ಹನುಮಂತ & ಅರ್ಜುನ ನಡುವೆ ನಡೆದ ಪ್ರಸಂಗ
ದಿನಕ್ಕೊಂದು ಕಥೆ
ಅಹಂಕಾರ ಮರ್ದನ
ಅರ್ಜುನನಿಗೆ ಒಮ್ಮೆ ದೊಡ್ಡ ಸಂದೇಹ ಉಂಟಾಯಿತು. ಏನೆಂದರೆ ರಾಮನು ಬಿಲ್ವಿದ್ಯೆಯಲ್ಲಿ ನಿಷ್ಣಾತನಾಗಿದ್ದರೂ ಲಂಕೆಗೆ ಬಂಡೆಗಳ ಸೇತುವೆ ಬದಲಿಗೆ ಸುಲಭದಲ್ಲೇ ಬಾಣಗಳ ಶರಸೇತುವನ್ನೇ ಕಟ್ಟಬಹುದಾಗಿತ್ತಲ್ಲ ಎಂದು. ಹನುಮಂತನಲ್ಲೇ ಈ ಸಂದೇಹ ವ್ಯಕ್ತಪಡಿಸಿ ಅವನಿಂದ ಉತ್ತರ ಪಡೆಯಬೇಕೆಂಬ ಬಯಕೆ ಅವನಲ್ಲಿ ಹೆಚ್ಚಿತು.
ಒಮ್ಮೆ ದಕ್ಷಿಣಭಾರತದಲ್ಲಿ ತೀರ್ಥಯಾತ್ರೆ ಮಾಡುವಾಗ ಶ್ರೀ ರಾಮನಾಮ ಸಂಕೀರ್ತನೆ ನಡೆಯುವ ಜಾಗದಲ್ಲಿ ಅರ್ಜುನನು ಹನುಮಂತನನ್ನೂ ಕಂಡನು. ತಕ್ಷಣವೇ ಆತನೊಡನೆ ಇದೇ ಸಂದೇಹವನ್ನು ಪಾರ್ಥನು ಕೇಳಿಯೇ ಬಿಟ್ಟನು.
ಹನುಮಂತ ಹೇಳಿದ, “ರಾಮನೇನೋ ಬಾಣಗಳ ಸೇತುವೆಯನ್ನು ಕಟ್ಟುತ್ತಿದ್ದ. ಆದರೆ ವಾನರರ ತೂಕವನ್ನು ಅದು ಹೊರಲಾದೀತೇ ? ” “ಏಕೆ ಸಾಧ್ಯವಿಲ್ಲ ? ನಾನೂ ಈಗಲೇ ಬೇಕಾದರೆ ಬಾಣಗಳ ಸೇತುವೆಯನ್ನು ನಿರ್ಮಿಸಿ ತೋರಿಸುವೆ” ಎಂದ ಅರ್ಜುನ.
ಹನುಮಂತನಿಗೂ ಅರ್ಜುನನಿಗೂ ಪಂದ್ಯ ಆರಂಭ. ಅದಕ್ಕೆ ಒಂದು ಷರತ್ತು ಹಾಕಿಕೊಂಡರು. ಒಪ್ಪಂದದ ಅನುಸಾರ ಅರ್ಜುನನು ಕಟ್ಟಿದ ಸೇತುವೆಯ ಮೇಲೆ ಹನುಮಂತನು ನಡೆಯಬೇಕು, ಸೇತುವೆ ಮುರಿದರೆ ಅರ್ಜುನ, ಮುರಿಯದಿದ್ದರೆ ಹನುಮಂತ ಅಗ್ನಿಪ್ರವೇಶ ಮಾಡಬೇಕು.
ಸೇತುವೆಯನ್ನು ಕಟ್ಟಲು ಅರ್ಜುನ ಆರಂಭಿಸಿದ. ಹನುಮಂತ ರಾಮನಾಮ ಜಪದಲ್ಲಿ ತಲ್ಲೀನನಾದ, ಸೇತುವೆ ಸಿದ್ದವಾಯಿತು. ರಾಮನಾಮ ಜಪಿಸುತ್ತಲೇ ಹನುಮಂತ ತನ್ನ ಬಾಲವನ್ನು ಸೇತುವೆಯ ಮೇಲಿಟ್ಟ ತಕ್ಷಣವೇ ಸೇತುವೆ ಒಡೆದು ಚೂರಾಯಿತು. ಒಪ್ಪಂದದಂತೆ ಅಗ್ನಿಪ್ರವೇಶಕ್ಕೆ ಅರ್ಜುನ ತಯಾರಾದ .
