿ.ಶ್ರೀವಿರೂಪಾಕ್ಷಪ್ಪಗೌಡರಿಂದಲೂ ಈ ಗ್ರಾಮವನ್ನು ಗುರುತಿಸುತ್ತಾರೆ.
ಸ್ಮಶಾನದಲ್ಲಿರುವ ಸಮಾಧಿಗಳಿಂದ ಗುರುತಿಸಿಕೊಳ್ಳುವಲ್ಲಿ ಅಂತಹ ವಿಶೇಷವೇನಿದೆ ಎಂದೆನಿಸಬಹುದು, ಆದರೆ ಇಲ್ಲಿನ ಸಮಾಧಿ ಸಾವಿರಾರು ವರ್ಷಗಳಿಂದ ಇರುವುದೇ ವಿಶೇಷ. ಇವುಗಳನ್ನು ಬುಡ್ಡರ ಮನೆಗಳೆಂದು, ಡಾಲ್ಮೆನ್ಗಳೆಂದೂ ಕರೆಯುವರು.
ಹುಣಸಗಿ ಮುಖ್ಯನಾಲೆ (ಮೇನ್ ಕೆನಾಲ್) ಬಳಿಯಲ್ಲಿ ಸುಮಾರು 4 ಎಕರೆ ಪ್ರದೇಶದಲ್ಲಿ ನವ ಶಿಲಾಯುಗ ಸಂಸ್ಕøತಿಯ ನೆಲೆಗಳಾದ ಹುಣಸಗಿ, ಕೊಡೇಕಲ್, ಬೂದಿಹಾಳ ಪರಿಸರದಲ್ಲಿ ಈ ಸಂಸ್ಕೃತಿ ಮುಂದುವರಿದ ಬೃಹತ್ ಶಿಲಾಯುಗ ಸಂಸ್ಕೃತಿ ನೂರಾರು ಶಿಲಾ ಸಮಾಧಿ ಒಂದೆಡೆ ಕಾಣುತ್ತೇವೆ.
ಇಲ್ಲಿರುವ ಶಿಲಾ ಸಮಾಧಿಗಳು ರಾಜ ಮಹಾರಾಜರದ್ದಲ್ಲ, ಸೈನಿಕರದ್ದಲ್ಲ ನಾಗರಿಕ ಪ್ರಪಂಚಕ್ಕೆ ಕಾಲಿಡುವ ಮುಂಚಿನ ಮಾನವರದ್ದಾಗಿದೆ. ಸತ್ತವರನ್ನು ಪೂರ್ವ ಅಥವಾ ಉತ್ತರಕ್ಕೆ ತಲೆಯಿಟ್ಟು ಹೂಳುತ್ತಿದ್ದರು. ಮಕ್ಕಳನ್ನು ಮಡಿಕೆಗಳಲ್ಲಿ ಹೂಳುತ್ತಿದ್ದರು. ಧಾನ್ಯ, ಪಾತ್ರೆ, ಆಯುಧ ಮುಂತಾದ ನಿತ್ಯೋಪಯೋಗಿ ವಸ್ತುಗಳನ್ನೂ ಸತ್ತವನ ಜೊತೆ ಹೂಳುತ್ತಿದ್ದರು. ಇದರಿಂದ ಸತ್ತ ನಂತರದಲ್ಲಿ ಮತ್ತೆ ಹುಟ್ಟಿ ಬರುವ ಪುನರ್ಜನ್ಮದಲ್ಲಿ ನಂಬಿಕೆ ಹೊಂದಿದ್ದರೆಂದು ತಿಳಿಯುತ್ತದೆ.
