ಶಿವಕುಮಾರ್ ಉಪ್ಪಿನ್ ಬರೆದ ‘ಒಳಪಂಗಡಗಳು ಬೇಗುದಿ ಯಲ್ಲಿ ಸೊರಗುತ್ತಿದೆ ಲಿಂಗಾಯತ ಧರ್ಮ‘ ಲೇಖನ ಅರ್ಥಪೂರ್ಣವಾಗಿದೆ. ವಾಸ್ತವಿಕತೆಗೆ ಹಿಡಿದ ಕನ್ನಡಿಯಾಗಿದೆ.
ವಿಶಾಲತತ್ವದ ಮೇಲೆ ಮಾನವತಾವಾದಿ ತತ್ವದ ಮೇಲೆ ರಚನೆಗೊಂಡಿರುವ ಲಿಂಗಾಯತ.. ಜಾತಿ,ಮತ,ಪಂಥದ ಸಂಕೇತವಲ್ಲ. ಅದನ್ನು ತಿಳಿಸುವುದಿಲ್ಲ. ಎಲ್ಲರೂ ಸಮಾನರು, ಮಾನವ ಜಾತಿ ಒಂದೇ, ಇವನಾರವ, ಇವನಾರವ ಎಂದೇನಿಸದೇ ಇವ ನಮ್ಮವ ಎಂದು ಭಾವಿಸುವ ಬಸವಣ್ಣನವರ ಚಿಂತನೆ ವಿಶ್ವಕ್ಕೆ ಮಾದರಿಯಾದುದು.
ಆದರೆ ಶಿವಕುಮಾರ್ ಉಪ್ಪಿನ್ ತಿಳಿಸಿದಂತೆ ಇಂದು ನಾವು ಬೇರೆ,ನೀವು ಬೇರೆ ಎಂದು ಹೇಳುವ ಮೂಲಕ ಅವರ ತತ್ವಕ್ಕೆ, ವ್ಯಕ್ತಿತ್ವ ಕ್ಕೆ ಅಪಚಾರ ಮಾಡುತ್ತಿದ್ದೇವೆ..ಈಗ ಪರಿಸ್ಥಿತಿ ಎಲ್ಲಿಗೆ ಬರುತ್ತಿದೆ ಎಂದರೆ ಯಾರು,ಯಾರಿಗೆ ಹೇಳುವ ಹಾಗಿಲ್ಲ.
ಜಾತಿಸಂಘಟನೆ, ಪ್ರತ್ಯೇಕ ಮಠಗಳ ಸ್ಥಾಪನೆ,ಪ್ರತ್ಯೇಕ ಸಮಾವೇಶಗಳು.ಹೀಗೆ ನಾವು ಮುಂದುವರಿದರೆ ಬಸವಾದಿ ಶರಣರ ಚಿಂತನೆಗಳು,ಅವರ ಆಶಯಗಳು ಮರೆಯಾಗಿ ಸುಸ್ಥಿರ ಸಮಾಜದ ಕಲ್ಪನೆ ಮರೆಯಾಗಬಹುದು.
ಬಸವಾದಿ ಶರಣರ ಮಾರ್ಗ ಪಂಥವಲ್ಲ, ಧರ್ಮವಲ್ಲ. ವರ್ಗವಲ್ಲ, ಜಾತಿಯಲ್ಲ. ಇದರ ಸಂಘಟನೆಯೂ ಅಲ್ಲ. ಇದನ್ನೇ ಬಸವಣ್ಣನವರು ಶಿವಪಥ ವೆಂದು ಕರೆದರು. ಈ ಶಿವಪಥದ ಪಥಿಕರಾಗಿ ಪರಿಪೂರ್ಣ ದೆಡೆಗೆ ಪಯಣ ಬೆಳೆಸುವುದೇ ಶರಣರ ಗುರಿಯಾಗಿತ್ತು.
ಬಸವಣ್ಣನವರ ಶಿವಪಥವೂ ಇದೆ. ಬೇರೆ ದಾರಿಗಳೂ ಇವೆ.ಯಾರಿಗೆ ಯಾವ ದಾರಿ ರುಚಿಸುವುದೋ ಅವರು ಆ ದಾರಿಯನ್ನು ಹಿಡಿಯಲಿ…ಶರಣತತ್ತ್ವ ಹೇಳುವುದಲ್ಲ. ಶರಣರ ಮಾರ್ಗದಲ್ಲಿ ಸಾಗುವ ಮನವೂಬೇಕು.ನಡೆವ ಮನಬೇಕು..
ಶರಣರ ಕರೆಯನ್ನು, ತತ್ವವನ್ನು ಕೇಳುವ ಕಿವಿ ಇರಬೇಕಲ್ಲ. ಹೀಗಾಗಿ ಹುಣಸೆಯ ಹೂವೆಲ್ಲ ಕಾಯಾಗುವುದಿಲ್ಲ ವೆಂದು ದೇವರ ದಾಸಿಮಯ್ಯ ಹೇಳಬೇಕಾಯಿತು.
ಕನ್ನಡನಾಡಿನಲ್ಲಿ ಅಪ್ಪಟ ಚಿನ್ನದಂತಿರುವ ಶರಣರ ಪರಂಪರೆಯನ್ನು ಬಸವಾದಿ ಶರಣರ ಆಶಯಗಳಿಗೆ ಧಕ್ಕೆಯಾಗದಂತೆ ನಮ್ಮ ನಡೆ,ನುಡಿ.ಆಚಾರ,ವಿಚಾರಗಳಿರಲಿ ಎಂಬುದು ನನ್ನ ಆಶಯ..ಶರಣು ಶರಣಾರ್ಥಿ.
–ಡಾ.ಗಂಗಾಧರಯ್ಯ ಹಿರೇಮಠ.ಪ್ರಾಧ್ಯಾಪಕರು,
ದಾವಣಗೆರೆ.