
ಸಂಗೀತ ನುಡಿಸುವಾಗ ನಾನೂ ದೇವತೆಯೇ, ನೀನೂ ದೇವತೆಯೇ.!
ಹೃದಯಸ್ಪರ್ಶಿ ಘಟನೆಯೊಂದರಲ್ಲಿ ಈ ಮಾತುಗಳನ್ನು ಹೇಳಿದವರು ಕಳೆದ ಶತಮಾನದ ವಿಶ್ವವಿಖ್ಯಾತ ಪಿಯಾನೋ ವಾದಕರಾದ ಇಗ್ನೇಸ್ ಪಡೆರೇವೆಸ್ಕಿಯವರು! ಅವರಿಂದ ಹಾಗೆ ಹೇಳಿಸಿಕೊಂಡವರು ಮಹಾನ್ ಸಂಗೀತಗಾರರೇನಲ್ಲ. ಆತ ಒಬ್ಬ ಹತ್ತು ವರ್ಷ ವಯಸ್ಸಿನ ಬಾಲಕ! ಆ ಘಟನೆ ಹೀಗಿದೆ. ಇಗ್ನೇಸರು ವಿಶ್ವವಿಖ್ಯಾತ ಪಿಯಾನೋ ವಾದಕರು.
ಬಾಲ್ಯದಿಂದಲೇ ಪಿಯಾನೋ ನುಡಿಸುವುದನ್ನು ತಪಸ್ಸಿನಂತೆ ಅಭ್ಯಾಸ ಮಾಡಿದವರು. ಪಿಯಾನೋವನ್ನು ಗೌರವದಿಂದ ನುಡಿಸುತ್ತಿದ್ದರು. ಶ್ರೋತೃಗಳಿಂದಲೂ ಇದೇ ಗೌರವವನ್ನು ನಿರೀಕ್ಷಿಸುತ್ತಿದ್ದರು.
ಸಂಗೀತ ಕಾರ್ಯಕ್ರಮ ನಡೆಯುವಾಗ, ಸಭಿಕರಲ್ಲಿ ಯಾರಾದರೂ ತಮ್ಮತಮ್ಮಲ್ಲೇ ಮಾತಾಡುವುದನ್ನು ಕಂಡರೆ ಅವರು ‘ನಾನು ಪಿಯಾನೋ ನುಡಿಸುವುದರಿಂದ ನಿಮ್ಮ ಮಾತುಕತೆಗೆ ತೊಂದರೆಯಾಗುವುದಾದರೆ, ನಾನು ನುಡಿಸುವುದನ್ನು ನಿಲ್ಲಿಸುತ್ತೇನೆ. ನಿಮ್ಮ ಮಾತುಕತೆ ಮುಗಿದ ನಂತರ ನಾನು ಮುಂದುವರಿಸುತ್ತೇನೆ’ ಎಂದು ಹೇಳಿ ನಿಂತುಬಿಡುತ್ತಿದ್ದರು.
ಮಾತಿನಲ್ಲಿ ತೊಡಗಿದ್ದವರು ಪಶ್ಚಾತ್ತಾಪ ವ್ಯಕ್ತಪಡಿಸಿ, ಕ್ಷಮೆ ಕೇಳಿದರೆ ಮಾತ್ರ ಕಾರ್ಯಕ್ರಮ ಮುಂದುವರಿಯುತ್ತಿತ್ತು. ಹೀಗಾಗಿ ಅವರ ಸಂಗೀತ ಕಾರ್ಯಕ್ರಮಗಳು ತುಂಬ ಶಿಸ್ತುಬದ್ಧವಾಗಿ ನಡೆಯುತ್ತಿದ್ದವು. ಒಂದೂರಿನಲ್ಲಿ ಪಡೆರೇವೆಸ್ಕಿಯವರ ಪಿಯಾನೋ ಕಾರ್ಯಕ್ರಮ ಏರ್ಪಾಡಾಗಿತ್ತು. ಒಬ್ಬ ತಾಯಿ ತನ್ನ ಹತ್ತು ವರ್ಷದ ಮಗನೊಂದಿಗೆ ಮುಂದಿನ ಸಾಲಿನಲ್ಲಿ ಕುಳಿತಿದ್ದರು.
