ಕಥೆ

ಅಹಿಂಸಾವಾದಿಗಳು ಕಠೋರ ಹಿಂಸೆಗೆ ಬಲಿಯಾದರಾ.?

ದಿನಕ್ಕೊಂದು ಕಥೆ

ಶಾಂತಿದೂತರು

ಲೂಸಿಯಸ್ ಎನಾಲಿಯಸ್
ಸೆನೆಕಾ ರೋಮ್ ದೇಶದ ಶ್ರೇಷ್ಠ ಜ್ಞಾನಿ­ಗಳಲ್ಲಿ ದೊಡ್ಡ ಹೆಸರು. ಆತನ ಪ್ರತಿಭೆ ಅನೇಕ ಕ್ಷೇತ್ರಗಳಲ್ಲಿ ಹರ­ಡಿತ್ತು. ಆತ ಒಬ್ಬ ಕವಿ, ನಾಟಕಕಾರ, ಅಸಾಧಾರಣ ವಾಗ್ಮಿ, ರಾಜಕೀಯ ಚಿಂತಕ ಮತ್ತು ಅಂದಿನ ರೋಮ್‌ನಲ್ಲಿ ಅತ್ಯಂತ ಶ್ರೇಷ್ಠ ದಾರ್ಶನಿಕ ಎಂದು ಹೆಸರು ಮಾಡಿದ್ದ.

ಆತ ಹುಟ್ಟಿದ್ದು ಸುಮಾರು ಎರಡು ಸಾವಿರ ವರ್ಷಗಳ ಹಿಂದೆ. ಹಿಸ್ಪೇ­ನಿಯಾ­ದಲ್ಲಿ ಹುಟ್ಟಿದ್ದರೂ ಪುಟ್ಟ ಮಗುವಾಗಿದ್ದಾಗಲೇ ಆತ ರೋಮ್‌ಗೆ ಬಂದ. ದರ್ಶನ ಶಾಸ್ತ್ರದಲ್ಲಿ ಪರಿಣತಿ ಪಡೆದ. ಬಾಲಕನಾಗಿದ್ದಾಗಲೇ ಆತನ ಬರವಣಿಗೆ ಹಿರಿಯರಿಗೂ ಬೆರಗು ಹುಟ್ಟಿಸುತ್ತಿತ್ತು. ಕ್ರಿಸ್ತ ಶಕ ೩೮ ರಲ್ಲಿ ಕಾಲಿಗುಲಾ ರೋಮ್ ದೇಶದ ಚಕ್ರವರ್ತಿಯಾಗಿದ್ದ. ಸೆನೆಕಾ ಅವನಿಗೆ ಮಾರ್ಗದರ್ಶನ ಮಾಡುತ್ತಿದ್ದ.

ರಾಜರ ಗುಣವೇ ಹೀಗೆ. ಅವರು ಸರಿಯಾದದ್ದನ್ನು ಕೇಳಿಸಿಕೊಳ್ಳು­ವುದಿಲ್ಲ, ತಮಗೆ ಬೇಕಾ­ದ್ದನ್ನು ಮಾತ್ರ ಕೇಳಿಸಿಕೊಳ್ಳುತ್ತಾರೆ. ಸೆನೆಕಾ ತನಗೆ ಬೇಕಾದ್ದನ್ನು ಹೇಳು­ವು­ದಿಲ್ಲ­ವೆಂದು ಕಾಲಿಗುಲಾನಿಗೆ ಸೆನೆಕಾನ ಮೇಲೆ ಕೋಪ ಬಂತು. ಆದರೆ, ಇಂಥ ಜನ­ಪ್ರಿಯ ವ್ಯಕ್ತಿಯನ್ನು ಕೊಂದರೆ ಜನರ ಪ್ರತಿಭಟನೆ ಬಂದಿತೆಂದು ಸುಮ್ಮನಿದ್ದ.

ನಂತರ ಕ್ರಿಸ್ತಶಕ ೫೪ ರಲ್ಲಿ ನೀರೋ ರೋಮ್ ಚಕ್ರವರ್ತಿಯಾದ. ಆದರೆ, ಆತ ಇನ್ನೂ ಹನ್ನೆ­ರಡು ವರ್ಷದ ಹುಡುಗ. ನೀರೋನ ತಾಯಿ ತನ್ನ ಹಿರಿಯ ಮಗ ಬ್ರಿಟಾನಿ­ಕಸ್‌ನಿಗೆ ಪದವಿ ತಪ್ಪಿಸಿ ನೀರೋನಿಗೆ ಚಕ್ರವರ್ತಿ ಪದವಿ ನೀಡಿದ್ದಳು. ಸೆನೆಕಾನನ್ನು ಚಕ್ರ­ವರ್ತಿಯ ಸಲಹೆಗಾರನನ್ನಾಗಿ ನೇಮಿಸಿದಳು. ಮುಂದೆ ಎಂಟು ವರ್ಷ ಸೆನೆಕಾ ಸಲಹೆಗಾರನಾಗಿದ್ದ.

