ಇ-ಶ್ರಮ ಯೋಜನೆಯ ಸದುಪಯೋಗ ಪಡೆಯಿರಿ-ನಾರಾಯಣಾಚಾರ್ಯ ಸಗರ
![](https://vinayavani.com/wp-content/uploads/2021/12/27SHP01.jpg)
200 ಅರ್ಹ ಕಾರ್ಮಿಕರಿಗೆ ಇ-ಶ್ರಮ ಕಾರ್ಡ್ ವಿತರಣೆ
yadgiri, ಶಹಾಪುರಃ ಪ್ರತಿಯೊಬ್ಬ ಅರ್ಹ ಅಸಂಘಟಿತ ಕಾರ್ಮಿಕರು ಇ-ಶ್ರಮ ಯೋಜನೆಯಡಿ ನೋಂದಾಯಿಸಿ ಸಮರ್ಪಕ ಸೌಲಭ್ಯ ಪಡೆಯಬೇಕೆಂದು ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ನಾರಾಯಾಣಾಚಾರ್ಯ ಸಗರ ತಿಳಿಸಿದರು.
ನಗರದ ಹಳಿಸಗರ ಭಾಗದ ಯಲ್ಲಾಲಿಂಗೇಶ್ವರ ಸಭಾಭವನದಲ್ಲಿ ಸರ್.ಎಂ.ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘ(ರಿ)ದಿಂದ 200 ಇ-ಶ್ರಮ ಕಾರ್ಡ್ ವಿತರಣೆ ಮತ್ತು ನೋಂದಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಅಸಂಘಟಿತ ಕಾರ್ಮಿಕ ಶ್ರಮಜೀವಿಗಳು ಸಾಕಷ್ಟು ಸಂಕಷ್ಟ ಅನುಭವಿಸುವಂತಾಯಿತು. ಆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇ-ಶ್ರಮ ಯೋಜನೆಯಡಿ ಹಲವಾರು ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಜಾರಿಗೊಳಿಸಿದ್ದು, ಅರ್ಹರು ಎಲ್ಲರೂ ಇದರ ಸದುಪಯೋಗ ಪಡೆಯಬೇಕು.
ಇ-ಶ್ರಮ ಕಾರ್ಡ್ ಪಡೆಯುವ ಮೂಲಕ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಯೋಜನೆ ಪಡೆಯಬಹುದು. ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ ಲಾಭ ಪಡೆಯಿರಿ. ಆಕಸ್ಮಿಕ ಅಪಘಾತದಲ್ಲಿ ಮೃತರಾದರೆ 2 ಲಕ್ಷ ರೂ.ಪರಿಹಾರ ದೊರೆಯಲಿದೆ. ಅಪಘಾತದಲ್ಲಿ ಭಾಗಶಃ ಅಂಗವಿಲನಾದರೆ 1 ಲಕ್ಷ ರೂ. ಸಹಾಯ ಧನ ಪಡೆಯಬಹುದು. ಕಟ್ಟಡ ಕಾರ್ಮಿಕರು, ಸಣ್ಣ ಅತಿ ಸಣ್ಣ ರೈತರು, ಮೀನುಗಾರರು, ಕೃಷಿ ಸಂಗೋಪನಕಾರರು, ನೇಕಾರರು, ಬಡಿಗೆತನ ಮಾಡುವವರು, ಆಶಾ ಕಾರ್ಯಕರ್ತರು. ಮಡಿವಾಳರು, ಕ್ಷೌರಿಕರು, ಬೀದಿ ವ್ಯಾಪಾರಿಗಳು, ಟೇಲರ್‍ಗಳು, ಹೊಟೇಲ್, ಬೇಖರಿ ಕಾರ್ಮಿಕರು ಸೇರಿದಂತೆ ವಲಸೆ ಕಾರ್ಮಿಕರು ಈ ಯೋಜನೆಯ ಲಾಭ ಪಡೆಯಬಹುದು.
16 ವರ್ಷದಿಂದ 59 ವರ್ಷದೊಳಗಿನ ಎಲ್ಲಾ ಕಾರ್ಮಿಕರು ಇ-ಶ್ರಮ ಕಾರ್ಡ್ ಮಾಡಿಸುವ ಮೂಲಕ ಇದರು ಸದುಪಯೋಗ ಪಡೆಯಬೇಕೆಂದರು. ಇದೇ ಸಂದರ್ಭ ಯಾದಗಿರಿ ಕಾರ್ಮಿಕ ಇಲಾಖೆಯ ಡಿಓ ಸಂತೋಷ ಸವಿವರವಾಗಿ ಯೋಜನೆಯ ಮಾಹಿತಿ ನೀಡಿದರು.
ಹಿರಿಯ ನ್ಯಾಯವಾದಿ ಚಂದ್ರಶೇಖರ ಲಿಂಗದಳ್ಳಿ ಮಾತನಾಡಿದರು. ಮುಖಂಡರಾದ ಶಾಂತಪ್ಪ ಕಟ್ಟಿಮನಿ, ಶರಣಪ್ಪ ಮುಂಡಾಸ, ನ್ಯಾಯವಾದಿ, ಪತ್ರಕರ್ತ ಮಲ್ಲಿಕಾರ್ಜುನ ಮುದ್ನೂರ, ಕಾರ್ಮಿಕ ಇಲಾಖೆಯ ಗಂಗಾಧರ, ಶ್ಯಾಮ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಪ್ರದೀಪ ಅಣಬಿ ಅಧ್ಯಕ್ಷತೆವಹಿಸಿದ್ದರು. ಅವಿನಾಶ ಗುತ್ತೇದಾರ, ಭೀಮಾಶಂಕರ ಕಟ್ಟಿಮನಿ, ಭೋಜಪ್ಪ ಮುಂಡಾಸ, ಅಮರೀಶ ಶಿರವಾಳ, ಶರಣು ದಿಗ್ಗಿ ಇದ್ದರು. ಶಿವಕುಮಾರ ಹಳಿಸಗರ ಸ್ವಾಗತಿಸಿ ವಂದಿಸಿದರು.