ವಿನಯ ವಿಶೇಷ

ವಿಕಲಚೇತನರ ಬಾಳಿಗೆ ಬೆಳಕಾದ ಗಾನಯೋಗಿ

ಗಾನಯೋಗಿ ಪಂಚಾಕ್ಷರಿ ಗವಾಯಿಗಳ ಪುಣ್ಯದಿನದ ಪ್ರಯುಕ್ತ ಈ ಲೇಖನ..

ಗದುಗಿನ ಪಂಚಾಕ್ಷರಿ ಗವಾಯಿಗಳು ಕನ್ನಡ ನಾಡಿನಲ್ಲಿ ಮನೆಮಾತು.ಪ್ರಸಿದ್ದ ಗಾನಯೋಗಿ,ಸಂಗೀತ ಸಾಗರ,ಅಂಧರ, ಅನಾಥರ, ವಿಕಲಚೇತನರ ಬಾಳಿಗೆ ಬೆಳಕಾದ ಪುಣ್ಯ ಪುರುಷ ಇವರು.ಸರ್ಕಾರ ಅಥವಾ ವಿಶ್ವವಿದ್ಯಾಲಯ ಮಾಡಿದಂತಹ ಕಾರ್ಯವನ್ನು ಮಾಡಿ ತೋರಿಸಿದ ಕ್ರಿಯಾಶೀಲ, ಸೃಜನಶೀಲ ವ್ಯಕ್ತಿತ್ವ ಇವರದು.ಗದುಗಿನ ಪ್ರಸಿದ್ಧ ಸಂಗೀತ ಆಶ್ರಮವಾದ ಶ್ರೀ ವೀರೇಶ್ವರ ಪುಣ್ಯಾಶ್ರಮದ ಸಂಸ್ಥಾಪಕರು.

ಜನನ.
………………………………………
ಇವರು ಜನಿಸಿದ್ದು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕಾಡಶೆಟ್ಟಿ ಹಳ್ಳಿಯಲ್ಲಿ ಫೆಬ್ರುವರಿ 2. 1892ರಂದು.ತಂದೆ,ಗುರುಪಾದಯ್ಯ ತಾಯಿ,ನೀಲಮ್ಮ.ಇವರ ಹುಟ್ಟು ಹೆಸರು ಗದಿಗೆಯ್ಯ.ಇವರ ಅಣ್ಣ ಗುರುಬಸ್ಸಯ್ಯ ಇಬ್ಬರೂ ಹುಟ್ಟು ಕುರುಡರು.ಸ್ಥಳೀಯವಾಗಿ ಸಂಗೀತ ಶಿಕ್ಷಣ ಪಡೆದು ಇವರು ಶ್ರೀ ಹಕ್ಕಲ ಬಸವೇಶ್ವರ ಜಾತ್ರೆಯಲ್ಲಿ ಹಾಡುತ್ತಿದ್ದ ಇವರನ್ನು ಪೂಜ್ಯ ಹಾನಗಲ್ ಕುಮಾರ ಸ್ಪಾಮಿಗಳು ಗುರುತಿಸಿ,ಆಶ್ರಯ ನೀಡಿದರು.

ಸಂಗೀತ ಶಿಕ್ಷಣ:
………………………………………
ಹಾನಗಲ್ ಶ್ರೀಗಳು ಹಳ್ಳಿ ಹಳ್ಳಿಗಳಲ್ಲಿ ಭಿಕ್ಷೆ ಎತ್ತಿ ‘ನೆಲವಿಗಿ’ ಯಲ್ಲೊಂದು ಶಿವಯೋಗಿ ಮಂದಿರ ಸ್ಥಾಪಿಸಿ,ಇತರ ಹುಡುಗರ ಜೊತೆಗೆ ಈ ಇಬ್ಬರು ಸಹೋದರರು ಸಂಗೀತಾಭ್ಯಾಸ ಮಾಡುತ್ತಿದ್ದಾಗ ಅಣ್ಣ ಗುರುಬಸ್ಸಯ್ಯ ಕಾಲರಾ ರೋಗದಿಂದ ಮರಣವನ್ನಪ್ಪಿದರು. ಗದಿಗೆಯ್ಯನಿಗೆ ಹದಿನೆಂಟು ವರ್ಷವಾದಾಗ ಮೈಸೂರಿನಲ್ಲಿ ಗೌರಿಶಂಕರ ಸ್ಟಾಮಿಗಳಲ್ಲಿ ಕರ್ನಾಟಕ ಸಂಗೀತ ವಿದ್ಯಾಭ್ಯಾಸವಾಯಿತು.

