ಗೆಳೆಯ ಹೇಳಿದ ಮಾತು.! ಸೋಮಾರಿತನ ತೊಲಗಿಸಿತು
ದಿನಕ್ಕೊಂದು ಕಥೆ
ಗೆಳೆಯನು ಹೇಳಿದ ಮಾತು.! ಅವನಲ್ಲಿನ ಸೋಮಾರಿತನ ತೊಲಗಿಸಿತು.!
ಒಂದು ಊರಲ್ಲಿ ಚಂದ್ರಯ್ಯ ಎಂಬ ರೈತ ಇದ್ದ. ಆತನಿಗೆ 5 ಹಸುಗಳಿದ್ದವು. ಆದರೆ ಆತ ಮಾತ್ರ “ನಾನು ಅದೃಷ್ಟವಂತ, ಯಾವುದೋ ಒಂದು ದಿನ ನನಗೆ ಅದೃಷ್ಟ ಕೂಡಿಬರುತ್ತದೆ. ಆಕಸ್ಮಿಕವಾಗಿ ನಾನು ಶ್ರೀಮಂತನಾಗುತ್ತೇನೆ…” ಎಂದು ಕೊಳ್ಳುತ್ತಾ ಮನೆಯ ಬಳಿಯೇ ಇರುತ್ತಿದ್ದ.
ಗಂಡನನ್ನು ಏನೂ ಅನ್ನದ ಆತನ ಪತ್ನಿ ಲಕ್ಷ್ಮಮ್ಮ ಅಕ್ಕಪಕ್ಕದವರನ್ನು ಬೇಡಿಕೊಂಡು ಅವರ ಹೊಲಗಳಿಂದ ನಿತ್ಯ ಸ್ವಲ್ಪ ಹುಲ್ಲು ತಂದು ಹಾಕಿ ಹೇಗೋ ಹಾಗೆ ಹಸುಗಳನ್ನು ಸಾಕುತಿದ್ದರು. ಅವುಗಳ ಹಾಲು ಮಾರಿ ಕುಟುಂಬವನ್ನು ಪೋಷಿಸುತ್ತಿದ್ದರು.
ಒಂದು ದಿನ ಚಂದ್ರಯ್ಯನ ಬಾಲ್ಯದ ಗೆಳೆಯ ಶಿವರಾಂ ಮನೆಗೆ ಬಂದ… ಚಂದ್ರಯ್ಯನ ಸ್ಥಿತಿ ಕಂಡು ಅವನಲ್ಲಿ ಏನಾದರೂ ಬದಲಾವಣೆ ತರಬೇಕೆಂದು ಆಲೋಚಿಸಿ… “ಚಂದ್ರಯ್ಯ ನಿನಗೆ ಅದೃಷ್ಟ ಬಾಗಿಲು ತೆಗೆಯುವ ದಿನ ಹತ್ತಿರದಲ್ಲೇ ಇದ್ದಂತಿದೆ.
ಏನಾಯಿತು ಗೊತ್ತಾ? ಇತ್ತೀಚೆಗೆ ಯೋಗಿಯೊಬ್ಬರನ್ನು ಭೇಟಿಯಾದೆ, ನಿನ್ನ ಬಗ್ಗೆ, ಅವರು ಸಹ ಅದನ್ನೇ ಹೇಳಿದರು – ಬೇಡಿದ್ದನ್ನೆಲ್ಲಾ ಕೊಡುವ ಕಾಮಧೇನು ಈ ದೀಪಾವಳಿಯಿಂದ ಸಂಕ್ರಾಂತಿ ಒಳಗೆ ನಮ್ಮ ಊರಿನ ಕಾಡಿಗೆ ಬರಲಿದೆಯಂತೆ..! ಹಸು ಆದಕಾರಣ, ಅದು ಸಹ ಸಹಜವಾಗಿ ಕಾಡಿನಲ್ಲಿ ಹಸುಗಳು ಮೇಯುವ ಸ್ಥಳಕ್ಕೆ ಬರುತ್ತದೆ.
ಆ ಹಸುಗಳನ್ನು ಮೇಯಿಸುತ್ತಾ, ಅವಕ್ಕೆ ಸೇವೆ ಮಾಡುತ್ತಿರುವ ವ್ಯಕ್ತಿಯನ್ನು ಆಶೀರ್ವದಿಸಿ ಹೋಗುತ್ತದಂತೆ! ಇದು ನಿಜವಾಗಿಯೂ ನಿನ್ನಂತಹ ಅದೃಷ್ಟಜಾತಕರಿಗೆ ಒಳ್ಳೆಯ ಅವಕಾಶ!” ಎನ್ನುತ್ತಾನೆ.
ಇದನ್ನು ಕೇಳಿದ ಚಂದ್ರಯ್ಯನಿಗೆ ಎಲ್ಲಿಲ್ಲದ ಉತ್ಸಾಹ ಬರುತ್ತದೆ. ಇನ್ನು ಸುಮ್ಮನೆ ಕೂರಲು ಸಾಧ್ಯವಾಗಲಿಲ್ಲ. ಅಂದಿನಿಂದಲೇ ಹಸುಗಳನ್ನು ಸ್ವತಃ ಮೇಯಿಸಲು ಹೋಗುತ್ತಿದ್ದ.
