ಭಾಗ್ಯಲಕ್ಷ್ಮಿ ಯೋಜನೆ : ಶೀಘ್ರವೇ 2.30 ಲಕ್ಷ ಹೆಣ್ಣು ಮಕ್ಕಳ ಖಾತೆಗೆ ಮೆಚ್ಯುರಿಟಿ ಹಣ ಹಾಕಲು ಸಿದ್ಧತೆ!
ಬೆಂಗಳೂರು : ಭಾಗ್ಯಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದ್ದು, ಬಿ.ಎಸ್. ಯಡಿಯೂರಪ್ಪನವರ ಕನಸಿನ ಕೂಸು ಭಾಗ್ಯಲಕ್ಷ್ಮಿ ಯೋಜನೆಗೆ 18 ವರ್ಷ ತುಂಬಿದ್ದು, ಶೀಘ್ರವೇ ನೋಂದಾಯಿತಿ 2.30 ಲಕ್ಷ ಫಲಾನುಭವಿಗಳಿಗೆ ಮೆಚ್ಯುರಿಟಿ ಹಣ ಸಿಗಲಿದೆ.
18 ವರ್ಷಗಳ ಹಿಂದೆ ಭಾಗ್ಯಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಸಿದವರಿಗೆ ಏಪ್ರಿಲ್ ಮತ್ತು ಮೇ ತಿಂಗಳ ಅಂತ್ಯಕ್ಕೆ ಮೆಚ್ಯುರಿಟಿಗೆ ಅರ್ಹರಾಗಿದ್ದಾರೆ. ಹೀಗಾಗಿ ಶೀಘ್ರವೇ ನೋಂದಾಯಿತ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲು ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿದ್ಧತೆ ನಡೆಸಿದೆ.
ಭಾಗ್ಯಲಕ್ಷ್ಮಿ ಯೋಜನೆಯ ಹಣ ಪಡೆಯಲು ಫಲಾನುಭವಿಗಳು ಬಿಪಿಎಲ್ ಕಾರ್ಡ್ ಕಡ್ಡಾಯವಾಗಿ ಹೊಂದಿರಬೇಕು. ಶಾಶ್ವತ ಕುಟುಂಬ ಯೋಜನೆ ಅಳವಡಿಸಿಕೊಂಡು ಮೂರು ಮಕ್ಕಳು ಮೀರದಂತಿರಬೇಕು. ಫಲಾನುಭವಿ ಮಗು ಕಡ್ಡಾಯವಾಗಿ 8 ನೇ ತರಗತಿ ವಿದ್ಯಾಭ್ಯಾಸ ಮಾಡಿದ ದೃಢೀಕರಣ, ಬಾಲ ಕಾರ್ಮಿಕ, ಬಾಲ್ಯ ವಿವಾಹಕ್ಕೆ ಒಳಗಾಗಿರಬಾರದು ಎನ್ನುವ ನಿಯಮ ಕಡ್ಡಾಯಗೊಳಿಸಲಾಗಿದೆ.
ಬಡತನ ರೇಖೆಗಿಂದ ಕೆಳಗಿರುವ ಕುಟುಂಬಗಳಲ್ಲಿ ಜನಿಸಿದ ಹೆಣ್ಣು ಮಕ್ಕಳ ಭವಿಷ್ಯಕ್ಕೆ ನೆರವಾಗುವಂತೆ 2006-07 ರಲ್ಲಿ ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸಮ್ಮಿಶ್ರ ಸರ್ಕಾರ ಭಾಗ್ಯಲಕ್ಷ್ಮಿ ಯೋಜನೆ ಜಾರಿಗೆ ತಂದಿತ್ತು.