ವಿಷ ಸೇವಿಸಿ ಪ್ರೇಮಿಗಳಿಬ್ಬರ ಆತ್ಮಹತ್ಯೆ
ಶಹಾಪುರಃ ಗ್ರಾಮದ ಹೊರವಲಯದ ಜಮೀನೊಂದರಲ್ಲಿ ಕ್ರಿಮಿನಾಶಕ ಸೇವಿಸಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹುರಸಗುಂಡಿಗಿ ಗ್ರಾಮದಲ್ಲಿ ನಡೆದಿದೆ.
ಸುವರ್ಣ (22) ಹಾಗೂ ವಿಶ್ವರಾಧ್ಯ ಅಲಿಯಾಸ್ ಈಶಪ್ಪ (22) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಸುವರ್ಣ ಹಾಗೂ ಈಶಪ್ಪ ಕಳೆದ ನಾಲ್ಕೈದು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ಈ ನಡುವೆ ಎರಡು ವರ್ಷದ ಹಿಂದೆ ಸುವರ್ಣಳನ್ನು ಗೋಡಿಹಾಳ ಮೂಲದ ಬಸವರಾಜ ಎಂಬಾತನೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಗಂಡ ಬಸವರಾಜನ ಜೊತೆ ಸುವರ್ಣ ಬೆಂಗಳೂರಿನಲ್ಲಿ ವಾಸವಿದ್ದಳು.
ಫೆ.17 ರಂದು ಪತಿಗೆ ತಿಳಿಸದೆ ಬೆಂಗಳೂರಿನಿಂದ ಹುರಸಗುಂಡಿಗಿ ಗ್ರಾಮಕ್ಕೆ ಬಂದ ಸುವರ್ಣ ಶನಿವಾರ ಫೆ.18 ಬೆಳಗ್ಗೆ ತನ್ನ ಪ್ರೇಮಿ ಈಶಪ್ಪನ ಜತೆ ಕ್ರಿಮಿನಾಶಕ ಸೇವಿಸಿ ಹೊಲವೊಂದರಲ್ಲಿ ಮೃತಪಟ್ಟ ಸುದ್ದಿ ಎಲ್ಲಡೆ ಹರಡಿದ ಮೇಲೆಯೇ ಗೊತ್ತಾಗಿದ್ದು ಎನ್ನಲಾಗಿದೆ.
ಈ ಕುರಿತು ಭೀಮರಾಯನ ಗುಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ಕುರಿತು ತನಿಖೆ ನಂತರವೇ ಸತ್ಯಾಸತ್ಯತೆ ಬಯಲಾಗಿದೆ ಎಂದು ಪಿಎಸ್‍ಐ ಗಜಾನನ ಬಿರೆದಾರ ತಿಳಿಸಿದ್ದಾರೆ.