ಕಾವ್ಯ
‘ತಕ್ಕಡಿ ಹಿಡಿದವರಿಗೆ ಉಳಿಗಾಲವಿಲ್ಲ’ ದೇವಣಗಾವ ರಚಿತ ಕಾವ್ಯ
ನೊಂದು ಬೆಂದ ಕವಿತೆ
ಸೀಳಿದಪಾದ ದಣಿಯದಚಿತ್ತ ಥಂಡಿಗೆ ಕುಗ್ಗದ ಮೈ,ತನ್ನ ಬೆಳಸಿಗೆ ನ್ಯಾಯ ಕೇಳುತಿರುವಾಗ
ಎದೆಯ ಬೇಗುದಿಯನ್ನಲ್ಲದೆ ಅರಳುವ ಹೂಗಳ ಕುರಿತು ಹೇಗೆ ಬರೆಯಲಿ ಕವಿತೆ
ಹುಟ್ಟಿದ ಊರು ಪರಿವಾರ ತೊರೆದು ದೂರದಲ್ಲಿ ಆಸೆಯ ಕಂಗಳಿಂದ ದೊರೆಯ ಬರುವನ್ನೆ ನೋಡುತಿರುವಾಗ
ಭರವಸೆಯಲ್ಲಿ ಸೆಳಕನ್ನಲ್ಲದೆ ಮತ್ತೆನನ್ನು ಹುಡುಕಬಲ್ಲದು ಕವಿತೆ
ಅಹಿಂಸೆಯ ಪಥದಲ್ಲಿ
ಗೋಮುಖ ವ್ಯಾಗ್ರಗಳಿಲ್ಲದ, ಊಸರವಳ್ಳಿಗಳ ಹೇಶಾರವವಿಲ್ಲದೆ ಸಮಚಿತ್ತದ ನಡೆಕಂಡಿದೆ ದಶಕಗಳ ಕುಲುಮೆಯಲಿ ಬೆಂದು ಗಟ್ಟಿಗೊಂಡಿದೆ ಕವಿತೆ
ಬೀದಿಗಳಿಗೆ, ದೊಣ್ಣೆಗಳಿಗೆ ನೆತ್ತರು ಕುಡಿಸಲು ಕಾದವರಿಗೆ
ಕೆಂಡದಮೇಲೆ ಕೂತಂತೆ ಚಡಪಡಿಕೆ
ಸುಡುವ ಒಲೆಯ ನಿಗಿನಿಗಿ ಬೆಂಕಿಯಲ್ಲಿ
ಸುಟ್ಟ ರೊಟ್ಟಿ ರಟ್ಟೆ ಬಲವಾಗುವಲ್ಲಿ ಜೀವ ದ್ರವವಾಗಿ ಹರಿಯುತಿದೆ ಕವಿತೆ
ನಡುಗಲೇಬೇಕು ನರದೊರೆಗಳು ನಡುಕ ಹುಟ್ಟಿಸುವ ಚಳುವಳಿಯ ಚಳಿಗೆ
ತಕ್ಕಡಿ ಹಿಡಿದು ಬಂದವರೇ ಉಳಿದಿಲ್ಲವಿಲ್ಲಿ ಹದನು ಗೊಳಿಸುವಾಗ ಅಳಿದವರ ನೆನಪಾಗಿ
ಅಕ್ಕಡಿಯ ಸಾಲಿನಲಿ ಹೊಸ ಕುಡಿಯಾಗಿ ಮೂಡುತಿದೆ ಕವಿತೆ.
–ಜ್ಯೋತಿ ದೇವಣಗಾವ.