ಕೇಂದ್ರ ಸರ್ಕಾರ ಕಾರ್ಪೋರೇಟ್ ಕಂಪನಿ ಏಜೆಂಟ್ – ಕೋಡಿಹಳ್ಳಿ ಆರೋಪ
ಜಾತಿ, ಹಣ ಆಮೀಷಕ್ಕೆ ಬಲಿಯಾಗಿ ಅಯೋಗ್ಯರಿಗೆ ಮತ ನೀಡದಿರಿ
ಯಾದಗಿರಿ, ಶಹಾಪುರಃ ಬಂಡವಾಳಶಾಹಿಗಳ, ರಾಷ್ಟ್ರೀಯ ಕಂಪನಿಗಳ ಕೈಗೊಂಬೆಯಾಗಿರುವ ಪ್ರಧಾನಿ ಮೋದಿಯವರು ಸುಗ್ರಿವಾಜ್ಞೆ ಹೊರಡಿಸುವ ಮೂಲಕ ಜನ, ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿದ್ದಾರೆ. ಅವರ ಕೃಷಿ ವಿರೋಧಿ ನೀತಿಯಿಂದ ರೈತರು ತಬ್ಬಲಿಯಾಗಲಿದ್ದಾರೆ. ಕೇಂದ್ರ ಸರ್ಕಾರ ಕಾರ್ಪೋರೇಟ್ ಕಂಪನಿಗಳ ಏಜೆಂಟನಂತೆ ವರ್ತಿಸುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ತಾಲೂಕಿನ ಭೀಮರಾಯನ ಗುಡಿಯ ಕೃಷಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯಿಂದ ವಿಶ್ವ ರೈತ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ನೇಗಿಲಿಗೆ ಪೂಜೆ ಸಲ್ಲಿಸಿ, ಸಸಿಗೆ ನೀರೆರಿಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳು ರೈತರಿಗೆ ಮಾರಕವಾಗಿದ್ದು, ಅವುಗಳನ್ನು ರದ್ದುಗೊಳಿಸುವಂತೆ ದೆಹಲಿ ರೈತರು ಅಹಿಂಸಾತ್ಮಕವಾಗಿ ಮತ್ತು ಶಾಂತಿಯಿಂದ ಹೋರಾಟ ನಡೆಸುತ್ತಿದ್ದರು, ವಿನಃ ಕಾರಣ ಲಾಠಿ ಚಾರ್ಜ್, ಜಲ ಫಿರಂಗಿ ಮೂಲಕ ಹೋರಾಟ ಹತ್ತಿಕ್ಕುವ ಕೆಲಸ ಮಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಲವಾರು ಕುತಂತ್ರಗಳ ಮೂಲಕ ಹೋರಾಟ ಹತ್ತಿಕ್ಕಲು ಪ್ರಯತ್ನಿಸಿದರು ರೈತರು ಮಾತ್ರ ಕದಲಿಲ್ಲ. ಅಲ್ಲದೆ ಗಣರಾಜ್ಯೋತ್ಸವ ಸಂದರ್ಭದಲ್ಲಿ ತಮ್ಮ ಪಕ್ಷದ ಕಾರ್ಯಕರ್ತನೋರ್ವನಿಂದಲೇ ಕೆಂಪುಕೋಟೆ ಮೇಲೆ ಧ್ವಜ ಏರಿಸುವ ಮೂಲಕ ವಿವಾದ ಸೃಷ್ಠಿಸಿ ಹೋರಾಟಗಾರರ ತಲೆಗೆ ಕಟ್ಟುವ ಕೆಲಸ ವ್ಯವಸ್ಥಿತವಾಗಿ ಮಾಡಿದೆ ಎಂದು ದೂರಿದರು.