ಕಾಮಧೇನು ಒಳ್ಳೆಯ ಹಸಿಹುಲ್ಲು ಇರುವ ಸ್ಥಳಕ್ಕೆ ಬರುತ್ತದ್ದಾದ್ದರಿಂದ, ತನ್ನ ಹಸುಗಳನ್ನು ಅಂತಹ ಪ್ರದೇಶಗಳಲ್ಲಿ ಸುತ್ತಾಡಿಸಿದ. ಆ ಹಸುಗಳನ್ನು ಹೊಡೆಯದೆ, ಬೈಯ್ಯದೆ ಪ್ರೀತಿಯಿಂದ ಮಾತನಾಡಿಕೊಳ್ಳುತ್ತಾ ಸೇವೆ ಮಾಡುತ್ತಿದ್ದ.
ಹಸುಗಳಿಗೆ ಹೊಟ್ಟೆ ತುಂಬ ಮೇವು ಸಿಗುವುದು, ನೋಡಿಕೊಳ್ಳುವರು ಸಿಕ್ಕಿದ್ದರಿಂದ ಅವು ಹೆಚ್ಚಿಗೆ ಹಾಲು ಕೊಡಲು ಆರಂಭಿಸಿದವು. ಇದರಿಂದ ಮನೆಯ ಆದಾಯ ಹೆಚ್ಚಾಯಿತು. “ಚಂದ್ರಯ್ಯ ಹಸುಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ” ಎಂದು ಸುತ್ತಮುತ್ತಲಿನವರು ಸಹ ಕೆಲವರು ತಮ್ಮ ಹಸುಗಳನ್ನು ಚಂದ್ರಯ್ಯನಿಗೆ ಕೊಟ್ಟರು. ಹೇಗೂ ಕಾಡಿಗೆ ಹೋಗುತ್ತಿದ್ದೇನೆ ಎಂದುಕೊಂಡು, ಅಡುಗೆಗೆ ಬೇಕಾದ ಸೌಧೆಯನ್ನೂ ತರುತ್ತಿದ್ದ. ಆಗಾಗ ಹುಣಸೆಹಣ್ಣು, ಅದೂ ಇದೂ ಎಂದು ತರುತ್ತಿದ್ದ.
ನಿಟ್ಟುಸಿರು ಬಿಟ್ಟ ಲಕ್ಷ್ಮಮ್ಮ ತಮ್ಮ ಹೊಲದ ಕೆಲಸಗಳನ್ನು ನೋಡಿಕೊಳ್ಳುವುದರ ಜತೆಗೆ ಬೇರೆಯವರ ಹೊಲಗಳಲ್ಲಿ ಕೆಲಸ ಮಾಡಲು ಆರಂಭಿಸಿದರು. ಇನ್ನೇನು, ಸಂಕ್ರಾಂತಿ ಹಬ್ಬ ಬರುವ ವೇಳೆಗೆ ಅವರ ಮನೆ ಧನಧಾನ್ಯಗಳಿಂದ ತುಂಬಿಹೋಯಿತು.
ಹಬ್ಬದ ದಿನ ಚಂದ್ರಯ್ಯನ ಮನೆಗೆ ಬಂದ ಶಿವರಾಂ. “ನಿನ್ನ ಅದೃಷ್ಟ ಕೂಡಿಬಂದಂತಿದೆ ಅಲ್ಲವೇ, ಚಂದ್ರಯ್ಯ! ಮನೆಯಲ್ಲಿ ಸಂತೋಷ, ತೃಪ್ತಿ ಚೆನ್ನಾಗಿ ಕಾಣಿಸುತ್ತಿದೆ” ಎಂದ ಸ್ವಲ್ಪ ಎಚ್ಚರಿಕೆಯಿಂದ, ಕಾಮಧೇನು ಸಂಗತಿ ಆತ ನೆನಪಿಸುತ್ತಾನೇನೋ ಎಂದು ಭಯಬೀಳುತ್ತಾ. “ಏನು ಹೇಳಲಿ ಶಿವರಾಮ್, ನೀನು ಹೇಳಿದ ಮೇಲೆ ನಾನು ಎಷ್ಟೇ ಹುಡುಕಿದರೂ ಕಾಮಧೇನು ಸಿಗಲಿಲ್ಲ.
ಆದರೆ ಏನಾಯಿತೋ ಗೊತ್ತಿಲ್ಲ, ನನಗೆ ನಿನ್ನಂತಹ ಒಳ್ಳೆಯ ಮಿತ್ರನ ಸಲಹೆ ಸಿಕ್ಕಿತು” ಎಂದು ಶಿವರಾಂನನ್ನು ಮೆಚ್ಚಿಕೊಂಡ ಚಂದ್ರಯ್ಯ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882