ಸೇರಿಗೆ ಸವ್ವಾಸೇರು ಈ ಅದ್ಭುತ ನೀತಿ ಕಥೆ ಓದಿ
ನ್ಯಾಯದ ಮಾತು
ಕಡುಧೂರ್ತನಾದ ವ್ಯಾಪಾರಿಯಿದ್ದ. ಆತನ ಮಾತು ಬೆಣ್ಣೆಯಂತೆ, ಹೃದಯವೋ ಕಲ್ಲಿನಂತೆ ಕಠಿಣ. ತನ್ನ ಲಾಭಕ್ಕಾಗಿ ಏನು ಮಾಡಲೂ ಹೇಸುವವನಲ್ಲ.
ರಾಮಯ್ಯ ಆ ಊರಿನ ಬಡ ಕೂಲಿಗಾರ. ಆತನ ಆಸ್ತಿ ಎಂದರೆ ಒಂದು ಹಳೆಯ ದೋಣಿ ಹಾಗೂ ಒಂದು ದೊಡ್ಡ ಕೊಡಲಿ. ದಿನವಿಡೀ ಕೊಡಲಿಯಿಂದ ಸೌದೆ ಸೀಳಿ ಸಂಜೆ ವೇಳೆ ಆ ಸೌದೆ ಹೊರೆ ಕಟ್ಟಿ ದೋಣಿಯಲ್ಲಿ ತುಂಬಿಸಿಕೊಂಡು ಪಕ್ಕದೂರಿಗೆ ಹೋಗಿ ಆ ಮಾರಾಟದಿಂದಲೇ ಜೀವನ ಸಾಗಿಸುತ್ತಿದ್ದ.
ಆತನ ಮಗಳಿಗೆ ವಿವಾಹ ನಿಶ್ಚಯವಾಯಿತು. ಅದಕ್ಕಾಗಿ ಸಾಲ ಕೇಳಲು ಈ ವ್ಯಾಪಾರಿಯ ಬಳಿ ಬರುತ್ತಾನೆ. “ನಾನಿರೋದೇ ನಿಮ್ಮಂಥವರಿಗೆ ಸಾಲ ಕೊಡಲು. ಬೇಕಾದಷ್ಟನ್ನು ಪಡೆದುಕೋ” ಎಂದು ಒಂದು ಚೀಲ ತುಂಬ ಹಣವನ್ನೇ ಸಂತೋಷದಿಂದ ಕೊಟ್ಟೇ ಬಿಟ್ಟ.
ಬಡ್ಡಿ ಎಷ್ಟು ಕೊಡಲಿ? ಎಂದಾಗ ಬಡ್ಡಿಯಾಗಿ ಬೇಡ. ಬದಲಿಗೆ ದೋಣಿ ಕಟ್ಟಿಗೆ ಕೊಟ್ಟರೆ ಒಲೆ ಉರಿಸಲು ಬೇಕಾಗುತ್ತದೆ ಎಂದಾಗ ಬಡವನಿಗೂ ಖುಷಿಯಾಯಿತು.
ವಿವಾಹವಾದ ನಂತರ ಕಷ್ಟಪಟ್ಟು ಕಟ್ಟಿಗೆ ಮಾರಿ ಹಣ ಸೇರಿಸಿ ಒಂದೇ ವರ್ಷದಲ್ಲಿ ದೋಣಿ ಕಟ್ಟಿಗೆಯೊಂದಿಗೆ ಈ ವ್ಯಾಪಾರಿಯ ಬಳಿ ಬಂದೇ ಬಿಟ್ಟ. ಖಾಲಿ ಮಾಡಿಸಿ ಬಿಡಿ ಕಟ್ಟಿಗೆಯನ್ನು ಬೇಗ ಎಂದು ವಿನಂತಿಸಿದ.
ದೋಣಿ ಕಟ್ಟಿಗೆ ಕೊಡುವೆ ಎಂದಿರುವಿ. ಅಂದರೆ ಕಟ್ಟಿಗೆ ಹಾಗೂ ದೋಣಿ ಕೂಡಾ ನನ್ನದಾಗಲೇಬೇಕಲ್ಲವೇ? ಎಂದು ವ್ಯಾಪಾರಿ ಹೇಳಿದಾಗ ರಾಮಯ್ಯನಿಗೆ ಕಣ್ಣುಕತ್ತಲೆ ಬಂತು. ಆ ದೋಣಿ ಇಲ್ಲದಿದ್ದರೆ ಅವನು ಬದುಕುವಂತೆಯೇ ಇರಲಿಲ್ಲ. ತೀರಾ ವ್ಯಥೆಯಿಂದ ಮನೆಗೆ ಬಂದು ಬಿಕ್ಕಿ ಬಿಕ್ಕಿ ಅಳುತ್ತಿದ್ದ.
