ಲಿಂಗಾಯತರಿಗೆ ಬೇಕಿರುವುದು ಬೆಲ್ಲದ್ ಅಲ್ಲ; ಎಂ.ಬಿ.ಪಾಟೀಲರಂತಹ ನಾಯಕ.!
ಲಿಂಗಾಯತರಿಗೆ ಬೆಲ್ಲದ್ ‘ಅಲ್ಲಾ’ ಪಾಟೀಲ್ ಸಿಹಿ ಬೆಲ್ಲ
ಲಿಂಗಾಯತರ ಬಲಿಷ್ಠ ನಾಯಕ ಎನಿಸಿಕೊಂಡು ನಾಲ್ಕು ಬಾರಿ ಸಿಎಂ ಹುದ್ದೆ ಅಲಂಕರಿಸಿದ ಬಿಎಸ್ ವೈ ಇದೀಗ ವಿದಾಯ ಹೇಳುವ ವೇಳೆಗೆ ಅವರ ವಿರುದ್ಧ ಪರ್ಯಾಯ ನಾಯಕ ಹುಡುಕಾಟ ನಡೆದಿದೆ ಎನ್ನಬಹುದು.
ಈ ಹುಡುಕಾಟದ ಕುಂತಂತ್ರದಲ್ಲಿ ಲಿಂಗಾಯತರಿಗೆ ಯಡಿಯೂರಪ್ಪ ಬಿಟ್ಟರೆ ಬೆಲ್ಲದ್ ಎಂಬ ಅಲ್ಲಾ (ಖಾರ ಪದಾರ್ಥ ) ವ್ಯಕ್ತಿಯನ್ನ ನಾಯಕರನ್ನಾಗಿ ಬಲವಂತದ ಏರಿಕೆ ಸರಿ ಹೊಂದಲ್ಲ. ಲಿಂಗಾಯತರಿಗೆ ಬೇಕಿರುವದು ಎಂ.ಬಿ.ಪಾಟೀಲ್ ರಂಥ ಸಿಹಿ ಬೆಲ್ಲ ನಾಯಕತ್ವದ ಅಗತ್ಯವಿದೆ.
ಹೌದು. ಲಿಂಗಾಯತರ ಮೇಲೆ ಯಾರನ್ನೋ ತಂದು ಹೇರಬೇಡಿ. ಪರ್ಯಾಯ ನಾಯಕನನ್ನು ಹುಡುಕುವ ಮತ್ತು ಅವರ ಮತಗಳನ್ನು ತಮ್ಮಲ್ಲೇ ಉಳಿಸಿಕೊಳ್ಳುವ ಗುದಮುರಗಿಗೆ ಈಗ ಬಿಜೆಪಿ ಬಿದ್ದಿದೆ. ಆದರೆ ಬರೀ ಆ ನಾಯಕ ಲಿಂಗಾಯತನಾಗಿದ್ದರೆ ಸಾಕು, ಅದೊಂದು ಕಾರಣಕ್ಕೆ ಲಿಂಗಾಯತರು ಬಿಜೆಪಿಗೆ ಕಣ್ಣು ಮುಚ್ಚಿ ಓಟು ಹಾಕುತ್ತಾರೆ, ‘ಮೇಲೆ ಹೇಗೂ ಮೋದಿ ಇದ್ದಾರೆ’ ಎನ್ನುವ ತಿಳಿವು ಬಿಜೆಪಿಗೆ ಇದ್ದಂತಿದೆ.
ಅದಕ್ಕೆ ಕಾರಣವೂ ಇದೆ. ಯಡಿಯೂರಪ್ಪ ಬಿಟ್ಟರೆ ಬೆನ್ನೆಲುಬು ಗಟ್ಟಿಗಿರೋ ಮತ್ತೊಬ್ನ ನಾಯಕನೂ ಬಿಜೆಪಿಯಲ್ಲಿ ಇಲ್ಲದಿರುವುದು! ಹಾಗಂತ ಅವರ ಬಿಟ್ ಇವರು, ಇವರು ಬಿಟ್ ಅವರು ಅಂತ ಹಾಕ್ಯಾಡುವ ಸ್ಥಿತಿಗೆ ಬಿಜೆಪಿ ಬಂದಿದೆ.
