ಶಹಾಪುರ, ಯಕ್ಷಿಂತಿಃ ಯುಗಾದಿ ಬೇವು ಸಂಭ್ರಮ, ಬಣ್ಣದಾಟ, ಸಂಜೆ ಹೊಸ ತೊಡಕು ಆಚರಣೆ
ಭಾರತೀಯರಿಗೆ ಯುಗಾದಿ ಹಬ್ಬವೇ ವರ್ಷದ ಆರಂಭ
ಯುಗಾದಿಃ ಯಕ್ಷಿಂತಿ ಗ್ರಾಮದಲ್ಲಿ ಬಣ್ಣದಾಟ
yadgiri, ಶಹಾಪುರಃ ಭಾರತೀಯರಿಗೆ ಸಂಪ್ರದಾಯಿಕವಾಗಿ ಯುಗಾದಿ ಹಬ್ಬವೇ ವರ್ಷದ ಆರಂಭ. ವಸಂತ ಋತುವಿನಲ್ಲಿ ಗಿಡ ಮರ, ಬಳ್ಳಿಗಳು ಚಿಗರೊಡೆಯುವ ಆರಂಭಿಕ ಕಾಲವೇ ನಿಸರ್ಗದತ್ತ ಯುಗಾದಿ ಆಚರಣೆಗೆ ಮುನ್ನುಡಿ.
ಹೀಗಾಗಿ ಭಾರತೀಯರೆಲ್ಲರೂ ಈ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ. ಅಲ್ಲದೆ ಪ್ರಕೃತಿಯೊಂದಿಗೆ ಈ ಹಬ್ಬ ಸಮ್ಮಿಲನಗೊಂಡಿದೆ ಎನ್ನಲಾಗಿದೆ. ಇದೇ ವೇಳೆ ಭಾರತದ ಹಲವಾರು ಕಡೆ ಯುಗಾದಿ ಹಬ್ಬದ ಮರುದಿನ ಹಣ್ಣದೋಕೋಳಿ ಆಡುವ ಸಂಪ್ರದಾಯವು ಇದೆ.
ಅದರಂತೆ ತಾಲೂಕಿನ ಯಕ್ಷಿಂತ, ಕೊಳ್ಳೂರ ಗ್ರಾಮದಲ್ಲಿ ರವಿವಾರ ಮಕ್ಕಳು, ಯುವಕರು ಪರಸ್ಪರರು ಬಣ್ಣ ಹಚ್ಚಿಕೊಂಡು ಬಣ್ಣದಾಟವಾಡಿದರು. ಸಾಂಪ್ರದಾಯಿಕವಾಗಿ ಯುಗಾದಿ ಹಬ್ಬದ ಮರು ದಿನ ನಮ್ಮಲ್ಲಿ ಬಣ್ಣದಾಟ ಆಡುತ್ತೇವೆ. ಹೋಳಿ ಹಬ್ಬದಂದು ನಮ್ಮೂರಲ್ಲಿ ಬಣ್ಣವಾಡುವದಿಲ್ಲ. ಹೀಗಾಗಿ ನಾವೆಲ್ಲ ಇಂದು ಬಣ್ಣದಲ್ಲಿ ಮಿಂದಿದ್ದೇವೆ ಎಂದು ಗ್ರಾಮದ ಯುವಕರು ಹರ್ಷ ಹಂಚಿಕೊಂಡರು.
ಸಂಪ್ರದಾಯ ಆಚರಣೆಗಳು ತಾಲೂಕಿನ ಗ್ರಾಮಗಳಲ್ಲಿ ಇನ್ನೂ ಜೀವಂತವಾಗಿವೆ ಎನ್ನುವದಕ್ಕೆ ಇದು ಸಾಕ್ಷಿ. ಭಾರತೀಯ ಸಂಪ್ರದಾಯ, ಪದ್ಧತಿಗಳು ವೈಜ್ಞಾನಿಕವಾಗಿ ಆಯಾ ವಾತಾವರಣ, ಸ್ಥಳೀಯ ಐತಿಹ್ಯ ಅನುಗುಣವಾಗಿ ಜನರ ಬದುಕಿಗೆ ಹತ್ತಿರವಾಗಿವೆ ಎಂದರೆ ಸುಳ್ಳಲ್ಲ. ಒಟ್ಟಾರೆ ಗ್ರಾಮದಲ್ಲಿ ಹೋಳಿ ಹಬ್ಬದ ಖುಷಿ ಮನೆ ಮಾಡಿತ್ತು.
ಬಣ್ಣದ ನಂತರ ಮಕ್ಕಳು, ಯುವಕರು ಗ್ರಾಮ ಸಮೀಪದ ಕೃಷ್ಣಾ ನದಿಗೆ ತೆರಳಿ ಸ್ನಾನ ಮಾಡಿ ಶುಭ್ರರಾಗಿ ದೇವರನ್ನು ಸ್ತುತಿಸಿದರು. ಸಂಜೆ ಕರಿ (ಹೊಸ ತೊಡಕು) ಆಚರಣೆ ಎಂದರೆ ಗ್ರಾಮದ ಹಲವು ಸಮುದಾಯಗಳಲ್ಲಿ ಮಾಂಸಹಾರಿ ಪದ್ಧತಿ ಆಹಾರ ಸೇವನೆ ಇರುವದರಿಂದ ಶನಿವಾರ ಯುಗಾದಿ ಹಬ್ಬದಂಗವಾಗಿ ಬೇವು, ಸಿಹಿ ಊಟ ಮಾಡಿ ರವಿವಾರ ಬಣ್ಣದಾಟದಲ್ಲಿ ಮಿಂದು ಸಂಜೆ ಹೊಸ ತೊಡಕು ಆಚರಣೆ ಮಾಡುವ ಪದ್ಧತಿ ರೂಢಿಯಲ್ಲಿದೆ.
ಭಾರತೀಯರು ಹಬ್ಬದ ಆಚರಣೆ ಮರುದಿನ ಕರಿ ಅಥವಾ ತೊಡಕು (ಹೊಸ ತೊಡಕು) ಆಚರಣೆ ಮಾಡಲಾಗುತ್ತದೆ. ಕರಿ ಎಂದರೆ ಹಬ್ದದ ಸಿಹಿ ಊಟದ ನಂತರ ಮರುದಿನ ಮಾಂಸಹಾರ ಸೇವಿಸುವ ಪದ್ಧತಿ ಇದೆ. ಹೀಗಾಗಿ ಹಲವಾರು ಪದ್ಧತಿಗಳನ್ನು ಭಾರತೀಯರು ಇನ್ನೂ ರೂಢಿಸಿಕೊಂಡು ಬರುತ್ತಿರುವದು ಹೆಮ್ಮೆಯ ವಿಷಯ.
-ಮಲ್ಲಿಕಾರ್ಜುನ ಬಾಗಲಿ. ಗ್ರಾಪಂ ಮಾಜಿ ಅಧ್ಯಕ್ಷ.