ಆಕೆಯ ಮಗ ಆಗಷ್ಟೆ ಪಿಯಾನೊ ನುಡಿಸಲು ಕಲಿಯುತ್ತಿದ್ದ. ಪಡೆರೇವೆಸ್ಕಿ ಕಾರ್ಯಕ್ರಮದಿಂದ ಮಗನಿಗೆ ಸ್ಫೂರ್ತಿ ಸಿಗಲಿ ಎಂಬುದು ತಾಯಿಯ ಹಂಬಲ! ಕಾರ್ಯಕ್ರಮ ಪ್ರಾರಂಭವಾಗುವುದಕ್ಕಿಂತ ಮುಂಚೆಯೇ ಸಭಾಂಗಣ ತುಂಬಿ ತುಳುಕುತ್ತಿತ್ತು. ಪಡೆರೇವೆಸ್ಕಿ ಇನ್ನೂ ವೇದಿಕೆಗೆ ಬಂದಿರಲಿಲ್ಲ.
ತಾಯಿ ತನ್ನ ಪಕ್ಕದವರೊಂದಿಗೆ ಮಾತನಾಡುವುದರಲ್ಲಿ ಮಗ್ನರಾಗಿದ್ದಾಗ ಮಗ ಎದ್ದು ವೇದಿಕೆಗೆ ಬಂದ. ವೇದಿಕೆಯ ಮೇಲೆ ಇಗ್ನೇಸರ ಪಿಯಾನೋ ಇಡಲಾಗಿತ್ತು. ಮಗ ಎದ್ದು ವೇದಿಕೆಗೆ ಬಂದದ್ದೂ, ಪಿಯಾನೋದ ಬಳಿ ನಿಂತದ್ದೂ, ತಾಯಿಯ ಗಮನಕ್ಕೆ ಬರಲಿಲ್ಲ.
ಆ ಬಾಲಕ ಕುತೂಹಲದಿಂದ ಪಿಯಾನೋದ ಮೇಲೆ ಕೈಯಾಡಿಸುತ್ತ ನಿಂತುಕೊಂಡ. ‘ಟ್ವಿಂಕಲ್ ಟ್ವಿಂಕಲ್ ಲಿಟ್‌ಲ್ ಸ್ಟಾರ್’ ಎಂಬ ಶಿಶುಗೀತೆಯನ್ನು ನುಡಿಸಲಾರಂಭಿಸಿದ. ಅವನಿಗೆ ಗೊತ್ತಿದ್ದುದು ಅದೊಂದೇ ಗೀತೆ!
ಅಷ್ಟು ಹೊತ್ತಿಗೆ ಪಡೆರೇವೆಸ್ಕಿ ವೇದಿಕೆಯ ಮೇಲೆ ಬಂದರು. ಬಾಲಕ ಪಿಯಾನೋ ನುಡಿಸುತ್ತಾ ನಿಂತಿದ್ದುದನ್ನು ಗಮನಿಸಿದರು. ಏನೂ ಮಾತನಾಡದೆ ನಸುನಗುತ್ತಾ ನಿಂತು ಕೊಂಡರು. ಬಾಲಕ ಅವರು ಬಂದದ್ದನ್ನು ಗಮನಿಸಲಿಲ್ಲ. ಆದರೆ ಆತನ ತಾಯಿ ಅದನ್ನು ಗಮನಿಸಿದರು. ಪಡೆರೇವೆಸ್ಕಿಯವರ ಶಿಸ್ತುಬದ್ಧ ನಡವಳಿಕೆಯ ಬಗ್ಗೆ ಗೊತ್ತಿದ್ದ ತಾಯಿಗೆ ತನ್ನ ಮಗ ಪಿಯಾನೋ ಮೇಲೆ ಕೈಯಾಡಿಸುತ್ತಿದ್ದುದನ್ನು ನೋಡಿ ಗಾಬರಿಯಾಯಿತು.