ಇದ್ದುದರಲ್ಲಿ ಬಸವನಗೌಡ ಯತ್ನಾಳ ಗಟ್ಟಿಯಾಗಿದ್ದರೂ ಅವರು ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಂಡಿದ್ದಾರೆ. ಇನ್ನು ಶೆಟ್ಟರ್, ಬೊಮ್ಮಾಯಿ, ಸೌದಿ ಸೇರಿ ಯಾರೊಬ್ಬರೂ ಮತ ತರುವ ಮಾಸ್ ಲೀಡರ್‌ಗಳಲ್ಲ.
ಹೀಗಿರುವ ಬಿಜೆಪಿಯ ಹಲವು ‘ಲಿಂಗಾಯತ ನಾಯಕ’ರ ಮುಖಕ್ಕೆ ಮತ ಬರುವುದಿರಲಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅವರು ಗೆದ್ದರೆ ಸಾಕೆನ್ನುವಂತಿದೆ. ಇನ್ನು ಪಕಸಿದ್ಧಾಂತದಿಂದ ಬಂದ ಬೇರೆ ಸಮುದಾಯದ ಆಕರ್ಷಕ ಮುಖವೂ ಆ ಪಕ್ಷದಲ್ಲಿ ಸದ್ಯಕ್ಕಿಲ್ಲ.
ನಿಜಕ್ಕೂ ಇದು ಕರ್ನಾಟಕದ ಬಿಜೆಪಿಗೆ ಸತ್ವ ಪರೀಕ್ಷೆಯ ಕಾಲ. ಅದರ ರಾಷ್ಟ್ರೀಯ ನಾಯಕರ ಒದ್ದಾಟದಿಂದ ಇದು ಎದ್ದು ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ ಬಂದ ಹೆಸರು ಅರವಿಂದ್ ಬೆಲ್ಲದ್. ಇವರನ್ನು ಯಾವ ದಿಕ್ಕಿನಿಂದ ನೋಡಿದರೂ ನಾಯಕನ ಹಾಗೆ ಕಾಣುವುದಿಲ್ಲ.
ಇದು ಯಡಿಯೂರಪ್ಪರಿಗೆ ತ್ರಾಸು ಕೊಡಲು ಆ ಪಕ್ಷದ ಪ್ರಮುಖ ನಾಯಕರೇ ತೇಲಿ ಬಿಟ್ಟ ಪ್ಲೇ ಕಾರ್ಡ್ ಇರಬೇಕು ಅಷ್ಟೇ. ಲಿಂಗಾಯತರೇನು ಮಳ್ಳ ಅಲ್ಲ, ಯಾರನ್ನು ತಂದು ನಿಲ್ಲಿಸಿದರೂ ಒಪ್ಪಿಕೊಳ್ಳಲು.
ಬಿಜೆಪಿ ಉತ್ತರ ಕರ್ನಾಟಕದ ಲಿಂಗಾಯತರಿಂದಲೇ ತನ್ನ ಕಮಲ ಅರಳಿಸಿಕೊಂಡಿದೆ. ಯಡಿಯೂರಪ್ಪರ ಮುಖ, ಶ್ರಮ, ಹೋರಾಟವೂ ಇದಕ್ಕೆ ಮುಖ್ಯ ಕಾರಣ. ಹೀಗೆ ಪಕ್ಷ ಕಟ್ಟಿ ಬೆಳೆಸಿದ ಯಡಿಯೂರಪ್ಪರನ್ನು ಬಿಜೆಪಿಯ ಒಳ ಖೋಲಿಯ ಜನ ಮೊದಲಿಂದ ಮಾನಸಿಕವಾಗಿ ಹಿಂಸಿಸುತ್ತಲೇ ಬಂದಿದ್ದಾರೆ. ಇದನ್ನೂ ಲಿಂಗಾಯತರು ಗಮನಿಸುತ್ತಲೇ ಬಂದಿದ್ದಾರೆ.