ಸದ್ಯ ಈ ಸ್ಥಳವು ಪುರಾತತ್ವ ಇಲಾಖೆ(ಎ.ಎಸ್.ಐ) ಸುಪರ್ದಿಯಲ್ಲಿದ್ದು, ಸುತ್ತಲೂ ತಂತಿ ಬೇಲಿಯನ್ನು ಹಾಕಿ ಸುರಕ್ಷಿತವಾಗಿಡಲು ಕ್ರಮ ಕೈಗೊಂಡಿದೆ. ನೂರಾರು ಶಿಲಾಸಮಾಧಿಗಳಲ್ಲಿ 30 ಕ್ಕೂ ಹೆಚ್ಚು ಶಿಲಾಸಮಾಧಿಗಳನ್ನು ಮಾತ್ರ ನಾವೀಗ ಕಾಣುತ್ತೇವೆ. ಉಳಿದವು ಕಾಲಾನುಕಾಲಕ್ಕೆ ನೈಸರ್ಗಿಕ ವಿಕೋಪವಿರಬಹುದು, ಮಾನವನ ಅಜ್ಞಾನದಿಂದಲೂ ಹಾಳಾಗಿರುವ ಸಾಧ್ಯತೆ ಇದೆ.
ದೇವಸ್ಥಾನ, ಮನೆಗಳ ನಿರ್ಮಾಣದಲ್ಲಿ ವಾಸ್ತುವನ್ನು ಪರಿಗಣಿಸಿ ನಿರ್ಮಿಸುವದು ವಾಡಿಕೆ. ಅದೇ ತರಹ ಸಾವಿರಾರು ವರ್ಷಗಳ ಹಿಂದಿನ ಶಿಲಾ ಸಮಾಧಿಗಳ ನಿರ್ಮಾಣದಲ್ಲಿಯೂ ಸಹ ವಾಸ್ತು ವೈವಿಧ್ಯತೆಯನ್ನು ತಜ್ಞರು ಗುರುತಿಸಿದ್ದಾರೆ. ಈ ಕಟ್ಟಡದ ವಿನ್ಯಾಸವು ವೈವಿಧ್ಯತೆಯಿಂದ ಕೂಡಿದೆ. ಇವುಗಳನ್ನು ದೇವಸ್ಥಾನಗಳಿಗಿಂತ ಪೂರ್ವದ ಅತ್ಯಂತ ಪ್ರಾಚೀನ ವಾಸ್ತು ನಿರ್ಮಿತಿ ಕಟ್ಟಡಗಳೆಂದು ಗುರುತಿಸಲಾಗಿದೆ.
ಕರ್ನಾಟಕದಲ್ಲಿ ಕನಿಷ್ಠ ಏಳು ಪ್ರಕಾರದ ನಿರ್ಮಿತಿಗಳನ್ನು ವಿಂಗಡಿಸಬಹುದು..!
1) ಹಾದಿ ಕೋಣೆಗಳು. 2) ಕಂಡಿ ಕೋಣೆಗಳು. 3) ನಿಲಸುಕಲ್ಲುಗಳು. 4) ಕಲ್ಲು ವೃತ್ತಗಳು. 5) ಚಿಕ್ಕಕಲ್ಲುಗಳಿಂದ ತುಂಬಿದ ಕಲ್ಲು ವೃತ್ತಗಳು. 6) ವರ್ತುಳ ಗುಡ್ಡೆಗಳು. 7) ಶವಕುಣಿಗಳು. ಇವುಗಳಲ್ಲಿ ಹಾದಿ ಕೋಣೆಗಳು ಹಾಗೂ ಕಂಡಿ ಕೋಣೆಗಳ ವಿನ್ಯಾಸದ ನಿರ್ಮಿತಿಗಳನ್ನು ರಾಜನಕೋಳೂರಿನಲ್ಲಿ ಕಾಣಬಹುದಾಗಿದೆ.
ಹಾದಿ ಕೋಣೆಗಳು: ಹಾದಿ ಕೋಣೆಗಳು ಒಂದು ಮೇಜಿನಂತೆ ಚತುರಸ್ರಾಕಾರದಲ್ಲಿದ್ದು, ನಿರ್ಮಿತಿಯು ನೆಲದ ಮೇಲೆಯೇ, ಇಲ್ಲವೆ ಭೂಮಿಯಲ್ಲಿಯೂ ದೊಡ್ಡ-ದೊಡ್ಡ ಚಪ್ಪಡಿಕಲ್ಲನ್ನು ಒಂದಕ್ಕೊಂದು ಆನಿಸಿ ಊಧ್ರ್ವವಾಗಿ ನಿಲ್ಲಿಸಲಾಗಿರುತ್ತದೆ.
