ಕಥೆ

ಜಾಲಿಯ ಮರದಂತೆ ಮುಳ್ಳಾಗಬೇಡಿ.!

ದಿನಕ್ಕೊಂದು ಕಥೆ

ಜಾಲಿಯ ಮರದಂತೆ ಮುಳ್ಳಾಗಬೇಡಿ.!

ಮರಗಳನ್ನು ಸಾಮಾನ್ಯವಾಗಿ ಸಜ್ಜನರಿಗೆ ಹೋಲಿಸುವುದುಂಟು. ಮರಗಳು ನೆರಳನ್ನು ಕೊಡುತ್ತವೆ. ಹಕ್ಕಿಗಳಿಗೆ ಆಶ್ರಯವನ್ನು ನೀಡುತ್ತವೆ. ಆಹಾರವನ್ನೂ ನೀಡುತ್ತವೆ. ಇಂಥ ಪರೋಪಕಾರದ ಗುಣಗಳು ಮರಗಳಿಗೆ ಸಹಜವಾಗಿರುವುದರಿಂದ ಅವನ್ನು ಸಜ್ಜನರಿಗೆ ಹೋಲಿಸುವುದು ರೂಢಿ. ತನ್ನನ್ನು ಕಡಿಯುತ್ತಿರುವವರಿಗೂ ನೆರಳನ್ನು ಕೊಡುವಂಥ ಔದಾರ್ಯ ಮರಗಳದ್ದು.

ಆದರೆ ಪುರಂದರದಾಸರು ಮರವೊಂದನ್ನು ದುಷ್ಟ ಜನರೊಂದಿಗೆ ಹೋಲಿಸಿದ್ದಾರೆ. ಆ ದಾಸರಪದದ ಸೊಲ್ಲನ್ನು ನೋಡಿದಾಗ ದಾಸರ ಈ ನಿಲುವಿಗೆ ಕಾರಣ ಗೊತ್ತಾಗುತ್ತದೆ.

ಜಾಲಿಯ ಮರದಂತೆ ದುರ್ಜನರು ಮೂಲಾಗ್ರ ಪರಿಯಂತ ಮುಳ್ಳು ಕೂಡಿಪ್ಪಂತೆ ||ಪ||

ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳಿಲ್ಲ ಕುಸುಮ ವಾಸನೆ ಇಲ್ಲ ಕೂಡಲು ಸ್ಥಳವಿಲ್ಲ ರಸದಲ್ಲಿ ಸ್ವಾದವು ವಿಷದಂತೆ ಇರುತಿಹ ||1||

ಊರಹಂದಿಗೆ ಷಡ್ರಸಾನ್ನವನಿಕ್ಕಲು ನಾರುವ ದುರ್ಗಂಧ ಬಿಡಬಲ್ಲದೆ ಘೋರ ಪಾಪಿಗೆ ತತ್ತ್ವಜ್ಞಾನವ ಪೇಳಲು ಕ್ರೂರಕರ್ಮವ ಬಿಟ್ಟು ಸುಜನನಾಗುವನೆ ||2||
ತನ್ನಿಂದ ಉಪಕಾರ ತೋಟಕಾದರು ಇಲ್ಲ ಬಿನ್ನಾಣದ ಮಾತಿಗೆ ಕೊನೆ ಇಲ್ಲಿ ಅನ್ನಕ್ಕೆ ಸೇರಿದ ಕುನ್ನಿ ಮಾನವರಂತೆ ಇನ್ನಿವರ ಕಾರ್ಯವು ಪುರಂದರ ವಿಠಲ ||3||

ಜಾಲಿಯ ಮರದ ಕೆಳಗೆ ನೆರಳಿಗೆಂದು ಹೋದವರಿಗೆ ದಾಸರು ಇಲ್ಲಿ ಬಳಸಿರುವ ರೂಪಕದ ಸ್ವಾರಸ್ಯ ಕೂಡಲೇ ಗೊತ್ತಾಗುವುದೆನ್ನಿ.

ಸಜ್ಜನನಾದವನು ಇತರರ ನೆರವಿಗೆ ಬರುವಂಥವನು. ತನ್ನ ಸ್ವಾರ್ಥವನ್ನು ಕಡಿಮೆ ಮಾಡಿಕೊಂಡವನು. ಆದರೆ ದುಷ್ಟರು ಮಾತ್ರ “ತಾವಾಯಿತು, ತಮ್ಮ ಸಾಮ್ರಾಜ್ಯವಾಯಿತು” ಎಂಬ ಸ್ವಾರ್ಥದಲ್ಲಿಯೇ ಮುಳುಗಿರುತ್ತಾರೆ.

ಇದು ಜಾಲಿಯ ಮರದಂತೆ. ಇದು ತಾನು ಬದುಕುವುದೇ ಹೊರತು, ತನ್ನ ಆಶ್ರಯವನ್ನು ಬಯಸಿ ಬಂದವರಿಗೆ ಸ್ವಲ್ಪವೂ ನೆರವಾಗದು. ನಾವು ಜಾಲಿಯ ಮರದಂತೆ ಮುಳ್ಳನಷ್ಟೆ ಕೊಡುವವರಾಗಬಾರದು. ಹೂವ-ಹಣ್ಣು-ನೆರಳನ್ನು ಕೊಡುವ ಮರದಂತೆ ಬೆಳೆಯಬೇಕು ಎಂಬುದನ್ನು ದಾಸರು ಇಲ್ಲಿ ಹೇಳುತ್ತಿದ್ದಾರೆ.

🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.

Related Articles

Leave a Reply

Your email address will not be published. Required fields are marked *

Back to top button