ಮತ್ತು ಅವರು ಕೆಜಿಪಿ ಕಟ್ಟಿದಾಗ ಬೆನ್ನಿಗೆ ನಿಂತು ಸೆಟೆದು ತೋರಿಸಿದ್ದಾರೆ. ಇಷ್ಟಿದ್ದೂ ಆ ಪಕ್ಷದ ದೆಹಲಿ ನಾಯಕರಿಗೆ ಈ ಸಮಯದ ವರೆಗೂ ತಮ್ಮ ಪಕ್ಷವನ್ನು ಪ್ರಾಮಾಣಿಕವಾಗಿ ಸಂಭಾಳಿಸುವುದು ಆಗುತ್ತಿಲ್ಲ. ಮೋದಿ ಮೇನಿಯಾದಲ್ಲೇ ಎಲ್ಲ ಮರೆತಂತಿದೆ.
ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ತನ್ನ ರಾಜಕೀಯ ಜಾಣ್ಮೆ ಮೆರೆಯಬೇಕಿದೆ. ಯಡಿಯೂರಪ್ಪ ಬಿಟ್ಟು ಯಾರನ್ನೇ ಮುಂದೆ ಮಾಡಿದರೂ ಲಿಂಗಾಯತರು ಬಿಜೆಪಿಯಿಂದ ವಿಮುಖರಾಗುವುದು ಶತಃ ಸಿದ್ಧ.
ಅವರು ವಲಸೆಗೆ ಸಿದ್ಧರಾಗಿದ್ದಾರೆ ಮತ್ತು ಪರ್ಯಾಯ ನಾಯಕನನ್ನು ಹುಡುಕುತ್ತಿದ್ದಾರೆ. ಈಗ ಕಾಂಗ್ರೆಸ್ ಎಂ.ಬಿ. ಪಾಟೀಲರನ್ನು ಮುಖ್ಯಮಂತ್ರಿ ಅಭ್ಯರ್ಥಿ ಅಂತ ಘೋಷಿಸಿದರೆ ಯಡಿಯೂರಪ್ಪರ ಕಾರಣಕ್ಕೆ ಬಿಜೆಪಿ ಬೆಂಬಲಿಸುತ್ತಿದ್ದ ಬಹುತೇಕ ಲಿಂಗಾಯತರೆಲ್ಲ ಇತ್ತ ವಾಲುತ್ತಾರೆ. ತಮಗೊಬ್ಬ ನಾಯಕ ಸಿಕ್ಕಾನು ಎನ್ನುವ ಇರಾದೆಗೆ ಅವರು ಮಣೆ ಹಾಕುವುದು ಖಂಡಿತ.
ಮಾಜಿ ಸಚಿವ ಎಂ.ಬಿ.ಪಾಟೀಲ್ ತಮ್ಮ ಅವಿರತ ಶ್ರಮದಿಂದ ಮಹತ್ವಾಕಾಂಕ್ಷೆಯ ನೀರಾವರಿ ಕೆಲಸಗಳನ್ನು ಸಾಕಾರಗೊಳಿಸಿ ಹೌದೆನ್ನಿಸಿಕೊಂಡವರು. ಲಿಂಗಾಯತ ಚಳವಳಿಯಿಂದ ರಾಜ್ಯದಲ್ಲಿ ಯಡಿಯೂರಪ್ಪರಿಗೆ ಪರ್ಯಾಯ ನಾಯಕರಾಗಿ ಬೆಳೆದಿದ್ದಾರೆ.