ಅಧಿಕಾರ ಬೆಂಕಿ ಇದ್ದ ಹಾಗೆ. ಮೈ ಕಾಯಿಸಿ­ಕೊ­ಳ್ಳು­ವಷ್ಟು ಮಾತ್ರ ಅದರ ಹತ್ತಿರವಿರಬೇಕು. ಮತ್ತಷ್ಟು ಹತ್ತಿರ ಹೋದರೆ ಸುಟ್ಟು­ಬಿ­ಡುತ್ತದೆ. ಸೆನೆಕಾನ ಉಪದೇಶಗಳನ್ನು ಮೊದಮೊದಲು ಚಕ್ರವರ್ತಿ ಕೇಳಿದ. ನಂತರ ನೀತಿ ಮಾತುಗಳು ಕಿವಿಗೆ ಹಿತವಾಗಲಿಲ್ಲ. ಅವನನ್ನು ದೇಶದಿಂದ ಹೊರಗೆ ಅಟ್ಟಿಬಿಟ್ಟ.

ಇದು ಇಷ್ಟಕ್ಕೇ ನಿಲ್ಲಲಿಲ್ಲ. ಸೆನೆಕಾನ ಮೇಲೆ ಚಕ್ರವರ್ತಿಯ ಹೊಸ ಸಲಹೆ­ಗಾರರು ಅನೇಕ ಆಪಾದನೆಗಳನ್ನು ಹೊರಿಸಿದರು. ಆತ ಅಪಾರ ಆಸ್ತಿ ಹೊಂದಿ­ದ್ದಾ­ನೆಂದು ಕೆಲವರು, ಚಕ್ರ­ವರ್ತಿಯ ಪರಿವಾರದ ಮಹಿಳೆಯ­ರೊಂದಿಗೆ ಅನೈತಿಕ ಸಂಬಂಧ ಇಟ್ಟು­ಕೊಂಡಿದ್ದಾನೆಂದು ಕೆಲವರು ಅಪಾದಿಸಿ­ದರು.

ಇವೆಲ್ಲಕ್ಕಿಂತ ದೊಡ್ಡ ಆಪಾದನೆಯೆಂದರೆ ಆತ ಚಕ್ರವರ್ತಿ ನೀರೋನನ್ನು ಕೊಲ್ಲಲು ಸಂಚು ಮಾಡಿದ್ದಾ­ನೆಂದು ತೀರ್ಮಾನಿಸಿದರು. ಅದನ್ನು ನಂಬಿದ ಚಕ್ರವರ್ತಿ ಸೆನೆಕಾನಿಗೆ ಶಿಕ್ಷೆ ವಿಧಿಸಿದ. ಅದೆಂಥ ಶಿಕ್ಷೆ! ಸೆನೆಕಾ ತನ್ನನ್ನು ತಾನೇ ಕೊಂದುಕೊಳ್ಳಬೇಕು. ಆ ವಿಧಾ­ನವೂ ಅತ್ಯಂತ ಕ್ರೂರವಾದದ್ದು. ಆತ ತನ್ನ ದೇಹದ ನರಗಳನ್ನು ತಾನೇ ಕತ್ತ­ರಿಸಿ­ಕೊಳ್ಳಬೇಕು. ಕತ್ತರಿಸಿದ ನಾಳ­ಗಳಿಂದ ರಕ್ತ ಸೋರಿ ಸೋರಿ ಹೋಗಿ ಅಶಕ್ತತೆ­ಯಿಂದ ಒದ್ದಾಡಿ ಸಾಯಬೇಕು.

