
ದಿನಕ್ಕೊಂದು ಕಥೆ
ಕಾಯುವವ ಕೊಲ್ಲುವವ ಯಾರು?
ಕುರುಕ್ಷೇತ್ರದ ಕೌರವ, ಪಾಂಡವರ ಯುದ್ಧ ಪ್ರಾರಂಭವಾಗುವ ದಿನ. ಆ ಯುದ್ಧರಂಗದ ಮಧ್ಯದಲ್ಲಿ ಒಂದು ಕದಂಬ ವೃಕ್ಷವಿದ್ದು, ಆ ವೃಕ್ಷದ ಮೇಲೆ ಪಕ್ಷಿಯೊಂದು ಮೊಟ್ಟೆಗಳನ್ನಿಟ್ಟಿತ್ತು. ಯುದ್ಧರಂಗದಲ್ಲಿ ಸೇರಿದ ಹದಿನೆಂಟು ಅಕ್ಷೋಹಿಣಿ ಸೇನೆಯ ಗಜ, ರಥ, ತುರಂಗಗಳ ಭೀಕರ ಶಬ್ದವನ್ನು ಕೇಳಿ ಪ್ರಾಣಭಯದಿಂದ ತನ್ನ ಮೊಟ್ಟೆಗಳನ್ನು ರೆಕ್ಕೆಪುಕ್ಕದೊಳಗೆ ಅಡಗಿಸಿಕೊಂಡು ದೀನನಾಗಿ ಕ್ಷೀಣಸ್ವರದಿಂದ ಕೂಗುತ್ತಿತ್ತು.
ಆಗಲೇ ಮದ್ದಾನೆಯೊಂದು ಬಂದು ಆ ವೃಕ್ಷಕ್ಕೆ ಡಿಕ್ಕಿ ಹೊಡೆದು ಅದನ್ನು ಕೆಡವಿ ಹೋಯಿತು. ಆ ಮಹಾರಣ ಮಾರಣದಲ್ಲಿ ಈ ದುರ್ಬಲ ಪಕ್ಷಿಯ ಮೊರೆಯನ್ನು ಕೇಳುವವರ್ಯಾರು?
ಬಳಿಕ ನಡೆದ ಹದಿನೆಂಟು ದಿನದ ಯುದ್ಧದಲ್ಲಿ ಕೌರವರ ಸಹಿತ ಹದಿನೆಂಟು ಅಕ್ಷೋಹಿಣಿ ಸೈನ್ಯವು ನಾಶವಾಯಿತು. ಯುದ್ಧ ಮುಗಿದು ಧರ್ಮರಾಜನಿಗೆ ಪಟ್ಟವಾದ ಬಳಿಕ ಮಹಾಭಾರತ ಯುದ್ದವನ್ನು ಗೆದ್ದವರು ನಾವು ಎಂದು ಪಾಂಡವರೂ, ಪಾಂಚಾಲರೂ ಹೇಳಿಕೊಳ್ಳುತ್ತಿದ್ದರು.
ಇದನ್ನು ಕೇಳಿದ ಶ್ರೀ ಕೃಷ್ಣ ಪರಮಾತ್ಮನು ಅವರನ್ನೆಲ್ಲ ಕರೆದುಕೊಂಡು ಕುರುಕ್ಷೇತ್ರದ ಯುದ್ಧರಂಗಕ್ಕೆ ಬಂದು, ಎಲ್ಲಿ ಯಾರು ಯಾರನ್ನು ಗೆದ್ದರು, ಕೊಂದರು, ಆ ಸ್ಥಳಗಳನ್ನೆಲ್ಲಾ ಒಬ್ಬೊಬ್ಬರಲ್ಲಿ ಕೇಳಿಕೊಳ್ಳುತ್ತಿರಲು, ಪಾಂಡವ, ಪಾಂಚಾಲ ಎರಡೂ ಪಕ್ಷದವರೂ ತಮ್ಮ ತಮ್ಮ ಹಿರಿಮೆ ಗರಿಮೆಗಳನ್ನು ಕೃಷ್ಣನಲ್ಲಿ ನಿವೇದಿಸಿಕೊಳ್ಳುತ್ತಿದ್ದರು.
ಅದನ್ನೆಲ್ಲಾ ಸಾವಧಾನ ಚಿತ್ತದಿಂದ ಕೇಳುತ್ತಿರುವ ಶ್ರೀ ಕೃಷ್ಣ ಪರಮಾತ್ಮನು ಅಲ್ಲೇ ಬಳಿಯಲ್ಲಿ ಸತ್ತು ಬಿದ್ದಿದ್ದ ಒಂದು ಬೃಹದಾಕಾರದ ಆನೆಯ ಕೊರಳ ಗಂಟೆಯನ್ನು ಎತ್ತುವಂತೆ ಭೀಮಸೇನನಿಗೆ ಹೇಳಿದನು.
ಭೀಮನು ಆ ಕೆಳಗೆ ಬಿದ್ದ ಗಂಟೆಯನ್ನು ಎತ್ತಿದಾಗ ಆ ಗಂಟೆಯೊಳಗಿಂದ ರೆಕ್ಕೆಪುಕ್ಕಗಳು ಬಲಿತ ತನ್ನ ಐದು ಮರಿಗಳೊಂದಿಗೆ ತಾಯಿ ಪಕ್ಷಿಯು ರಿವ್ವನೆ ಆಕಾಶದತ್ತ ನೆಗೆದು ಹಾರಿಹೋಯಿತು. ಇದನ್ನು ಪಾಂಡವರಿಗೂ, ಪಾಂಚಾಲರಿಗೂ ತೋರಿಸಿದ ಶ್ರೀಕೃಷ್ಣ ನೀವೆಲ್ಲರೂ ಅವರನ್ನು ಕೊಂದೆ, ಇವರನ್ನು ಕೊಂದೆ ಎನುತ್ತಿದ್ದೀರಲ್ಲ, ಇಷ್ಟೊಂದು ಕೊಲೆಗಳ ಮಧ್ಯೆ ಈ ತಾಯಿ ಪಕ್ಷಿಯನ್ನು, ಅವರ ಈ ಸಂತಾನವನ್ನು ಕಾದವರು ಯಾರು? ಎಂದು ಪ್ರಶ್ನಿಸಿದಾಗ ಎಲ್ಲರೂ ನಾಚಿ ತಲೆ ತಗ್ಗಿಸುತ್ತಾ ಶ್ರೀಕೃಷ್ಣ ಪರಮಾತ್ಮನಿಗೆ ಕೈಮುಗಿದು “ಹೇ ಪರಮಾತ್ಮ! ನಾವು ಕೊಲ್ಲುವುದರಲ್ಲಿ ಮಾತ್ರ ಜಾಣರು. ಎಲ್ಲರನ್ನೂ ಕಾಯುವವನು ಮಾತ್ರ ನೀನೆ” ಎಂದು ಅವನ ಪಾದಕ್ಕೆರಗಿದರು.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.