ಮುಂಬದಿಯಲ್ಲಿ ಎರಡು ಕಲ್ಲುಗಳ್ನು ಮಧ್ಯದಲ್ಲಿ ಅಂತರವಿಟ್ಟು ಬದಿಗಳ ಕಲ್ಲುಗಳಿಗೆ ಆನಿಸಿ ಹಿಂದಿನ ಕಲ್ಲುಗಳ ಸಮಾನಾಂತರವಾಗಿ ಇರುತ್ತವೆ. ಈ ಕೋಣೆಗಳ ತಲವಿನ್ಯಾಸವು ಸ್ವಲ್ಪಮಟ್ಟಿಗೆ ದ್ವಿಬಾಹು ಸಮಾನಾಂತರ ಬಾಹುಗಳ ಚತುರಸ್ರಾಕಾರದಲ್ಲಿದೆ.
ಕಂಡಿ ಕೋಣೆಗಳು : ಕಂಡಿ ಕೋಣೆಗಳು ಸಹ ಒಂದೊಂದು ಚಪ್ಪಡಿಕಲ್ಲನ್ನು ಒಂದೊಂದು ಬದಿಯಲ್ಲಿ ಒಂದಕ್ಕೊಂದು ಆನಿಸಿಕೊಂಡಿರುವಂತೆ ಪ್ರದಕ್ಷಿಣೆ ರೀತಿಯಲ್ಲಿ ನಿಲ್ಲಿಸಲಾಗಿರುತ್ತದೆ. ಇವುಗಳ ಮೇಲೆ ಅಡ್ಡಲಾಗಿ ಮತ್ತೊಂದು ಚಪ್ಪಡಿಕಲ್ಲನ್ನು ಇಡಲಾಗುತ್ತದೆ. ಒಂದು ಬದಿಯ ಕಲ್ಲಿನಲ್ಲಿ ಮಧ್ಯದಲ್ಲಿಯೂ ಒಂದು ತೂತು ಮಾಡಲಾಗುತ್ತಿತ್ತು. ಕೋಣೆಯ ಸುತ್ತಲೂ ವರ್ತುಳಾಕಾರದಲ್ಲಿ ಮೇಲಿನ ಭಾಗವು ನಿಧಾನವಾಗಿ ಒಳಬಾಗಿ ಛತ್ತಿನ ಚಪ್ಪಡಿಗೆ ಮುಟ್ಟುವಂತೆ ತುಂಡುಕಲ್ಲಿನ ಗೋಡೆಯನ್ನು ನಿರ್ಮಿಸಲಾಗುತ್ತದೆ.
ಇಲ್ಲಿನ ಶಿಲಾ ಸಮಾಧಿಗಳು ಸಾವಿರಾರು ವರ್ಷಗಳಿಂದ ಪ್ರಕೃತಿ ವಿಕೋಪಗಳ ಹೊಡೆತಕ್ಕೆ ಹಾಳಾಗಿದ್ದರೂ, ಉಳಿದ ಶಿಲಾ ಸಮಾಧಿಗಳಿಂದ ನಮ್ಮ ಭವಿಷ್ಯದ ಜನರಿಗೆ ಅವುಗಳ ಮಹತ್ವ ತಿಳಿಯುವಂತಾಗಬೇಕು. ರಾಜನಕೋಳೂರು ಗ್ರಾಮವು ಪ್ರಾಗಿತಿಹಾಸವಷ್ಟೇ ಅಲ್ಲದೆ ಐತಿಹಾಸಿಕವಾಗಿಯೂ ಮಹತ್ವದ ನೆಲೆ ಎಂದು ಗ್ರಾಮದ ಶಂಕರನಾರಾಯಣ ಗುಡಿಯಲ್ಲಿ ದೊರೆತ 2 ಶಿಲಾಶಾಸನಗಳಿಂದ ಗುರುತಿಸಬಹುದು. ಶಂಕರನಾರಾಯಣ ಗುಡಿಯಲ್ಲಿರುವ 2 ಶಿಲಾಶಾಸನಗಳನ್ನು ಒಳಗಿನ ಗೋಡೆಯಲ್ಲಿ ಜೋಡಿಸಲಾಗಿದೆ.
