ಅಂಕಣ

ನೋ ಟೆನ್ಷನ್! ಇಫ್ ಯೂ ಗಿವ್ ಅಟೆನ್ಷನ್

ಒತ್ತಡ ಧಾವಂತ ಬದುಕಿನ ಕೂಸು

ಜಯಶ್ರೀ.ಜೆ.ಅಬ್ಬಿಗೇರಿ, 9449234142.

ಅಯ್ಯೋ! ಏನು ಮಾಡೋದು ಯಾವ ಕೆಲಸಾನೂ ಸರಿಯಾಗಿ ಮಾಡಾಕಾಗ್ತಿಲ್ಲ ತುಂಬಾ ಟೆನ್ಷನ್ನು. ಎಲ್ಲಾ ಕೆಲ್ಸ ಅರ್ಧಂಬರ್ಧ ತಲೆ ಸಿಡಿತಾ ಇದೆ.ಏನು ಮಾಡ್ಬೇಕು ಅಂತಾ ತೋಚ್ತಾನೇ ಇಲ್ಲ.ಇದು ಆಧುನಿಕ ಜಗತ್ತಿನಲ್ಲಿ ಆವಸರದ ಬದುಕು ಸಾಗಿಸುತ್ತಿರುವ ಪ್ರತಿಯೊಬ್ಬರ ಬಾಯಲ್ಲಿ ಬರುವ ಮಾತು. ಮತ್ತು ಬಹುತೇಕ ಜನರ ಗೋಳೂ ಇದೇ ಆಗಿದೆ,ಈಗ ಒತ್ತಡ ಅನ್ನೋದು ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದವರ ಮೇಲೂ ತನ್ನ ಕರಾಮತ್ತನ್ನು ತೋರಿಸುತ್ತಿದೆ. ಇದರ ಬಲಿಗೆ ಬೀಳದವರ ಸಂಖ್ಯೆ ತುಂಬಾ ಕಡಿಮೆ.

‘ಒತ್ತಡ’ವನ್ನು “ದೈಹಿಕವಾಗಿ ಮತ್ತು ಮಾನಸಿಕವಾಗಿ ನಾವು ಗ್ರಹಿಸಿದ ವಿಷಯಗಳಿಗೆ ಹಾಗೂ ಅಪಾಯಗಳಿಗೆ ನೀಡುವ ಪ್ರತಿಕ್ರಿಯೆ”ಎಂದು ವ್ಯಾಖ್ಯಾನಿಸಬಹುದು. ಅನೇಕರು ಒತ್ತಡವನ್ನು ಉಪಯುಕ್ತವೆಂದೇ ನಂಬಿದ್ದಾರೆ. ಮಾಡುವ ಕಾರ್ಯದಲ್ಲಿ ಗೆಲುವು ಗಳಿಸಬೇಕೆಂದರೆ ಈ ಒತ್ತಡ ವಿಶೇಷ ಪುಷ್ಟಿ ನೀಡುತ್ತದೆ ಎನ್ನುವದು ಅವರ ವಾದ.

ನಿಜ, ನಮ್ಮನ್ನು ಉತ್ತೇಜಿಸಲು ಕೆಲವೊಂದು ಹಂತದವರೆಗೆ ಈ ಒತ್ತಡ ಸಹಾಯಕಾರಿಯಾಗಿದೆ. ಹೀಗೆ ಯಾವುದೇ ಕಾರ್ಯ ಸಾಧನೆಗೆ ಉಪಯೋಗವಾಗುವ ಒತ್ತಡವನ್ನು ಉಪಯೋಗಕಾರಿ ಒತ್ತಡ (EU-Stress) ಎಂದು ಹೇಳುವರು. ಇದಕ್ಕೆ ವಿರೋಧವಾಗಿ ನಮ್ಮ ಕಾರ್ಯಕ್ಷಮತೆ, ದಕ್ಷತೆಗೆ ಅಡೆತಡೆಯಾಗುವ, ನಮ್ಮ ದೈಹಿಕ ಕ್ಷಮತೆಯನ್ನು ತಗ್ಗಿಸುವ ಮತ್ತು ಮಾನಸಿಕ ಏರುಪೇರಿಗೆ ಕಾರಣವಾಗುವ ವರ್ತನೆಗೆ ಬೇಗುದಿ (Distress) ಎನ್ನುತ್ತೇವೆ.

ಈ ಡಿಸ್ಡ್ರೆಸ್ ನಮ್ಮ ಮಾನಸಿಕ ಸ್ಥಿಮಿತವನ್ನು ಕಳೆದುಕೊಳ್ಳುವಂತೆ ಮಾಡುತ್ದದಲ್ಲದೆ ನಮ್ಮ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವದು. ಒತ್ತಡ ನಮ್ಮ ಧಾವಂತ ಬದುಕಿನ ಕೂಸು ಮತ್ತು ಈ ಆಧುನಿಕ ಲೋಕದ ದೊಡ್ಡ ಸಮಸ್ಯೆ..ಈ ಸಮಸ್ಯೆಯ ಬೇರುಗಳು ನಮ್ಮ ವ್ಯವಸ್ಥೆಯಲ್ಲಿ ಕೆಲವಿದ್ದರೆ, ಇನ್ನೂ ಕೆಲವು ನಮ್ಮ ಮಾನಸಿಕ ಸ್ಥಿತಿಯಲ್ಲಿ ಅಡಗಿವೆ.