ಅವನ ಮಗಳಿಗೆ ವ್ಯಾಪಾರಿಯ ದುರ್ಬುದ್ಧಿಯ ಬಗ್ಗೆ ತಿಳಿಯಿತು. ಆ ದಿನವೇ ಆ ಮನೆಯಲ್ಲಿ ಬಾತುಕೋಳಿ ಐದು ಮೊಟ್ಟೆಗಳನ್ನಿಟ್ಟಿತ್ತು. ತಕ್ಷಣವೇ ಆ ದೊಡ್ಡ ಮೊಟ್ಟೆಗಳನ್ನು ಎತ್ತಿಕೊಂಡು ‘ಮೊಟ್ಟೆ ಬೇಕೇ ಮೊಟ್ಟೆ?’ ಎಂದು ಕೂಗುತ್ತಲೇ ಹೊರಟಳು ಶ್ರೀ ರಾಮಯ್ಯನ ಮಗಳು.
ಇದೇ ವ್ಯಾಪಾರಿಯ ಮನೆ ಮುಂದೆ ಕೂಗಲು ಅವನೇ ಹೊರಗೆ ಬಂದು ಎಷ್ಟಮ್ಮ ಬೆಲೆ?’ ಎಂದ ಈಕೆ ‘ಎರಡು ಬೊಗಸೆ ಅಕ್ಕಿ ಕೊಟ್ಟರೆ ಸಾಕು ತಂದೆ’ ಎಂದಳು ನಯವಾಗಿ,
ವ್ಯಾಪಾರಿ ನಗುತ್ತಲೇ ಒಳಗೆ ಹೋಗಿ ಬೊಗಸೆಯಲ್ಲಿ ಅಕ್ಕಿ ತುಂಬಿಕೊಂಡು ಬಂದು ನಿಂತಿದ್ದ ಅವಳೆದುರು ಬಾಚಿ ‘ಹಿಡಿ’ ಎಂದ.
ರಾಮಯ್ಯನ ಮಗಳು ಅವನ ಬೊಗಸೆಗಳನ್ನು ಒಂದು ಕೈಯಿಂದ ಭದ್ರವಾಗಿ ಹಿಡಿದುಕೊಂಡಳು. ಸೊಂಟದಿಂದ ಫಳಪಳ ಹೊಳೆಯುವ ಕತ್ತಿಯನ್ನು ಹೊರಗೆಳೆದು ಗೆರೆ ಎಳೆಯುತ್ತಲೇ ‘ಬೊಗಸೆ ಅಕ್ಕಿ ಎಂದರೆ ನಿನ್ನ ಬೊಗಸೆ ಕೂಡಾ ನನ್ನದಾಗುತ್ತದೆ. ಹಾಗೆಂದೇ ಈಗ ಕತ್ತರಿಸಿ ತೆಗೆದುಕೊಳ್ಳುವೆ’ ಎಂದಳು.
ವ್ಯಾಪಾರಿ ಬೆಪ್ಪಾದ. ಅಕ್ಕಪಕ್ಕದ ಜನರೂ ಈ ಗಲಾಟೆ ಕೇಳಿ ಬಂದರು. ದೋಣಿ ಕಟ್ಟಿಗೆ ಎಂದರೆ ದೋಣಿಯೂ ಸೇರುವುದಾದರೆ ನಿಮ್ಮ ಬೊಗಸೆಯೂ ನನಗೆ ಸೇರಲೇಬೇಕು’ ಎಂದಳಾಕೆ.
ವ್ಯಾಪಾರಿ ಕಣ್ಣೆರೆದ, ಆತ ಮೋಸಮಾಡಿದ ತಪ್ಪಿಗೆ ಒಂದು ಸಾವಿರ ವರಹಗಳನ್ನು ತಪ್ಪು ಕಾಣಿಕೆಯಾಗಿ ಕೊಡಬೇಕೆಂದಾಯಿತು.
ನೀತಿ :– ಸೇರಿಗೆ ಸವ್ವಾಸೇರಿನಂತೆ ಎಂಬ ಗಾದೆ ಮಾತು ಸತ್ಯ. ಒಬ್ಬರಿಗೆ ನಾವು ಮೋಸ ಮಾಡಿದರೆ ಇನ್ನೊಬ್ಬರು ನಮಗೆ ಮೋಸ ಮಾಡುವರು ಎಂಬುದು ಮರೆಯಬಾರದು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.