ನಾಲ್ಕು ವರ್ಷ ಮೈಸೂರಿನಲ್ಲಿ ಜೋಳಿಗೆ ಹಿಡಿದು ಹೊಟ್ಟೆ ತುಂಬಿಸಿಕೊಂಡ ಗದಿಗೆಯ್ಯ ಬಳಿಕ ಬಾಗಲುಕೋಟೆಯಲ್ಲಿ ನಡೆಯುತ್ತಿದ್ದ ಅಖಿಲ ಭಾರತ ವೀರಶೈವ ಮಹಾಸಭೆಯ ಅಧಿವೇಶನದಲ್ಲಿ ಶ್ರೀ ಕುಮಾರ್ ಸ್ವಾಮಿಗಳಿಂದ ‘ ಪಂಚಾಕ್ಷರಿ ಗವಾಯಿ’ ಎಂದು ಉದ್ಘೋಷಿತರಾದರು. ನಂತರ ನಾಲ್ಕು ವರ್ಷ ಹಿಂದುಸ್ತಾನಿ ಸಂಗೀತವನ್ನು ಅಭ್ಯಸಿಸಿ ಉಭಯ ಸಂಗೀತ ಪಂಡಿತರಾದರು.

ಸಂಗೀತದ ಮೂಲಕವೇ ‘ಸಮಾಜ ಸೇವೆ’ ಮಾಡಲು ಬಯಸಿದ್ದ ಪಂಚಾಕ್ಷರಿ ಗವಾಯಿಗಳು ಕಂಚಗಲ್ ಬಿದಿರೆ ಗ್ರಾಮದ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ ಯಿಂದ ಶಿವದೀಕ್ಷೆ ಪಡೆದು ಆಧ್ಯಾತ್ಮ ಮಾರ್ಗದಲ್ಲಿ ಮುನ್ನಡೆದರು.
ಸಂಗೀತ ಪ್ರಚಾರ:
……………………………………..
ಪಂಚಾಕ್ಷರಿ ಗವಾಯಿಗಳು ನಾಡಿನಾದ್ಯಂತ ಸಂಚರಿಸುತ್ತ ಒಂದು ಸಂಚಾರಿ ಪಾಠಶಾಲೆಯನ್ನೇ ಪ್ರಾರಂಭಿಸಿದರು. 1944 ರಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ನಿಡಗುಂದಿಕೊಪ್ಪದಲ್ಲಿ’ಶಿವಯೋಗ ಮಂದಿರ’ ಸ್ಥಾಪಿಸಿದರು.

ಶಾಖೆಯಾಗಿ ಸಂಗೀತ ಶಾಲೆ ಆರಂಭಿಸಿ,ಕನ್ನಡ ಮತ್ತು ಸಂಸ್ಕೃತ ಬೋಧಿಸುತ್ತಾ ಸಂಗೀತವನ್ನು ಕಲಿಸುತ್ತಿದ್ದರು. ಇವರು ಶಿಷ್ಯರು ಬಳಗದಲ್ಲಿ ಉತ್ತರಾಧಿಕಾರಿಯಾಗಿ ದೊರೆತವು ಪುಟ್ಟರಾಜ ಗವಾಯಿಗಳು. ಸಂಗೀತ ಶಾಲೆಗಳು ಖರ್ಚು ಮೂಡಿಸಲು ನಾಟಕ ಕಂಪನಿ ಆರಂಭಿಸಿ ಕೈಸುಟ್ಟುಕೊಂಡರು.

ಈ ಸಂದರ್ಭದಲ್ಲಿ 1930 ರಲ್ಲಿ ಪಂಚಾಕ್ಷರಿ ಗವಾಯಿಗಳ ರೂವಾರಿಯಾಗಿದ್ದ ಹಾನಗಲ್ ಕುಮಾರ ಸ್ಪಾಮಿಗಳು ಲಿಂಗೈಕ್ಯ ರಾದರು. ಇದೇ ಸಮಯದಲ್ಲಿ ಬರಗಾಲ ಬಿದ್ದಿದ್ದರಿಂದ ಪಂಚಾಕ್ಷರಿ ಗವಾಯಿಗಳು ತಮ್ಮ ಶಿಷ್ಯರನ್ನು ಬದುಕಿಸಲು ಪಟ್ಟಪಾಡು ಅಷ್ಟಿಷ್ಟಲ್ಲ.

