ಶಾಸಕ ದರ್ಶನಾಪುರ ಹೇಳಿಕೆ ರಾಜಕೀಯ ಪ್ರೇರಿತ – ಮಾಜಿ ಶಾಸಕ ಶಿರವಾಳ
ಘೋಷಿತ ಯೋಜನೆ ಕಾರ್ಯಹಂತಕ್ಕೆ ಬಾರದೆ ಬೋಗಸ್ ಆಗಿರುವದು ತೋರಿಸಲಿ
ಶಹಾಪುರಃ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಘೋಷಿಸಿದ ಯೋಜನೆಗಳು ಬೋಗಸ್ ಎಂದು ಸ್ಥಳೀಯ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿಕೆ ನೀಡಿರುವದು ರಾಜಕೀಯ ಪ್ರೇರಿತವಾಗಿದೆ ಎಂದು ಮಾಜಿ ಶಾಸಕ ಗುರು ಪಾಟೀಲ್ ಶಿರವಾಳ ತಿಳಿಸಿದರು.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕೇಂದ್ರದ ಮೋದಿ ನೇತೃತ್ವದ ಸರ್ಕಾರ 2014ರಿಂದ ಇಲ್ಲಿವರೆಗೂ ಘೋಷಿಸಿದ ಯಾವುದೇ ಯೋಜನೆಗಳು ಕಾರ್ಯರೂಪಕ್ಕೆ ಬಾರದೆ ಇರತಕ್ಕಂತ ಒಂದೇ ಒಂದು ಯೋಜನೆ ಶಾಸಕ ದರ್ಶನಾಪುರ ಅವರು ತೋರಿಸಲಿ ಎಂದು ಸವಾಲೆಸೆದರು.
ಮೋದಿ ಸರ್ಕಾರ ಇಲ್ಲಿವರೆಗೂ ಏನು ಭರವಸೆ ನೀಡಿದೆ ಅವೆಲ್ಲಗಳನ್ನು ಹಂತ ಹಂತವಾಗಿ ಜನರಿಗೆ ಮುಟ್ಟಿಸುವಂತ ಕೆಲಸ ಮಾಡುತ್ತಾ ಬಂದಿದೆ. ಮೊನ್ನೆ ಮೊನ್ನೆ ಲಾಕ್ ಡೌನ್ ಸಮಯದಲ್ಲಿ ಎಲ್ಲರಿಗೂ ಆಹಾರ ಧಾನ್ಯ ವಿತರಿಸುವ ಕಾರ್ಯ ಮಾಡಿದರು. ಬಿಪಿಎಲ್ ಕಾರ್ಡ್‍ದಾರರಿಗೆ ಮೊದಲಿಗೆ ಮೂರು ತಿಂಗಳು ಮತ್ತೆ ತದನಂತರ ಎರಡು ತಿಂಗಳು ಆಹಾರ ಧಾನ್ಯವನ್ನು ವಿತರಿಸಿದರು.
ಮತ್ತು ಮಹಿಳೆಯರ ಜನ್‍ಧನ್ ಖಾತೆಗೆ ನೇರವಾಗಿ ಐದುನೂರ ರೂ,ಹಾಕಿದ್ದಾರೆ. ಅಲ್ಲದೆ ರೈತರ ಕಿಸಾನ್ ಸಮ್ಮಾನ್ ಖಾತೆಗೆ 2000 ಸಾವಿರ ರೂ. ಹೆಚ್ಚಿನ ಹಣವನ್ನು ನೇರವಾಗಿ ಹಾಕುವ ಕೆಲಸ ಮಾಡಿದರು. ಮೊದಲು ವರ್ಷಕ್ಕೆ 6000 ಕಿಸಾನ್ ಸಮ್ಮಾನ್ ನೀಡುವ ಹಣದ ಜೊತೆಗೆ ಲಾಕ್ ಡೌನ್ ಹಿನ್ನೆಲೆ ಹೆಚ್ಚಿನ 2000 ಹಣ ಸಂದಾಯ ಮಾಡಿದೆ.
ಮುಖ್ಯವಾಗಿ ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ಘೋಷಣೆ ಮೇಕ್ ಇನ್ ಇಂಡಿಯಾ ಮೂಲಕ ಎಲ್ಲಾ ರೀತಿಯಲ್ಲೂ ನಮ್ಮ ದೇಶವನ್ನು ಸದೃಢವಾಗಿ ನಿರ್ಮಿಸಲು ಬೇಕಾಗುವ ಕಾರ್ಯರೂಪ ರೇಷೆಗಳು ನಡೆಯುತ್ತಿದೆ. ನಮ್ಮ ದೇಶ ವಿಶ್ವಗುರುವಾಗಿ ಬೆಳೆಯಲು ಬೇಕಾಗುವ ಎಲ್ಲಾ ರೀತಿಯ ಸಿದ್ಧತೆಗಳನ್ನು ಸೂಕ್ತ ವೇದಿಕೆಯನ್ನು ಕೇಂದ್ರ ಸರ್ಕಾರ ಮಾಡಿದೆ ಎಂದು ಅವರು ತಿಳಿಸಿದರು. ಇಂತಹ ಮಹತ್ವದ ಹೆಜ್ಜೆಗಳನ್ನು ಇಟ್ಟು ಹಂತ ಹಂತವಾಗಿ ದೇಶದ ಬೆಳವಣಿಗೆಯತ್ತ ಮುನ್ನುಗ್ಗುತ್ತಿರುವ ಮೋದಿ ಸರ್ಕಾರದ ವಿರುದ್ಧ ಶಾಸಕ ದರ್ಶನಾಪುರ ನೀಡಿರುವ ಹೇಳಿಕೆ ರಾಜಕೀಯ ಪ್ರೇರಿತವಾಗಿದೆ ಎಂದು ಆರೋಪಿಸಿದರು.