ಒಂದು ಶಾಸನವು ಕ್ರಿ.ಶ.1091 ರ ಕಾಲದ್ದಾದರೆ, ಮತ್ತೊಂದು ಶಾಸನದಲ್ಲಿರುವ ಒಂದರಿಂದ 28ನೇ ಸಾಲಿನ ಶಾಸನವು ಕ್ರಿ.ಶ.1097ರ ಕಾಲದ್ದಾದರೆ 29ನೇ ಸಾಲಿನಿಂದ ಉಳಿದ ಸಾಲುಗಳು ಕ್ರಿ.ಶ. 1214ರ ಕಾಲದ್ದಾಗಿದೆ ಎಂದು ನಾಡಿನ ಹಿರಿಯ ಶಾಸನ ತಜ್ಞೆ ಶ್ರೀಮತಿ ಹನುಮಾಕ್ಷಿ ಗೋಗಿ ಹೇಳುತ್ತಾರೆ.
ಕ್ರಿ.ಶ.1091ರ ಶಾಸನವು ಚಾಲುಕ್ಯ ಚಕ್ರವರ್ತಿ 6ನೇ ವಿಕ್ರಮಾದಿತ್ಯನ ಕಾಲದ್ದಾಗಿದ್ದು, ಆತನ ಪಿರಿಯರಸಿ ಚಂದಲಮಹಾದೇವಿಯನ್ನು ಸಕಲ ಬಿರುದುಗಳಿಂದ ವರ್ಣಿಸಿದೆ. ಈಕೆ ಭತ್ತಗ್ರಾಮ ರಾಜನಕೋಳೂರಿನಲ್ಲಿಯ ಬ್ರಹ್ಮಪುರಿಯ ಬ್ರಾಹ್ಮಣರಿಗೆ ಕ್ರಿ.ಶ.15-10-1091ರಂದು ಭೂ ನಿವೇಶನ ಬಿಟ್ಟ ದತ್ತಿಯನ್ನು ವಿವರಿಸುತ್ತದೆ. ಭತ್ತಗ್ರಾಮವೆಂದರೆ ಸ್ವಂತ ಉಪಭೋಗಕ್ಕೆ ಪಡೆದ ಗ್ರಾಮ ಎಂದರ್ಥ. ಇದಕ್ಕೆ ಇನಾಮು ಭೂಮಿ, ಜಹಗೀರು ಗ್ರಾಮ ಎಂದೂ ಕರೆಯುವರು.
ಈ ಭತ್ತ ಗ್ರಾಮಗಳನ್ನು ಉಪಯೋಗಿಸುವವರು ಚಕ್ರವರ್ತಿಗಳ ರಾಣಿಯರೇ ಹೆಚ್ಚು ಎಂಬುದಕ್ಕೆ ನಮಗೆ ಹಲವು ಶಾಸನಗಳು ದೊರಕುತ್ತವೆ. ರಾಜನಕೋಳೂರಿನಲ್ಲಿಯೂ ವಿಕ್ರಮಾದಿತ್ಯನ ಪಿರಿಯರಸಿ ಚಂದಲಮಹಾದೇವಿ ಈ ಭತ್ತಗ್ರಾ,ಮದಲ್ಲಿ ಕೆಲಕಾಲ ವಾಸಿಸಿದ್ದಳೆಂದು ಹೇಳಬಹುದು.