ಸಂದರ್ಭೋಚಿತ ನೆರವು ನೀಡಿದವರು,ಬಸರಿಗಿಡದ ವೀರಪ್ರನವರು. ಇವರು ಗವಾಯಿಗಳಿಗಾಗಿ ಗದುಗಿನಲ್ಲಿ ತಮ್ಮ ಜಾಗದಲ್ಲಿಯೇ ಒಂದು ತಗಡಿನ ಶೆಡ್ ಹಾಕಿಸಿ,ಧನ,ಧಾನ್ಯದ ಸಹಾಯ ನೀಡಿ ಸಂಗೀತ ಶಾಲೆಗೆ ನೆರವಾದರು. ಈ ಸಂಗೀತ ಶಾಲೆಗೆ ಗವಾಯಿಗಳು ‘ಶ್ರೀ ವೀರೇಶ್ವರ ಪುಣ್ಯಾಶ್ರಮ’ ಎಂದು ಹೆಸರಿಟ್ಟರು.

ಶ್ರೀ ವೀರೇಶ್ವರ ಪುಣ್ಯಾಶ್ರಮ:
………………………………………
ಸಂಚಾರಿ ಸಂಗೀತ ಶಾಲೆ ನಾಡಿನುದ್ದಗಲಕ್ಕೂ ಸಂಚರಿಸಿ,1933 ದಿಲ್ಲಿ ರಾವ್ ಬಹದ್ದೂರ್ ಮಾನ್ವಿ ಹಾಗೂ ಬಸರಿಗಿಡದ ವೀರಪ್ಪನವರ ಸಹಾಯ,ಸಹಕಾರದಿಂದ ಗದುಗಿನಲ್ಲಿ ‘ಶ್ರೀ ವೀರೇಶ್ವರ ಪುಣ್ಯಾಶ್ರಮ’ ಆರಂಭಗೊಂಡಿತು. ಅಂದಿನಿಂದ ಇಂದಿನವರೆಗೆ ಸರ್ಕಾರ ಮಾಡಿದಂತಹ ಕಾರ್ಯವನ್ನು ಈ ಪುಣ್ಯಾಶ್ರಮದ ಮಾಡುತ್ತಾ ಬಂದಿರುವುದು ಶ್ಲಾಘನೀಯ. ಇದಕ್ಕೆಲ್ಲ ಮೂಲ ಚೇತನಶಕ್ತಿ ಪಂಚಾಕ್ಷರಿ ಗವಾಯಿಗಳು. ಅವರ ನಂತರ ಪುಟ್ಟರಾಜ ಗವಾಯಿಗಳು.ಈಗ ಪುಣ್ಯಾಶ್ರಮವನ್ನು ಪೂಜ್ಯ ಶ್ರೀ ಕಲ್ಲಯ್ಯಜ್ಜನವರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ.

ವಿಕಲಚೇತನರಿಗೆ ಬೆಳಕಾದ ಪುಣ್ಯಾಶ್ರಮ:
………………………………………
ಸುಮಾರು ಏಳು ದಶಕಗಳ ಕಾಲ ಅಂಧ,ಅನಾಥರ, ವಿಕಲಚೇತನರ ಬಾಳಿಗೆ ಬೆಳಕಾಗಿ ಅವಿರಿತ ಸೇವೆ ಮುಂದುವರಿಸಿದೆ. ಪ್ರಸ್ತುತ ಸುಮಾರು 600ಕ್ಕೂ ಹೆಚ್ಚು ಮಕ್ಕಳಿಗೆ ಸಂಗೀತ,ವಸತಿ,ವಿದ್ಯೆ ಹೀಗೆ ತ್ರಿವಿಧ ದಾಸೋಹ ಕಾರ್ಯ ಮುಂದುವರೆಸಿದೆ.

ಬೆಳಿಗ್ಗೆ ಹಾಗೂ ಸಂಜೆ ನಾಲ್ಕು ತಾಸು ಮಕ್ಕಳಿಗೆ ಪಾಠ, ಭಕ್ತರಿಗೆ ಪುರಾಣ, ಪ್ರವಚನ ಪಠಣ ಹಾಗೂ ಪೌರಾಣಿಕ ನಾಟಕಗಳ ಮಾರ್ಗದರ್ಶನ,ಆಶ್ರಮಕ್ಕೆ ಬಂದ ಭಕ್ತರ ಯೋಗ ಕ್ಷೇಮದಂತಹ ಜ್ಞಾನದಾಸೋಹ,ಅನ್ನದಾಸೋಹ ಕಾರ್ಯ ನಡೆಯುತ್ತಿದೆ.

