ತ್ಯಾಗವಿಲ್ಲದ ಭೋಗ ಬೇಕೆ?
ಮುಲ್ಲಾ ನಸ್ರುದ್ದೀನ್ ಒಮ್ಮೆ ಮಾರುಕಟ್ಟೆಯಲ್ಲಿ ನಿಂತು ಜೋರಾಗಿ ಕೂಗತೊಡಗಿದ.
“ಓ ಮಹಾಜನಗಳೇ, ಇಲ್ಲಿ ಕೇಳಿ ನಿಮಗೆ ಕಷ್ಟಪಡದೇ ವಿದ್ಯೆ ಬೇಕೆ? ಶ್ರಮ ಪಡದೇ ಸಂಪತ್ತು ಬೇಕೆ? ತ್ಯಾಗವಿಲ್ಲದೆ ಭೋಗಬೇಕೆ?’
ಕೂಡಲೇ ಜನರು ಮುಲ್ಲಾನ ಸುತ್ತ ನೆರೆದರು. ‘ನಮಗೆ ಬೇಕು, ನಮಗೆ ಬೇಕು’ ಎಂಬ ನೂರಾರು ದ್ವನಿಗಳು ಏಕಕಂಠದಲ್ಲಿ ಮೊಳಗಿದವು.
ಆಗ ಮುಲ್ಲಾ ತಣ್ಣಗೆ ಬಹಳ ಸಂತೋಷ. ನೀವೆಲ್ಲ ಇವನ್ನು ಹುಡುಕಿ ಬಂದದ್ದು ನನಗಂತು ತುಂಬ ಸಂತೋಷವನ್ನೇ ಕೊಟ್ಟಿದೆ. ಆದರೆ ನಿಮ್ಮಲ್ಲಿ ನನ್ನದೊಂದು ವಿನಂತಿ, ಕಷ್ಟವಿಲ್ಲದ ವಿದ್ಯೆ, ಶ್ರಮಪಡದ ಸಂಪತ್ತು ತ್ಯಾಗವಿಲ್ಲದ ಭೋಗಗಳು ನಿಮಗೇನಾದರೂ ದೊರಕಿದರೆ ನನಗೂ ದಯವಿಟ್ಟು ತಂದುಕೊಡಿ! ಎಂದ.
ವಿದ್ಯೆಯನ್ನು ಗಳಿಸಬೇಕಾದರೆ, ವಿದ್ಯಾರ್ಥಿಯಾದವನು ನಿರಂತರವಾಗಿ ಶ್ರಮವನ್ನು ಪಡಲೇಬೇಕು. ಸುಖವನ್ನು ಅಪೇಕ್ಷಿಸುವವನು ವಿದ್ಯೆಯನ್ನು ಗಳಿಸಲಾರ. ಹೀಗಾಗಿ ವಿದ್ಯಾರ್ಥಿ ಜೀವನದಲ್ಲಿ ಮನಸ್ಸು ಸುಖದ ಕಡೆಗೆ ಹರಿಯಬಾರದು ಎಂದೇ ಪ್ರಾಚೀನ ಕಾಲದಲ್ಲಿ ಗುರುಕುಲಗಳಲ್ಲಿ ವಿದ್ಯಾರ್ಥಿಗಳು ಗುರುವಿನ ಸೇವೆಯನ್ನು ಮಾಡಿಕೊಂಡು ವಿದ್ಯೆಯನ್ನು ಪಡೆಯಬೇಕೆಂಬ ಪದ್ಧತಿ ಇದ್ದಿರಬಹುದು ಎನ್ನಿಸುತ್ತದೆ.
ಸಂಪತ್ತೆಂಬುದು ನಮ್ಮ ಶ್ರಮವನ್ನು ಆಧರಿಸಿಯೇ ಲಭಿಸುವಂಥದ್ದು, ಹನಿ ಹನಿಗೂಡಿದರೆ ಹಳ್ಳ ಎಂಬಂತೆ ಸಂಪತ್ತಿನ ಸಂಗ್ರಹಕ್ಕೆ ನಾವು ನಿರಂತರವಾಗಿ ಬೆವರನ್ನು ಹರಿಸಲೇಬೇಕು. ನಮ್ಮ ಬೆವರನ್ನು ಹರಿಸದೇ ಸಂಪಾದಿಸಿದ ಸಂಪತ್ತು ಕಳ್ಳತನಕ್ಕೆ ಸಮ. ಹೀಗಾಗಿ ಶ್ರಮಪಟ್ಟು ಸಂಪಾದಿಸಿದ ಸ್ವತ್ತು ಮಾತ್ರ ನಮ್ಮದು. ಮತ್ತೆ, ಶ್ರಮಪಡದೇ ಸಂಪತ್ತು ಸಹ ನಮ್ಮನ್ನು ಸೇರದು.
ತ್ಯಾಗ ಮತ್ತು ಭೋಗಗಳು ಜೀವನದ ಎರಡು ಅವಿಭಾಜ್ಯ ಅಂಗಗಳು. ನಾವು ಜೀವನದಲ್ಲಿ ಒಂದನ್ನು ಗಳಿಸಬೇಕಾದರೆ ಮತ್ತೊಂದನ್ನು ಕಳೆದು ಕೊಳ್ಳಬೇಕಾಗುತ್ತದೆ. ಹೀಗೆಂದು ನಮ್ಮ ಕೈಯಿಂದ ಏನೋ ತಪ್ಪಿ ಹೋಯಿತೆಂದು ಸಂಕಟಪಡಬೇಕಾಗಿಲ್ಲ. ನಾವು ಈ ತ್ಯಾಗದಿಂದ ಏನನ್ನು ಪಡೆಯುತ್ತೇವೆಯೋ, ಆ ಭೋಗದಲ್ಲೇ ನಾವು ಕಳೆದು ಕೊಂಡಿರುವುದೂ ನಮಗೆ ಲಭಿಸಿರುತ್ತದೆ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.