ಹಾಗೆಯೇ ಶಾಸನೋಕ್ತ ಬ್ರಹ್ಮಪುರಿಯ ಬ್ರಾಹ್ಮಣರಿಗೆ ಭೂದತ್ತಿಯನ್ನು ಬಿಟ್ಟುದುದನ್ನು ತಿಳಿಸುತ್ತದೆ. ನಗರಗಳು ಅಥವಾ ಪಟ್ಟಣದಲ್ಲಿ ಬ್ರಾಹ್ಮಣ ವಿದ್ವಾಂಸರು ವಾಸಿಸುವ ಪ್ರದೇಶವೇ ಬ್ರಹ್ಮಪುರಿ. ಅಗ್ರಹಾರಗಳಲ್ಲೂ ಬ್ರಾಹ್ಮಣರಿರುತ್ತಿದ್ದರು. ಅಗ್ರಹಾರಗಳು ಊರುಗಳೆಂದು ಪರಿಗಣಿತವಾಗಿದ್ದವು. ಆದರೆ ಬ್ರಹ್ಮಪುರಿಗಳು ಪಟ್ಟಣದ ಭಾಗ ಎನಿಸಿದ್ದವು.
ಅಗ್ರಹಾರದ ಬ್ರಾಹ್ಮಣರು ಊರಿನ ಮುಖ್ಯಸ್ಥರಾಗಿದ್ದರೆ, ಬ್ರಹ್ಮಪುರಿಯ ಬ್ರಾಹ್ಮಣರು ಇತರ ಪಂಗಡದ ಜನರಂತೆ ಸಾಮಾನ್ಯ ಜನರಷ್ಟೆ. ಅಗ್ರಹಾರದ ಬ್ರಾಹ್ಮಣರಿಗಿದ್ದ ಮುಖ್ಯಸ್ಥಿಕೆ ಬ್ರಹ್ಮಪುರಿ ಬ್ರಾಹ್ಮಣರಿಗಿರಲಿಲ್ಲ. ಹೀಗಾಗಿ ಶಾಸನೋಕ್ತ ಬ್ರಹ್ಮಪುರಿಯು ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಈಗಿನ ರಾಜನಕೋಳೂರು ಗ್ರಾಮವು ಮುಖ್ಯ ಪಟ್ಟಣವಾಗಿತ್ತೆಂದು ತಿಳಿಯುತ್ತದೆ.
ಇದೇ ದೇವಸ್ಥಾನದ ಮತ್ತೊಂದು ಶಿಲಾಶಾಸನದ ಒಂದರಿಂದ 28ನೇ ಸಾಲಿನಲ್ಲಿರುವ ವಿಷಯವು ಕ್ರಿ.ಶ. 1097ರ ಕಾಲದ್ದಾಗಿದೆ. ಕಲ್ಯಾಣ ಚಾಲುಕ್ಯ ಚಕ್ರವರ್ತಿ ತ್ರಿಭುವನಮಲ್ಲನ ಪಿರಿಯರಸಿ ಚಂದಲಮಹಾದೇವಿಯು ಭತ್ತಗ್ರಾಮ ರಾಜನಕೋಳೂರಿನ ಶಂಕರನಾರಾಯಣ ದೇವರಿಗೆ ನೆಲ,ತೋಟ,ಗಾಣ,ಪೂಜಾ ನಿವೇಶನಗಳಿಗಾಗಿ ದತ್ತಿ ನೀಡಿದುದನ್ನು ಉಲ್ಲೇಖಿಸಿದೆ.
ಇದೇ ಶಾಸನದ ಮತ್ತೊಂದು ಭಾಗ ಅಂದರೆ 29ನೇ ಸಾಲಿನಿಂದ ಪ್ರಾರಂಭವಾಗುವ ಕ್ರಿ.ಶ. 1214ರ ಶಾಸನವು ಯಾದವರ ಅರಸು 2ನೇ ಸಿಂಘಣನ ಕಾಲದ್ದಾಗಿದೆ. ಅರವತ್ತೊಕ್ಕಲು, ಮುಮ್ಮರಿದಂಡರು, ವ್ಯಾಹರರು, ಹನ್ನವಣಿಗರೆಲ್ಲರೂ ಸೇರಿ ಶಂಕರನಾರಾಯಣ ದೇವರಿಗೆ ಬಿಟ್ಟ ಸುಂಕದತ್ತಿಯನ್ನು ಹೆಸರಿಸಿದೆ.
ಶಾಸನೋಕ್ತ ಅರವತ್ತೊಕ್ಕಲು ಎಂದರೆ ಒಕ್ಕಲುತನ ಮಾಡುವ ರೈತ ಸಂಘ ಎಂದರ್ಥ.
