ದೋರನಹಳ್ಳಿ ನಾಡ ಕಚೇರಿಗೆ ಆಕಸ್ಮಿಕ ಬೆಂಕಿ
ಹಲವು ಸಾಮಾಗ್ರಿ, ಕಡತಗಳು ಸುಟ್ಟು ಕರಕಲು
ಯಾವುದೇ ನಷ್ಟ ಸಂಭವಿಸಿಲ್ಲ: ತಹಶೀಲ್ದಾರ ಸೋಮಶೇಖರ ಸ್ಪಷ್ಟನೆ
ಶಹಾಪುರ:ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿರುವ ನಾಡಕಚೇರಿಗೆ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಬೆಂಕಿ ತಗುಲಿದ್ದು, ಅಪಾರ ಪ್ರಮಾಣದ ಸಾಮಾಗ್ರಿಗಳು ಮತ್ತು ಇಲಾಖೆಯ ಕಡತಗಳು ಸುಟ್ಟು ಕರಕಲಾದ ಘಟನೆ ಶನಿವಾರ ಜರುಗಿದೆ.
ಬೆಂಕಿ ತಗುಲಿದ ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಅಗ್ನಿ ಶಾಮಕದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.
ದೋರನಹಳ್ಳಿ ಹೋಬಳಿಮಟ್ಟದ ದೊಡ್ಡ ಕೇಂದ್ರವಾಗಿದ್ದು, ಇಲಾಖೆಗೆ ಸಂಬಂಧಿಸಿದಂತೆ ಹಲವಾರು ಕಡತಗಳಿದ್ದವು ಎಂದು ತಿಳಿದು ಬಂದಿವೆ. ರೈತಾಪಿ ಜನರು ಸಲ್ಲಿಸಿದ ವಿವಿಧ ಯೋಜನೆಯ ಅರ್ಜಿಗಳು ಸಹ ಸುಟ್ಟಿವೆ ಎಂದು ತಿಳಿದು ಬಂದಿದೆ.
ಕಚೇರಿಯಲ್ಲಿದ್ದ ಟೇಬಲ್, ಹಳೇ ರ್ಯಾಕ್ಸ್, ಮೇಜು ಸೇರಿದಂತೆ ಇತರೆ ಸಾಮಾಗ್ರಿಗಳು ಸುಟ್ಟು ಕರಕಲಾಗಿವೆ. ಅದೃಷ್ಟವಶಾತ್ ಕಂಪ್ಯೂಟರ್ ಕೇಂದ್ರಕ್ಕೆ ಬೆಂಕಿ ತಗುಲದಿರುವುದು ಸಮಾಧಾನ ತಂದಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ತಹಶೀಲ್ದಾರ ಸೋಮಶೇಖರ ಅರಳಗುಂಡಿಗಿ ಪತ್ರಿಕೆಯೊಂದಿಗೆ ಮಾತನಾಡಿ, ಅದೃಷ್ಟವಶಾತ್ ಭೂಮಿ ಕೇಂದ್ರಕ್ಕೆ ಬೆಂಕಿ ತಲುಪಿಲ್ಲ. ಹೀಗಾಗಿ ಯಾವುದೇ ಹೇಳುವಂತ ನಷ್ಟ ಸಂಭವಿಸಿರುವುದಿಲ್ಲ. ಶಾರ್ಟ್ ಸರ್ಕ್ಯೂ ಟ್ ಆಗಿ ವಿದ್ಯುತ್ ತಂತಿಗಳು ಬೆಂಕಿಹೊತ್ತಿ ಹೊಗೆ ಜಾಸ್ತಿ ಹರಡಿದೆ. ಯಾವುದೇ ನಷ್ಟ ಸಂಭವಿಸಿಲ್ಲ. ಕೆಲವು ಕಡತಗಳು ಸುಟ್ಟಿವೆ. ಅವುಗಳನ್ನು ಕಂಪ್ಯೂಟರ್‍ನಲ್ಲಿ ಅಳವಡಿಸಿರಲಾಗುತ್ತದೆ. ಬೇಕಾದ ಕಡತಗಳನ್ನು ಮತ್ತೆ ತೆಗೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಉಪ ತಹಶೀಲ್ದಾರ. ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.