ಒತ್ತಡದ ಕಾರಣದಿಂದಾಗಿ ಅಧಿಕಾರಿಗಳು, ನೌಕರರು, ವಿದ್ಯಾರ್ಥಿಗಳು ಪ್ರತಿ ದಿನ ಯಾವುದಾದರೂ ಒಂದು ಸಮಸ್ಯೆಗೆ ಸಿಲುಕಿ ಹಾಕಿಕೊಳ್ಳುತ್ತಾರೆ. ಇದರಿಂದ ಅವರ ಜೀವನ ಶೈಲಿ, ಆರೋಗ್ಯ ಮತ್ತು ಕಾರ್ಯಕ್ಷಮತೆಯಲ್ಲಿ ಏರುಪೇರುಗಳು ಖಚಿತ. ಕಡಿಮೆ ಸಮಯದಲ್ಲಿ ಬಹಳಷ್ಟನ್ನು ಸಾಧಿಸಬೇಕೆಂಬ ಹಂಬಲವೂ ಇದಕ್ಕೆ ಪ್ರಮುಖ ಕಾರಣವಾಗಿದೆ ಎನ್ನಬಹುದು.

ವೈದ್ಯರನ್ನು ಕಾಣುವ ಅನೇಕ ರೋಗಿಗಳಲ್ಲಿ ಶೇಕಡಾ 70 ರಷ್ಟು ಒತ್ತಡದಿಂದ ಬಂದಿರುವ ಕಾಯಿಲೆUಳಿದ್ದವರೆ ಎಂದು ಸಂಶೋಧನೆಗಳಿಂದ ದೃಢಪಟ್ಟಿದೆ. ಹಾಗಾದರೆ ಒತ್ತಡ ನಿರ್ವಹಣೆ ಹೇಗೆ ಮಾಡುವದು? ಎನ್ನುವದು ನಮ್ಮ ಮುಂದಿರುವ ದೊಡ್ಡ ಪ್ರಶ್ನೆ.

ಈ ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ…ನೋಡಿ..

ಒತ್ತಡವನ್ನು ಗುರುತಿಸಿಕೊಳ್ಳಿ: ಯಾವ ತೆರನಾದ ಕಾರ್ಯ ನಿರ್ವಹಣೆ ನಿಮಗೆ ಕಿರಿಕಿರಿಯೆನಿಸುತ್ತದೆ ಮತ್ತು ಸವಾಲೆನಿಸುತ್ತದೆ. ಎನ್ನುವದನ್ನು ಗುರುತಿಸಿ.ನಿಮಗೆ ಗುರುತಿಸಲು ಅಸಾಧ್ಯವೆನಿಸಿದರೆ ನಿಮ್ಮ ಗೆಳೆಯರ ಸಹೋದ್ಯೋಗಿಗಳ ಅಥವಾ ಕುಟುಂಬದ ಸದಸ್ಯರ ಸಹಾಯ ಪಡೆದುಕೊಳ್ಳಿ.

ಕಾರಣ ಹುಡುಕಿ: ಅನೇಕ ಬಾರಿ ನಮ್ಮ ಟೆನ್ಷನ್‍ಗೆ ಕಾರಣ ನಮ್ಮ ಅಟೆನ್ಷನ್ ಕೊರತೆ ಎಂದು ಗೊತ್ತಿದ್ದರೂ ಅಸಹಾಯಕರಂತೆ ವರ್ತಿಸುತ್ತೇವೆ. ಮಾಡುವ ಕಾರ್ಯಗಳಿಗೆ ಸರಿಯಾದ ಪ್ರಮಾಣದಲ್ಲಿ ಅಟೆನ್ಷನ್ ನೀಡಿದರೆ ನೋ ಟೆನ್ಷನ್ .ಕೆಲವು ಸಲ ಕಾರಣ ಹುಡುಕುವದು ತುಂಬಾ ಕಷ್ಟದಾಯಕವೆನಿಸಬಹುದು ಆಗ ದಿನ ನಿತ್ಯ ನಿಮ್ಮನ್ನು ನೀವು ಆತ್ಮಾವಲೋಕನಕ್ಕೆ ಒಳಪಡಿಸಿಕೊಂಡರೆ ಉತ್ತಮ ಫಲಿತಾಂಶ ಖಚಿತ.

ಯೋಜನೆ ಹಾಕಿಕೊಳ್ಳಿ: ಎಷ್ಟೋ ಬಾರಿ ನಮ್ಮ ಒತ್ತಡಕ್ಕೆ ಪರಿಹಾರ ಗೊತ್ತಿದ್ದರೂ ನಾವು ಅದನ್ನು ಅಳವಡಿಸಿಕೊಳ್ಳದೇ ಒತ್ತಡಕ್ಕೆ ಬಲಿಯಾಗುತ್ತೇವೆ. ಪರಿಹಾರ ಅನುಷ್ಟಾನಗೊಳಿಸಲು ದೃಢ ಮನಸ್ಸು ಮಾಡಿ, ನಿರ್ಧಿಷ್ಟ ಯೋಜನೆ ಹಾಕಿಕೊಂಡು ಅನುಸರಿಸುವದು ಅತ್ಯಗತ್ಯ.