ಈ ಸಂಘದ ಸದಸ್ಯರ ಸಂಖ್ಯೆ ಸಾಂಪ್ರದಾಯಿಕವಾಗಿ 60 ಎಂದು ಪರಿಗಣಿಸಲ್ಪಟ್ಟಿತ್ತು. ಗ್ರಾಮದಲ್ಲಿ ಒಕ್ಕಲುತನ ಮಾಡುವವರು ಎಷ್ಟೇ ಇದ್ದರೂ ಈ ಸಂಘಕ್ಕೆ ಅರವತ್ತೊಕ್ಕಲು ಎಂದೇ ಕರೆಯುವರು. ಈ ಸಂಘಕ್ಕೆ ಊರೊಡೆಯ ಊರಗೌಡ ಮುಖ್ಯಸ್ಥನಾಗಿರುತ್ತಾನೆ.
ಪ್ರಸ್ತುತ ಶಾಸನದಲ್ಲಿ ಈ ಅರವತ್ತೊಕ್ಕಲಿನ 19 ಜನ ರೈತರ ಹೆಸರನ್ನು ಇಲ್ಲಿ ದಾಖಲಿಸಿರುವದು ಗಮನಾರ್ಹ ಸಂಗತಿ. ಯಾದಗಿರಿ ಜಿಲ್ಲೆಯಲ್ಲಿ ಈವರೆಗೆ ದೊರೆತಿರುವ ಯಾವ ಶಾಸನದಲ್ಲೂ ಇಷ್ಟು ಜನ ರೈತರ ಹೆಸರನ್ನು ಎಲ್ಲಿಯೂ ಉಲ್ಲೇಖಿಸಿಲ್ಲ. ಆ ಕಾಲದಲ್ಲೇ ರೈತರು ಸಂಘಟಿತರಾಗಿದ್ದರೆಂದು ತಿಳಿಯುತ್ತದೆ. ಇಂತಹ ಅಪರೂಪದ ಶಿಲಾಶಾಸನವನ್ನು ಸುರಕ್ಷಿತವಾಗಿ ಕಾಪಾಡಿಕೊಂಡು ಬರುವ ಜವಾಬ್ದಾರಿ ಅಲ್ಲಿನ ನಾಗರಿಕರದ್ದಾಗಿದೆ.
ಬ್ರಿಟಿಷರಿಂದ ಮುಕ್ತಿ ಪಡೆದು ಸ್ವಾತಂತ್ರ್ಯ ಹೊಂದಿದ ಭಾರತದ ಒಕ್ಕೂಟಕ್ಕೆ ಸೇರದೆ, ಪ್ರತ್ಯೇಕ ರಾಷ್ಟ್ರ ಹೊಂದಲು ಇಚ್ಛಿಸಿದ ನಿಜಾಮ್ ಸರಕಾರದ ಗಡಿಗ್ರಾಮ ರಾಜನಕೋಳೂರಿನ ಕೆಚ್ಚೆದೆಯ ಕೇಸರಿ ದಿ.ಶ್ರೀ.ವಿರೂಪಾಕ್ಷಪ್ಪಗೌಡರ ಬಲಿದಾನವನ್ನು ಎಂದಿಗೂ ಮರೆಯಲಾಗದು.
ನಿಜಾಮ್ ಸರಕಾರದಲ್ಲಿದ್ದ ಖಾಸಿಂ ರಜ್ವಿ ವಿರುದ್ಧ ತೊಡೆತಟ್ಟಿದ ಅನೇಕ ಯುವ ಕ್ರಾಂತಿಕಾರಿ ಹೋರಾಟಗಾರರಲ್ಲಿ 23ರ ಹರೆಯದ ವಿರೂಪಾಕ್ಷಪ್ಪಗೌಡರು ಅಗ್ರಗಣ್ಯರು. ಆರ್ಥಿಕವಾಗಿ ಸ್ಥಿತಿವಂತರಾಗಿದ್ದ ವಿರೂಪಾಕ್ಷಪ್ಪಗೌಡರು ಭಾರತ ಸರಕಾರದ ವ್ಯಾಪ್ತಿಯಲ್ಲಿದ್ದ ವಿಜಯಪುರ ಜಿಲ್ಲೆಯ ಗಡಿಗ್ರಾಮ ಸಾಲವಾಡಗಿಯಲ್ಲಿದ್ದುಕೊಂಡು ನಿಜಾಮ್ ಸರಕಾರದ ವಿರುದ್ಧ ಹೋರಾಟದ ರೂಪುರೇಷೆ ಸಿದ್ಧಪಡಿಸುತ್ತಿದ್ದರು.