ಆಕೆ ವೇದಿಕೆಯತ್ತ ಧಾವಿಸಿದರು. ಆದರೆ ಪಡೆರೇವೆಸ್ಕಿ ಆಕೆಗೆ ಸುಮ್ಮನಿರುವಂತೆ ಸಂಜ್ಞೆ ಮಾಡಿದರು. ಅವರು ನಿಧಾನವಾಗಿ ಬಾಲಕನ ಹಿಂದೆ ನಿಂತುಕೊಂಡರು. ಎರಡೂ ಕೈಗಳನ್ನು ಬಾಲಕನ ಕೈಗಳ ಮೇಲಿಟ್ಟು ನುಡಿಸಲು ಸಹಕಾರ ನೀಡಿದರು. ಆ ಶಿಶುಗೀತೆ ಸಭಾಂಗಣದಲ್ಲೆಲ್ಲ ರಿಂಗಣಿಸಿತು.
ಗೀತೆ ಮುಗಿದಾಗ ಸಭಿಕರೆಲ್ಲ ಎದ್ದು ಕರತಾಡನ ಮಾಡಿದರು. ಕರತಾಡನದ ಶಬ್ದ ಕೇಳಿದಾಗ ಬಾಲಕನಿಗೆ ಎಚ್ಚರವಾಯಿತು. ಅಲ್ಲಿ ಏನಾಗುತ್ತಿದೆಯೆಂಬುದರ ಅರಿವಾಯಿತು. ಇಷ್ಟು ಹೊತ್ತು ತನ್ನ ಕೈಯಿಂದ ಪಿಯಾನೋ ನುಡಿಸಿದ ಪಡೆರೇವೆಸ್ಕಿಯವರನ್ನು ನೋಡಿ ಆತ ಅಚ್ಚರಿಗೊಂಡ.
‘ನನ್ನ ಕೈಯಲ್ಲಿ ಈ ಗೀತೆಯನ್ನು ಇಷ್ಟು ಚೆನ್ನಾಗಿ ನುಡಿಸಿದ ನೀವ್ಯಾರು? ನೀವು ಸಂಗೀತ ದೇವತೆಯೇ?’ ಎಂದು ಮುಗ್ಧವಾಗಿ ಕೇಳಿದ. ಪಡೆರೇವೆಸ್ಕಿ ಮುಗುಳ್ನಗುತ್ತ ‘ಸಂಗೀತ ನುಡಿಸುವಾಗ ನಾನೂ ದೇವತೆ! ನೀನೂ ದೇವತೆಯೇ!’ ಎಂದು ಹೇಳಿದಾಗ, ಪ್ರೇಕ್ಷಕರಿಂದ ಮತ್ತೊಮ್ಮೆ ಭಾರೀ ಕರತಾಡನವಾಯಿತು.
ಬಾಲಕನ ವರ್ತನೆ ಅಧಿಕಪ್ರಸಂಗವೆಂದು ಪಡೆರೇವೆಸ್ಕಿ ಸಿಟ್ಟು ಮಾಡಿಕೊಳ್ಳಬಹುದಿತ್ತು. ಆದರೆ ಆ ಮುಗ್ಧ ಬಾಲಕನೊಂದಿಗೆ ಕೈಜೋಡಿಸಿ ಪಿಯಾನೋ ನುಡಿಸಿದಾಗ ಪಡೆರೇವೆಸ್ಕಿ ಒಬ್ಬ ದೇವತೆಯಂತೆ ಕಂಡು ಬಂದರು. ಮತ್ತೊಂದು ವಿಶೇಷವೇನು ಗೊತ್ತೆ? ಸಂಗೀತಗಾರ ಇಗ್ನೇಸ್ ಪಡೆರೇವೆಸ್ಕಿಯವರು ಮುಂದೆ 1919ರಲ್ಲಿ ಪೊಲೆಂಡ್‌ನ ಪ್ರಧಾನ ಮಂತ್ರಿಗಳಾದರು! ಅದಿರಲಿ, ನಾವೇನಾದರೂ ಅಂದು ಪಡೆರೇವೆಸ್ಕಿಯವರ ಸ್ಥಾನದಲ್ಲಿದ್ದಿದ್ದರೆ ಏನು ಮಾಡುತ್ತಿದ್ದೆವು? ದೇವತೆಯಾಗುತ್ತಿದ್ದೆವೋ ಅಥವಾ ಮತ್ತೇನಾದರೂ ಆಗುತ್ತಿದ್ದೆವೋ ? ಯೋಚಿಸಬಹುದು!
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.