ತಂತ್ರ ಬಳಿಸಿ: ಮಾಡುವ ಕೆಲಸದಲ್ಲಿ ಗಮನ ಹೆಚ್ಚಿಸಿಕೊಳ್ಳಲು ಧ್ಯಾನಕ್ಕೆ ಮೊರೆ ಹೋಗಲೇ ಬೇಕು. ಧ್ಯಾನದಿಂದ ಮಾನಸಿಕ ಮತ್ತು ದೈಹಿಕ ಬಲ ವೃದ್ಧಿಯಾಗುತ್ತೆ.. ಮನಸ್ಸಿಗೆ ಹಿತ ನೀಡುವ ಸಂಗೀತವನ್ನು ಕೇಳುವ, ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಿ.

ಕುಟುಂಬ ಗೆಳೆಯರಿಗೆ ಮಹತ್ವ ಮನೆ ಮಂದಿಯ ಜೊತೆ ಬೆರೆತು ನಗು ನಗುತ್ತ ಸಮಯ ಕಳೆಯಿರಿ ಅದು ನಿಮ್ಮ ಬಾಂಧವ್ಯ ವೃಧ್ದಿಯನ್ನಷ್ಟೇ ಅಲ್ಲ ನಿಮ್ಮ ಮಾನಸಿಕ ನೆಮ್ಮದಿಯನ್ನೂ ಹೆಚ್ಚಿಸುತ್ತದೆ. ಬಿಡುವಿನ ವೇಳೆಯಲ್ಲಿ ಗೆಳೆಯರ ಜೊತೆ ಪಿಕ್ನಿಕ್, ಪ್ರವಾಸ ಕೈಗೊಳ್ಳಿ.

ಹಾಸ್ಯ ಪ್ರಜ್ಞೆ: ಹಾಸ್ಯ ಎಂಥ ಒತ್ತಡವನ್ನೂ ಮರೆಯಾಗಿಸಬಲ್ಲದು.ನಿಮ್ಮ ಮಾತಿನಲ್ಲಿ ಹಿತ ಮಿತವಾದ ಹಾಸ್ಯವಿರಲಿ.ಹಾಸ್ಯ ಧಾರಾವಾಹಿ ಮತ್ತು .ಮನರಂಜನೆಗೆ ಪೂರಕವಾದ ಕ್ರಿಯೆಗಳಲ್ಲಿ ತೊಡಗಿ.ಸದಭಿರುಚಿಯ ಸಿನಿಮಾ ನೋಡಿ, ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳಿ .ಸ್ವಾಮಿ ವಿವೇಕಾನಂದರು ಹೇಳುವಂತೆ “ಆಲೋಚನೆಗಳೇ ನಮ್ಮ ಯಶಸ್ಸಿಗೆ ಕಾರಣ.” ಸಕಾರಾತ್ಮಕ ವಿಚಾರಗಳು ಅನೇಕ ಬಾರಿ ಅತ್ಯದ್ಭುತ ಫಲಿತಾಂಶ ನೀಡಿದ ಉದಾಹರಣೆಗಳಿವೆ. ಸಕಾರಾತ್ಮಕ ವಿಚಾರಗಳಿಂದ ನಮಗೆ ಅಸಾಧ್ಯವೆನಿಸುವ ಕಾರ್ಯಗಳು ಸಾಧ್ಯವಾಗುವವು.

ಸಮತೋಲಿತ ಆಹಾರ: ಬಾಯಿ ರುಚಿಗೆ ದಾಸರಾಗಿ ಆರೋಗ್ಯ ಕೆಡಿಸಿಕೊಳ್ಳದೇ ಸಂತುಲಿತ ಆಹಾರ ತೆಗೆದುಕೊಳ್ಳಿ ನಿಯಮಿತ ವ್ಯಾಯಾಮ ಮಾಡಿ,ಪ್ರಕೃತಿಯ ಮಡಿಲಲ್ಲಿ ಸಮಯ ಕಳೆಯಿರಿ.

ಈ ತಂತ್ರಗಳ ಬಳಸುವ ಬಗ್ಗೆ ಅಟೆನ್ಷನ್ ನೀಡಿದರೆ ನೋ ಟೆನ್ಷನ್.ಹಾಗಾದರೆ ಬನ್ನಿ ಒತ್ತಡವು ನಮ್ಮನ್ನು ಮಣಿಸುವ ಮುನ್ನ ನಾವೇ ಅದನ್ನು ಮಣಿಸಿ ಒತ್ತಡ ರಹಿತ ಜೀವವನ್ನು ನಮ್ಮದಾಗಿಸಿಕೊಳ್ಳೋಣ.

Related Articles

Leave a Reply

Your email address will not be published. Required fields are marked *

Back to top button