ಸೆನೆಕಾ ತನ್ನ ಮುಂಗೈಗಳಲ್ಲಿ ಮತ್ತು ಪಾದದ ಮೇಲಿದ್ದ ನರಗಳನ್ನು ಕತ್ತರಿಸಿಕೊಂಡ. ರಕ್ತ ಸೋರತೊಡಗಿತು. ಅವನಿಗಾಗಲೇ ಅರ­ವತ್ತೆ­ರಡು ವರ್ಷವಿ­ರಬೇಕು. ರಕ್ತ ಸೋರಿಕೆ ನಿಧಾನವಾಗಿ ನೋವು ತಡೆ­ಯಲಸಾಧ್ಯವಾಯಿತು. ಅವನ ಸ್ನೇಹಿತರು, ಶಿಷ್ಯರು ಅವನ ಸುತ್ತ ಅಸಹಾ­ಯಕ­ರಾಗಿ ನೋಡುತ್ತ ನಿಂತಿದ್ದರು.

ರಕ್ತ ಬೇಗ ಹರಿದುಹೋಗಿ ಸಾವು ಬರಲೆಂದು ಆತ ಶಿಷ್ಯರಿಗೆ ಹೇಳಿ ತನ್ನ ದೇಹವನ್ನು ಕುದಿಯುವ ನೀರಿನಲ್ಲಿ ಹಾಕಿಸಿಕೊಂಡ. ಉಗಿ­ಯಲ್ಲಿ ಉಸಿರುಕಟ್ಟಿ ಸತ್ತ. ಅವನ ಶಿಷ್ಯ ಬರೆಯುತ್ತಾನೆ, ನೀರು ಎಷ್ಟು ಕುದಿಯುತ್ತಿತ್ತೆಂದರೆ ನಮ್ಮ ಗುರುವಿಗೆ ನಾವು ಅಂತ್ಯಕ್ರಿಯೆ ಮಾಡುವ ಅವಶ್ಯ­ಕತೆಯೂ ಇರಲಿಲ್ಲ. ಇದು ಒಬ್ಬ ಮಹಾ ದಾರ್ಶ­ನಿಕನಿಗೆ ಸಂದ ಸಾವು.

ನನಗೆ ಒಮ್ಮೊಮ್ಮೆ ಈ ಘಟನೆಗಳು ದಂಗು­ಬಡಿಸು­ತ್ತವೆ. ಏಸುಕ್ರಿಸ್ತ, ಸೆನೆಕಾ, ಸಾಕ್ರೆಟಿಸ್, ಲಿಂಕನ್, ಮಾರ್ಟಿನ್ ಲೂಥರ್ ಕಿಂಗ್ ಮತ್ತು ಮಹಾತ್ಮಾ ಗಾಂಧಿ ಇವರೆಲ್ಲ ಶಾಂತಿ­ದೂತರೇ, ದಾರ್ಶನಿಕರೇ. ಆದರೆ ಇವ­ರೆ­ಲ್ಲರ ಅಂತ್ಯ ಏಕೆ ಹಿಂಸೆಯಲ್ಲಿ ಕಂಡಿತು? ನಮಗೆ ಅಹಿಂಸೆ ಬೇಕಿಲ್ಲವೇ? ಅಥವಾ ವಿರಾಮ­­ವಾಗಿ ಹೊಟ್ಟೆ ತುಂಬ ಊಟ ಮಾಡಿ ಕುಳಿತಾಗ ಕೇಳಿಸಿಕೊಳ್ಳಲು ಮಾತ್ರ ಈ ಮಹಾನುಭಾವರ ಮಾತು­ಗಳು ಬೇಕಾಗಿ, ಜೀವನದಲ್ಲಿ, ನಡೆಯಲ್ಲಿ ಮಾತ್ರ ಹಿಂಸೆ­ಯನ್ನೇ ಬಳಿಸಿ­ಕೊಳ್ಳು­ವುದು ವ್ಯವಹಾರ ಯೋಗ್ಯವೇ?

ಅಹಿಂಸೆ ಕೇವಲ ಪ್ರವ­ಚನದ ಮಾತಾಗಿ, ಹಿಂಸೆ ಬದು­ಕಿನ ಸರಕಾಗಿ ನಿಂತಾಗ, ಈ ಮಹಾನು­ಭಾವರ ಬದು­ಕಿನ ಸಂದೇಶ ನಮ್ಮ ಅಂತರಾಳ­ದಲ್ಲಿ ಯಾಕೆ ಇಳಿಯಲಿಲ್ಲ ಎಂದು ಚಿಂತಿಸಿದಾಗ, ಉತ್ತರವಿಲ್ಲದೇ ಮನ ಭಾರವಾಗುತ್ತದೆ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882

Related Articles

Leave a Reply

Your email address will not be published. Required fields are marked *

Back to top button