ಚಿತಾಪುರಃ ಚಿರತೆ ದಾಳಿಗೆ ಹಸು ಬಲಿ – ಗ್ರಾಮಸ್ಥರಿಂದ ಶಂಕೆ

ಚಿರತೆ ದಾಳಿಗೆ ಹಸು ಬಲಿ – ಗ್ರಾಮಸ್ಥರಿಂದ ಶಂಕೆ
ಅಣ್ಣಿಕೇರಾದಲ್ಲಿ ಘಟನೆ ಆತಂಕ
ಕಲ್ಬುರ್ಗಿ (ವಾಡಿ)- ಹೊಲವೊಂದರಲ್ಲಿ ಕಟ್ಟಿ ಹಾಕಲಾದ ಹಸುವೊಂದನ್ನು ಕಾಡು ಮೃಗವೊಂದಕ್ಕೆ ಬಲಿಯಾದ ಘಟನೆ ಲಾಡ್ಲಾಪುರ ಸಮೀಪದ ಅಣ್ಣಿಕೇರಾ ಗ್ರಾಮ ವ್ಯಾಪ್ತಿ ರವಿವಾರ ನಡೆದಿದೆ.
ಹಸುವಿನ ರಕ್ತ ಹೀರಿರುವದು ಚಿರತೆಯೇ ಇರಬೇಕೆಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಕಾಡುಮೃಗವೊಂದಕ್ಕೆ ಆಹಾರವಾದ ಹಸು ರಮೇಶ ಜಾಧವ ಅವರಿಗೆ ಸೇರಿದೆ ಎನ್ನಲಾಗಿದೆ.
ಅಣ್ಣಿಕೇರಾ, ಲಾಡ್ಲಾಪುರ, ಅಳ್ಳೊಳ್ಳಿ, ದಂಡಗುಂಡ ಗ್ರಾಮಗಳು ಗುಡ್ಡಗಾಡು ಅರಣ್ಯ ಪ್ರದೇಶದಿಂದ ಕೂಡಿದ್ದು, ಈ ಭಾಗದಲ್ಲಿ ಚಿರತೆ, ಹುಲಿ ಸೇರಿದಂತೆ ಇತರೆ ಮೃಗಗಳು ಪ್ರತ್ಯಕ್ಷವಾದ ವದಂತಿಗಳು ಆಗಾಗ ಕೇಳಿ ಬರುತ್ತವೆ.
ವಿಷಯ ತಿಳಿದ ಪಶು ವೈದ್ಯಾಧಿಕಾರಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪಶು ವೈದ್ಯರು ಮೃತ ಹಸುವಿನ ಪರೀಕ್ಷೆ ನಡೆಸಿದ್ದಾರೆ. ಸಾಮಾನ್ಯವಾಗಿ ಚಿರತೆಗಳು ಪ್ರಾಣಿಗಳ ಕತ್ತು ಮತ್ತು ಹೊಟ್ಟೆ ಭಾಗ ಹರಿದು ತಿನ್ನುತ್ತವೆ. ಇಲ್ಲಿ ಕತ್ತು ಮತ್ತು ಹಸುವಿನ ಹಿಂಭಾಗದ ಮಾಂಸ ಪರಚಲಾಗಿದೆ. ಪಶು ವೈದ್ಯರ ವರದಿ ಬಂದ ನಂತರವೇ ಯಾವ ಪ್ರಾಣಿಗೆ ಬಲಿಯಾಗಿದೆ ಎಂಬುದು ಸ್ಪಷ್ಟವಾಗಲಿದೆ.
–ವಿಜಯಕುಮಾರ ಬಡಿಗೇರ. ಅರಣ್ಯಾಧಿಕಾರಿ ಚಿತಾಪುರ.