ಪುಣ್ಯಾಶ್ರಮದ ಆಸ್ತಿ ಎಂದರೆ ಹಾನಗಲ್ ಕುಮಾರ ಸ್ಪಾಮಿಗಳು ನೀಡಿದ ದಂಡ ಮತ್ತು ಜೋಳಿಗೆ. ಲಕ್ಷಾಂತರ ಭಕ್ತರು, ಸಾವಿರಾರು ಅಭಿಮಾನಿಗಳು,ಆಶ್ರಮದ ಸಾವಿರಾರು ವಿದ್ಯಾರ್ಥಿಗಳು ಹಾಗೂ ಆಶ್ರಯದಲ್ಲಿ ಕಲಿತು ಹೋಗಿ ನಾಡಿನಾದ್ಯಂತ ಇರುವ ಸಂಗೀತ ದಿಗ್ಗಜರು.

ಪುಣ್ಯಾಶ್ರಮದ ಪೂಜ್ಯರು.
………………………………………
ಪಂಚಾಕ್ಷರಿ ಗವಾಯಿಗಳು ವೀರೇಶ್ವರ ಪುಣ್ಯಾಶ್ರಮವನ್ನು ಕಟ್ಟಿ ಬೆಳೆಸಿದರು.(1914–1944) ನಂತರ ಪುಟ್ಟರಾಜ ಗವಾಯಿಗಳು (1944–2010) ಪುಣ್ಯಾಶ್ರಮವನ್ನು ಉನ್ನತ ಸ್ಥಿತಿಗೆ ಕೊಂಡೊಯ್ದರು.2010ರಿಂದ ಪ್ರಸ್ತುತದವರೆಗೆ ಪೂಜ್ಯ ಕಲ್ಲಯ್ಯಜ್ಜನವರು ಪುಣ್ಯಾಶ್ರಮದ ಮಹಾಕಾರ್ಯಗಳನ್ನು ಮುಂದುವರಿಸಿದ್ದಾರೆ.

ಪಂಚಾಕ್ಷರಿ ಗವಾಯಿಗಳು ಸದಾ ಹಾದಿಯನ್ನೇ ಧರಿಸುತ್ತಿದ್ದರು.ದೇಶವ್ಯಾಪಿ ಸಂಚಾರದಲ್ಲಿಯೂ ಕನ್ನಡದಲ್ಲಿಯೇ ಗಾಯನಮಾಡಿ ಕನ್ನಡ ಪ್ರೇಮ ಹೊಂದಿದ್ದರು.

ಅನಾರೋಗ್ಯರಾಗಿ ಉದರರೋಗದಿಂದ ಬಳಲುತ್ತಿರುವಾಗ ಆಯುರ್ವೇದ ಹೊರತಾಗಿ, ಇಂಗ್ಲೀಷ್ ವೈದ್ಯಕೀಯ ಪದ್ದತಿಗೆ ಒಪ್ಪಲಿಲ್ಲ.ಕೊನೆಗೆ ಇದೇ ರೋಗಕ್ಕೆ ಬಲಿಯಾಗಿ ಜೂನ್11.1944ರಂದು ಪಂಚಾಕ್ಷರಿ ಗವಾಯಿಗಳು ವಿಶ್ವ ಸಂಗೀತದಲ್ಲಿ ಲೀನರಾದರು. ನಿಧನ ಹೊಂದಿದರು.

ಇಂತಹ ಮಹಾನ್ ಚೇತನವನ್ನು, ಸಮಾಜಸೇವಕನನ್ನು, ದಾಸೋಹಿಯನ್ನು ಹಾಗೂ ಗಾನಯೋಗಿಯನ್ನು ಕನ್ನಡನಾಡು ಕಳೆದುಕೊಂಡಿತು. ಸಾವಿರಾರು ವಿಕಲಚೇತನರ,ಅನಾಥರು ಬಾಳಿಗೆ ಬೆಳಕು ನೀಡಿದ ಈ ಜ್ಯೋತಿಯನ್ನು ಮರೆಯುವುದು ಅಸಾಧ್ಯ ದ ಮಾತು.ಅವರ ಪುಣ್ಯ ದಿನದ ಸ್ಮರಣೆ ಸದಾ ನಿಮ್ಮ ಹೃದಯದಲ್ಲಿ ಮನೆ ಮಾಡಲಿ..

-ಡಾ.ಗಂಗಾಧರಯ್ಯ ಹಿರೇಮಠ.ಪ್ರಾಧ್ಯಾಪಕರು.ಸ.ಪ್ರ.ದ.ಮಹಿಳಾ ಕಾಲೇಜು, ದಾವಣಗೆರೆ.

Related Articles

Leave a Reply

Your email address will not be published. Required fields are marked *

Back to top button