ಎಪಿಎಂಸಿ ಕಾಯ್ದೆಯನ್ನು ಬೈಪಾಸ್ ಬಿಲ್ಲನ್ನಾಗಿ ಮಾಡಿ ಕಾರ್ಪೋರೇಟ್ ಮತ್ತು ಬಹು ರಾಷ್ಟ್ರೀಯ ಕಂಪನಿಗಳ ಖಾಸಗಿ ಮಾರುಕಟ್ಟೆಗೆ ಅವಕಾಶ ಕಲ್ಪಿಸಿ, ಟ್ಯಾಕ್ಸ್‍ನಿಂದ ಅವರನ್ನು ಹೊರಗಿಟ್ಟು, ಈಗಿರುವ ಎಪಿಎಂಸಿ ಕಾಯ್ದೆ ದುರ್ಬಲಗೊಳಿಸಿ ಕೆಲವೇ ವರ್ಷದಲ್ಲಿ ಮುಚ್ಚಿ ಹೋಗುವಂತೆ ಮಾಡಿ ಅದರ ಸಮಸ್ತ ಆಸ್ತಿಕ ಕಂಪನಿಗಳಿಗೆ ಒಪ್ಪಿಸುವ ತಂತ್ರವಾಗಿದೆ
ಒನ್ ಇಂಡಿಯಾ ಒನ್ ಮಾರ್ಕೇಟ್ ಅಂತ ಹೇಳುತ್ತಿರುವವರು ಇದೀಗ ಅದನ್ನು ಬಿಟ್ಟು ಖಾಸಿಗಿ ಕಂಪನಿಗಳಿಗೆ ಮಣೆ ಹಾಕುವಂತ ಭಾನಗೇಡಿ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ರೈತರು ಈಗಲೇ ಎಚ್ಚೆತ್ತುಕೊಂಡು ಜಾಗೃತರಾಗಿ ಒಗ್ಗಟ್ಟಾಗಿ ಬೀದಿಗಿಳಿದು ಹೋರಾಟ ಮಾಡಬೇಕಿದೆ ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ರೈತರಿಗೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು. ಇದೇ ಸಂದರ್ಭದಲ್ಲಿ ಪ್ರಗತಿ ಪರ ರೈತರಿಗೆ ಮತ್ತು ದೇಶದ ಗಡಿ ಕಾಯುವ ಯೋಧರಿಗೆ ಸನ್ಮಾನಿಸಲಾಯಿತು.
ಸಭೆಯ ಅಧ್ಯಕ್ಷತೆವಹಿಸಿದ್ದ ಮಹೇಶಗೌಡ ಸುಬೇದಾರ ಮಾತನಾಡಿದರು. ಈ ಸಂದರ್ಭದಲ್ಲಿ ಮರುಳ ಮಹಾಂತಸ್ವಾಮಿ, ಸೋಮೇಶ್ವರ ಸ್ವಾಮೀಜಿ, ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಶಾಂತವೀರಪ್ಪ ಎಸ್.ಪೊಲೀಸ್ ಪಾಟೀಲ್, ಬಸನಗೌಡ ಬಿರಾದಾರ್, ಮಹಾದೇವಿ ಬೇವಿನಾಳ್ ಮಠ, ರಾಹುಲ್ ಕುಬಕಡ್ಡಿ, ಕಾರ್ತಿಕ್ ಹೊಸಪೇಟೆ, ಬಸವಂತಪ್ಪ ಕಾಂಬ್ಳೆ, ಕೃಷಿ ಮಹಾವಿದ್ಯಾಲಯದ ಡೀನ್ ಲೋಕೇಶ, ರೂಪಾ ನಾಯಕ್ ಸೇರಿದಂತೆ ಸಂಗಣ್ಣ ಮುಡಬೂಳ ಇದ್ದರು. ಅಮರಯ್ಯ ಸ್ವಾಮಿ ಜಾಲಿಬೆಂಚಿ ನಿರೂಪಿಸಿದರು.ಶಿವರಜ್ ಕಲಿಕೇರಿ ಪ್ರಾಸ್ತವಿಕವಾಗಿ ಮಾತನಾಡಿದರು. ಬೂದೆಪ್ಪ ವಂದಿಸಿದರು. ಮುಂಚಿತವಾಗಿ ನಗರದಲ್ಲಿ ರೈತರು ಪಾದಯಾತ್ರೆ ಜೊತೆಗೆ ಎತ್ತಿನ ಬಂಡಿ, ಬೈಕ್ ರ್ಯಾಲಿ ಮೂಲಕ ನಗರದಲ್ಲಿ ಕೋಡಿಹಳ್ಳಿ ಅವರನ್ನು ಬರ ಮಾಡಿಕೊಂಡರು.