ನಿಜಾಮ್ ಸರಕಾರದ ಕೆಂಗಣ್ಣಿಗೆ ಗುರಿಯಾದ ವಿರೂಪಾಕ್ಷಪ್ಪಗೌಡರನ್ನು ಅಮಾನವೀಯವಾಗಿ ಹತ್ಯೆ ಮಾಡಿ ಕೊಂದರು. ಇಂತಹ ದಿಟ್ಟ ಕೆಚ್ಚೆದೆಯ ಹೋರಾಟಗಾರನನ್ನು ಸ್ಮರಿಸಲು ರಾಜನಕೋಳೂರಿನಲ್ಲಿ ಇವರ ಪ್ರತಿಮೆ ಸ್ಥಾಪಿಸಿ ಗೌರವಿಸಲಾಗಿದೆ. ಹಾಗೆಯೇ ರಾಜನಕೋಳೂರಿನಲ್ಲಿರುವ ನಾರಾಯಣಪುರ ಜಲಾಶಯದ ಸುರಂಗ ಮಾರ್ಗದ ಕಾಲುವೆಗೆ ವಿರೂಪಾಕ್ಷಪ್ಪಗೌಡರ ಹೆಸರನ್ನಿಟ್ಟು ಸ್ಮರಿಸುತ್ತಿದೆ. ಒಂದು ಊರನ್ನು ನೆನೆಸಿಕೊಳ್ಳಲು ಇದಕ್ಕಿಂತ ಇನ್ನೇನು ಬೇಕು. ಪ್ರಾಗಿತಿಹಾಸ, ಇತಿಹಾಸ, ಅಪ್ರತಿಮ ಹೋರಾಟ ಎಲ್ಲವನ್ನು ರಾಜನಕೋಳೂರು ಗ್ರಾಮವೊಂದರಲ್ಲೇ ಕಾಣುತ್ತೇವೆ.
-ಪಾಟೀಲ ಬಸನಗೌಡ. ಹುಣಸಗಿ.
ಮೊ.9900771427.
ಜನರಿಗೆ ಗೊತ್ತೆಇರದ ವಿಷಯವನ್ನು ನೀವು ತಿಳಿದು ತಿಳಿಸಿದ್ದಕ್ಕೆ ವಂದನೆಗಳು
ಯುವ ಜನಾಂಗಕ್ಕೆ ಅದರ ಪರಿಚಯ ಸಿಗಲಿ ಎಂದು ಬರೆದೆ.ಪ್ರತಿಯೊಬ್ಬರೂ ತನ್ನ ನೆಲದ ಇತಿಹಾಸ ತಿಳಿದುಕೊಂಡಿರಬೇಕು.
ನಮ್ಮ ಗ್ರಾಮದ ಹಾಗೂ ಜಿಲ್ಲೆಯ ಇತಿಹಾಸವನ್ನು ಈ ನಾಡಿಗೆ ತಿಳಿಸುವ ಮಹತ್ತರ ಕೆಲಸ ತಮ್ಮಿಂದ ಆಗಿದೆ ತಮಗೆ ಅನಂತ ಅನಂತ ಧನ್ಯವಾದಗಳು .
Thank u sir ದಯವಿಟ್ಟು ನಿಮ್ಮ ಶಾಲೆಯ ಮಕ್ಕಳಿಗೆ ಶಿಕ್ಷಕ ವರ್ಗಕ್ಕೂ ಮಾಹಿತಿ ನೀಡಿ