
ಬೆಲೆ ಇಲ್ಲದ ಭಿಕ್ಷೆ
ಪ್ರಸಿದ್ಧ ಹರಿದಾಸರಾದ ಪುರಂದರದಾಸರು ಭಗವಂತನ ನಾಮಸ್ಮರಣೆ ಮಾಡುತ್ತಾ ಭಿಕ್ಷೆ ಬೇಡಿ ಬಂದುದರಿಂದಲೇ ಜೀವಿಸುತ್ತಿದ್ದರು. ಒಂದು ದಿನ ‘ಜೈ ಪಾಂಡುರಂಗ ವಿಠಲ’ ಎಂದು ಹೇಳುತ್ತಾ ಶ್ರೀಕೃಷ್ಣದೇವರಾಯನ ಅರಮನೆಯೆದುರು ಬಂದು ಭಿಕ್ಷೆಗಾಗಿ ನಿಂತರು. ಕೃಷ್ಣದೇವರಾಯನೆ ಸ್ವತಃ ದಾಸರನ್ನು ನೋಡಿದ. ಅವರನ್ನು ಪರೀಕ್ಷಿಸಬೇಕೆಂದು ಆತನಿಗೆ ಆಸೆಯಾಯ್ತು. ಆದ್ದರಿಂದ ದಾಸರ ಜೋಳಿಗೆಗೆ ನವರತ್ನಾದಿಗಳ ಭಿಕ್ಷೆ ಹಾಕಿಸಿದ. ದಾಸರು ವಿಠಲನ ನಾಮಸ್ಮರಣೆ ಮಾಡುತ್ತಾ ಮುಂದುವರಿದರು.
ಮರುದಿನವೂ ಅರಮನೆಗೆ ಭಿಕ್ಷೆಗಾಗಿ ಬಂದ ಪುರಂದರದಾಸರಿಗೆ ನವರತ್ನಾದಿಗಳ ಭಿಕ್ಷೆ ಹಾಕಲಾಯ್ತು, ಮರುದಿನವೂ ಹಾಗೆಯೇ ಅದನ್ನು ತೆಗೆದುಕೊಂಡು ದಾಸರು ಹೋಗುತ್ತಿದ್ದುದರಿಂದ ರಾಜನಿಗೆ ಕುತೂಹಲವಾಯ್ತು ಆತ ಮಂತ್ರಿಯೊಂದಿಗೆ ಇವನೆಂಥ ಠಕ್ಕದಾಸ?? ಹಣದ ಮೇಲಿನ ವ್ಯಾಮೋಹ ಇವನಿಗಿನ್ನೂ ಹೋಗಿಲ್ಲ ಎಂದು ಬೇಸರದಿಂದ ನುಡಿದ. ರಾಜ ಮಾರುವೇಷದಲ್ಲಿ ಮಂತ್ರಿಯೊಂದಿಗೆ ದಾಸರ ಮನೆಗೆ ಹೊರಟ.
ದಾಸರ ಮನೆಯಲ್ಲಿ ಆಶ್ಚರ್ಯ ಕಾದಿತ್ತು ದಾಸರ ಹೆಂಡತಿ ಅಕ್ಕಿಯಿಂದ ಕಲ್ಲು ಆರಿಸುತ್ತಿದ್ದಳು. ಏನಮ್ಮಾ ಆರಿಸುತ್ತಿದ್ದೀಯಾ? ಎಂದು ಮಂತ್ರಿ ಕೇಳಿದ. ಹೌದಪ್ಪಾ, ಈ ಮೂರು ದಿನಗಳಲ್ಲಿ ಅವರು ಬೇಡಿ ತಂದ ಅಕ್ಕಿಯೆಲ್ಲಾ ಕಲ್ಲುಮಯ.
ಯಾವನೋ ಪುಣ್ಯಾತ್ಮ ಬಣ್ಣ ಬಣ್ಣದ ಕಲ್ಲುಗಳನ್ನು ಹಾಕಿ ಕಳುಹಿಸಿದ್ದಾನೆ. ಅದನ್ನು ಆರಿಸಿ ಆರಿಸಿ ನಾ ಸೋತು ಹೋದೆ. ಅಕೋ ಆ ತಿಪ್ಪೆಯೆಲ್ಲಾ ಅದರಿಂದ ತುಂಬಿಹೋಗಿದೆ ಎಂದು ಆ ಸಾದ್ವಿಮಣಿ ಹೊರಗೆ ಕೈ ತೋರಿಸಿದಳು.
ರಾಜ, ಮಂತ್ರಿ ಇಬ್ಬರೂ ಆತುರಾತುರವಾಗಿ ತಿಪ್ಪೆಯ ಬಳಿಗೆ ಓಡಿದರು. ತಿಪ್ಪೆಯಲ್ಲಿ ಝಗಿಝಗಿಸುತ್ತಿದ್ದ ನವರತ್ನಾದಿಗಳನ್ನು ಕಂಡು ಬೆರಗಾದರು. ಇಂಥ ವೈರಾಗ್ಯ ನಿಧಿಯನ್ನು ಸಂದೇಹಿಸಿದೆವಲ್ಲಾ ಎಂದು ರಾಜ ಮತ್ತು ಮಂತ್ರಿ ಪಶ್ಚಾತ್ತಾಪ ಪಟ್ಟರು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.