ಇವರಲ್ಲಿ ಸಾಮಾನ್ಯರೆಡೆಗೆ ಮಿಡಿವ ನಾಯಕತ್ವದ ಗುಣ, ಮತ ಸೆಳೆವ ಮುಖವೂ ಇದೆ. ಅನುಭವ, ಕಾರ್ಯಕ್ಷಮತೆ, ಹೊಸ ವಿಚಾರ, ವಿದ್ಯಾವಂತಿಕೆ, ಸರಳತೆ ಸೇರಿ ಎಲ್ಲ ಯೋಗ್ಯತೆಯೂ ಇದೆ. ಇದೆಲ್ಲವನ್ನು ಕಾಂಗ್ರಸ್ ಹೈಕಮಾಂಡ್ ಗಮನಿಸಿ ಗಂಭೀರವಾದರೆ ಅದಕ್ಕೆ ಅನುಕೂಲ. ರಾಜ್ಯಕ್ಕೂ ಹೊಸ ನಾಯಕ ಸಿಕ್ಕಾನು.
ಇಂತಹ ಬೆಳವಣಿಗೆಗೆ ಕಾಲ ಕೂಡ ಪಕ್ವವಾಗುತ್ತಿದೆ. ಉಕದ ನೆಲದಲ್ಲೇ ಬಿಜೆಪಿಗೆ ಬಲವಿದೆ. ಪಾಟೀಲರನ್ನು ಅಖಾಡಕ್ಕೆ ಇಳಿಸಿದರೆ ಆ ಪಕ್ಷಕ್ಕೆ ಗೆಲ್ಲುವುದು ಕಷ್ಟ. ಇನ್ನು ಸರ್ವ ಜನಾಂಗದ ಹಿತ ಬಯಸುವುದೇ ಬಸವಾದಿ ಶರಣರ ಆಶಯದ ಲಿಂಗಾಯತ ಗುಣ. ಅದನ್ನು ಎಂ.ಬಿ.ಪಾಟೀಲರು ಅಳವಡಿಸಿಕೊಂಡಿದ್ದಾರೆ ಮತ್ತು ಆಚರಣೆಗೂ ತಂದು ತೋರಿದ್ದಾರೆ.
ಈ ಕೋವಿಡ್ ಸಂದರ್ಭ ತಮ್ಮ blde ಆಸ್ಪತ್ರೆಯಲ್ಲಿ ಯಾರೇ ಬಂದರೂ ಅತ್ಯಂತ ಕಡಿಮೆ ದರದಲ್ಲಿ ಚಿಕಿತ್ಸೆ ಕೊಡಿಸಿ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದರು. ನೂರಾರು ಬೆಡ್‌ಗಳನ್ನು ಮೀಸಲಿಟ್ಟಿದ್ದರು. ನೀರಿಲ್ಲದೇ ಒಣಗಿ ಹೋಗಿದ್ದ ಬಿಜಾಪುರವನ್ನೀಗ ಹಸಿರ ನಾಡು ಮಾಡಿದ್ದಾರೆ. ಹೋಗದ ಜಾಗಕ್ಕೂ ಕಾಲುವೆ ಕೊರೆಸಿ ನೀರು ನೀಡಿದ್ದಾರೆ. ಲಕ್ಷಗಟ್ಟಲೇ ಮರಗಿಡಗಳನ್ನು ನೆಡಿಸಿದ್ದಾರೆ.
ಇಂತಹ ಒಬ್ಬ ಜನಪರ ನಾಯಕ ಮುನ್ನೆಲೆಗೆ ಬಂದರೆ ತಪ್ಪೇ? ನೀವೇ ಹೇಳಿ. ಕಾಂಗ್ರೆಸ್ ಮನಸ್ಸು ಮಾಡಬೇಕಷ್ಟೇ. ಸಕಾರಾತ್ಮಕ ವಿಚಾರದಿಂದ ಇದನ್ನು ಬರೆದಿರುವೆ. ಬೇರೆ ಉದ್ದೇಶವಿಲ್ಲ.
–ಶಿವಕುಮಾರ್ ಉಪ್ಪಿನ್, ಪತ್ರಕರ್ತ-ಬರಹಗಾರ