ತಾನು ಕಲಿತ ಬಿಲ್ವಿದ್ಯೆ ವ್ಯರ್ಥವಾಯಿತಲ್ಲ ಎಂದು ದುಃಖ ಉಮ್ಮಳಿಸಿತು ಅವನಿಗೆ . ಹನುಮಂತನ ಒತ್ತಾಯಕ್ಕೂ ಬೆಲೆ ಕೊಡದೆ ಚಿತೆಗೆ ಹಾರಲು ಅರ್ಜುನ ಮುಂದಾದಾಗಲೇ ಒಬ್ಬ ಮುದಿಬ್ರಾಹ್ಮಣ ಅಲ್ಲಿಗೆ ಬಂದು “ಏನು ವಿಚಾರ ? ‘ ಎಂದು ತವಕದಿಂದ ಕೇಳಿದ.
ಅರ್ಜುನ ನಡೆದದ್ದೆಲ್ಲ ಹೇಳಿದ. ಆದರೆ ಆತನೆಂದ“ ನಿಮ್ಮ ಪಂದ್ಯಕ್ಕೆ ಸಾಕ್ಷಿ ಇಲ್ಲವಲ್ಲ, ಹಾಗಾಗಿ ಅದು ನ್ಯಾಯಬದ್ಧವಲ್ಲ. ಇನ್ನೊಮ್ಮೆ ಪಂದ್ಯ ನಡೆಸುವೆ. ನಾನೇ ಸಾಕ್ಷಿಯಾಗುವೆ ಎಂದು ಚುರುಕಾದ. ಹನುಮಂತನಿಗೆ ತಾನೇ ಗೆಲ್ಲುವೆನೆಂಬ ಅಚಲ ನಂಬಿಕೆಯಿತ್ತು. ಅರ್ಜುನನಿಗೆ ಇನ್ನೊಮ್ಮೆ ಸೋಲಬೇಕಲ್ಲ ಎಂಬ ನೋವೂ ಇತ್ತು. ಏನೇ ಆಗಲಿ ಶ್ರೀ ಕೃಷ್ಣನ ಸ್ಮರಣೆಯೊಂದಿಗೆ ಪುನಃ ಬಾಣಗಳ ಸೇತುವೆಯನ್ನು ನಿರ್ಮಿಸಿದ.
ಈ ಬಾರಿ ಹನುಮಂತನ ಬಾಲದಿಂದ ಸೇತುವೆ ಮುರಿಯಲಿಲ್ಲ. ಸೇತುವೆಯ ಮೇಲೆ ನಡೆದ, ಕುಣಿದ, ಆದರೂ ಸೇತುವೆ ಭದ್ರವಾಗಿಯೇ ಇತ್ತು. ಕೋಪಗೊಂಡ ಹನುಮಂತ ಸೋಲೊಪ್ಪಿಕೊಳ್ಳಬೇಕಾಯಿತು. ತಕ್ಷಣವೇ ಆ ಬ್ರಾಹ್ಮಣನಿಗೆ ವಂದಿಸಿ ಯಾರು ನೀವು ? ಎಂದು ಬೇಡಿದ. ಆತನೇ ಶ್ರೀಕೃಷ್ಣ ಪರಮಾತ್ಮನಾಗಿದ್ದ.
ಮೊದಲ ಬಾರಿಗೆ ನಾನೇ ಕಟ್ಟುವೆ ಎಂಬ ಜಂಬದಿಂದ ಅರ್ಜುನ ಮುಂದಾದ. ಹನುಮಂತ ರಾಮನಾಮ ಸ್ಮರಿಸುತ್ತಿದ್ದು ರಾಮನ ಶಕ್ತಿಯಿಂದ ಗೆದ್ದ. ಎರಡನೇ ಬಾರಿಗೆ ಅರ್ಜುನ ಕೃಷ್ಣ ಜಪ ಮಾಡುತ್ತಿದ್ದ, ಹನುಮಂತ ಜಂಬದಿಂದ ಮೆರೆಯುತ್ತಿದ್ದ. ಹಾಗೆಂದೇ ಶ್ರೀ ಕೃಷ್ಣನ ಶಕ್ತಿಯೇ ಜಯಿಸಿತು.
ನಿಜವಾಗಿಯೂ ನಮ್ಮೆಲ್ಲರಿಗೂ ಶಕ್ತಿಸಾಮರ್ಥ್ಯವನ್ನು ನೀಡುವವನು ಆ ಭಗವಂತನೇ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.