ಕನ್ನಡ ಸೇನೆಯಿಂದ ಅದ್ದೂರಿ ರಾಜ್ಯೋತ್ಸವ
yadgiri, ಶಹಾಪುರಃ ಇಲ್ಲಿನ ಭೀಮರಾಯನ ಗುಡಿಯ ಎರಡನೇ ಬಸ್ ಸ್ಟಾಪ್‍ನಲ್ಲಿ ಕನ್ನಡ ಸೇನೆ ಕರ್ನಾಟಕದ ಈಶಾನ್ಯ ವಲಯ ಪ್ರಮುಖ ದೇವು ಭೀ.ಗುಡಿ ನೇತೃತ್ವದಲ್ಲಿ ಸಂಭ್ರಮದ ರಾಜ್ಯೋತ್ಸವ ಆಚರಿಸಲಾಯಿತು.
ಕನ್ನಡ ಧ್ವಜಸ್ಥಂಭದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಕಾಯಿ, ಕರ್ಪೂರ ಸಮರ್ಪಿಸಲಾಯಿತು. ನಂತರ ಕರ್ನಾಟಕ ಧ್ವಜಾರೋಹಣವನ್ನು ಕೃಷ್ಣಾ ಭಾಗ್ಯ ಜಲ ನಿಗಮದ ಎಇಇ ಸಯ್ಯದ್ ಇರ್ಫಾನ್ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕನ್ನಡ ಸೇನೆ ಸಂಘಟನೆ ರಾಜ್ಯದಲ್ಲಿ ಅಪರೂಪದ ಕನ್ನಡಪರ ಸಂಘಟನೆ. ಇದು ತನ್ನದೆ ಆದ ಧ್ಯೇಯೋದ್ದೇಶಗಳನ್ನು ಹೊಂದಿದೆ. ನಾಡು ನುಡಿಗೆ ಧಕ್ಕೆ ಆದಾಗ ರಸ್ತೆಗಿಳಿದು ಹೋರಾಟ ಮಾಡುತ್ತದೆ. ಆದರೆ ಎಲ್ಲೂ ಸಂಘಟನೆ ಹೆಸರು ಕೆಡಿಸಿಕೊಂಡಿರುವದು ನಾ ಕಾಣೆ. ಅಲ್ಲದೆ ಅವರ ಸಂಘದ ರಾಜ್ಯಧ್ಯಕ್ಷರೇ ಹೇಳುವಂತೆ, ಮೊದಲು ಕಾರ್ಯಕರ್ತರ ಸ್ವಂತ ಬಲದ ಮೇಲೆ ಸ್ವಾಲವಂಬಿಗಳಾಗಿ ನಾಡು ನುಡಿಗೆ ಅನ್ಯಾಯವಾದ ತಾಯಿ ಭುವನೇಶ್ವರಿ ಸೇವೆ ಮಾಡಬೇಕು. ಸಂಘಟನೆಯಿಂದಲೇ ಬದುಕು ಕಟ್ಟಿಕೊಳ್ಳಬಾರದು. ಸಂಘಟನೆ ಉದ್ಯೋಗವಲ್ಲ ಇದೊಂದು ಸೇವೆ ಎಂದು ಬೋಧಿಸುತ್ತಾರೆನ್ನುವದು ಕೇಳಿ ಬಹಳ ಸಂತೋಷ ಎನಿಸಿತು.
ಪ್ರಸ್ತುತ ಕಾಲದಲ್ಲಿ ಪ್ರಾಮಾಣಿಕ ಸಂಘಟನೆಗಳ ಅಗತ್ಯವಿದೆ. ಕನ್ನಡ ನಾಡು, ದೇಶ ಕಟ್ಟುವ ಕೆಲಸದಲ್ಲಿ ಶ್ರದ್ಧಾಪೂರ್ವಕ ನಿಷ್ಠೆಯಿಂದ ತ್ಯಾಗಮಯಿಯಾಗಿ ಕೆಲಸ ಮಾಡುವ ಕಾರ್ಯಕರ್ತರ ದಂಡು ಕನ್ನಡ ಸೇನೆಯಲ್ಲಿದೆ. ಅದು ಹೀಗೆ ಮುಂದುವರೆಯಲಿ ತಾಯಿ ನಾಡು ಸೇವೆಯಲ್ಲಿ ತೊಡಗಿಸಿಕೊಂಡು ನಿಮ್ಮ ಪ್ರತಿ ಕಾರ್ಯ ಯಶಸ್ವಿಯಾಗಲಿ ಎಂದು ಹಾರೈಸಿದರು. ಕನ್ನಡ ವ್ಯವಹಾರಿಕ ಭಾಷೆಯಾಗಿಯೂ ಹೊರಹೊಮ್ಮಲಿ, ಕನ್ನಡ ನಮ್ಮ ಮನೆ, ಮನವಲ್ಲದೆ ಬದುಕು ಕಟ್ಟಿಕೊಡುವ ಭಾಷೆಯಾಗಿ ಬೆಳೆಯಲಿ ಎಂದು ಹಾರೈಸಿದರು. ಕನ್ನಡಿಗರ ಕಲುದೈವ ಭುವನೇಶ್ವರಿ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಸಹರಾ ಮೋಟಾರ್ಸ್‍ನ ವಾಹೀದ್, ಪ್ರಮೋದ ಪಾಟೀಲ್, ವಿನೋದಗೌಡ ಇತರರನ್ನು ಸನ್ಮಾನಿಸಲಾಯಿತು. ಈಶಾನ್ಯ ವಲಯ ಸಂಘಟನೆ ಕಾರ್ಯದರ್ಶಿ ದೇವು ಭೀ,ಗುಡಿ, ಅಂಬರೀಶ್, ಬಸುಗೌಡ, ಇತರರಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರಿಗೂ ಅಲ್ಪ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.