Home

ಶಹಾಪುರಃ ಕಸಾಪ ಅಧ್ಯಕ್ಷ ಗಾದಿಗೆ ತೀವ್ರ ಪೈಪೋಟಿ – ಮೂಡದ ಒಮ್ಮತ

ಕಸಾಪ ಅಧ್ಯಕ್ಷ ಗಾದಿಗೆ ಐವರ ನಡುವೆ ತೀವ್ರ ಪೈಪೋಟಿ

ಅಂತಿಮವಾಗಿ ಜಿಲ್ಲಾಧ್ಯಕ್ಷರಿಂದ ಓರ್ವರ ಹೆಸರು ಫೆ.14 ರೊಳಗೆ ಘೋಷಣೆ

yadgiri, ಶಹಾಪುರಃ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಸ್ಥಾನಕ್ಕೆ ಐದು ಜನ ಕನ್ನಡದ ಕಟ್ಟಾಳುಗಳಿಂದ ತೀವ್ರ ಪೈಪೋಟಿ ಜರುಗಿತು. ಅಂತಿಮವಾಗಿ ಒಮ್ಮತ ಮೂಡದ ಕಾರಣ ಅಧ್ಯಕ್ಷರ ಆಯ್ಕೆಯನ್ನು ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿಯವರು ತಮ್ಮ ಪದದತ್ತವಾದ ಅಧಿಕಾರ ಚಲಾಯಿಸಿ ಫೆ. 14 ರೊಳಗೆ ಸಾಮಾಜಿಕ ನ್ಯಾಯದ ಪರಿಕಲ್ಪನೆ ಆಧಾರದಲ್ಲಿ ಐವರಲ್ಲಿ ಓರ್ವರನ್ನು ಕಸಾಪ ತಾಲೂಕು ಅಧ್ಯಕ್ಷರಾಗಿ ಹೆಸರು ಘೋಷಿಸುವೆ ಎಂದು ಸಭೆಯಲ್ಲಿ ತಿಳಿಸಿ ಸಭೆ ಅಂತ್ಯಗೊಳಿಸಿದರು.

ಅಧ್ಯಕ್ಷ ಸ್ಥಾನದ ತೀವ್ರ ಪೈಪೋಟಿಯಲ್ಲಿ ದೇಶಮುಖ ಶಿಕ್ಷಣ ಸಂಸ್ಥೆಯ ಶಿವರಾಜ ದೇಶಮುಖ, ಸಂಶೋಧಕ ಮೋನಪ್ಪ ಶಿರವಾಳ, ಹಿರಿಯ ವಕೀಲ ಸಾಲೋಮನ್ ಆಲ್ಫ್ರೈಡ್, ಉಪನ್ಯಾಸಕ ರವೀಂದ್ರ ಹೊಸಮನಿ ಮತ್ತು ಖಾಸಿಂಅಲಿ ಹುಜರತಿ ಅವರಿಂದ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಯಿತು.

ಇಲ್ಲಿನ ಕಸಾಪ ಭವನದ ಆವರಣದಲ್ಲಿ ಅಧ್ಯಕ್ಷರ ಆಯ್ಕೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಕಸಾಪ ಸದಸ್ಯರು, ಕನ್ನಡ ಅಭಿಮಾನಿಗಳು ಆಕಾಂಕ್ಷಿಗಳ ಬೆಂಬಲಿಗರು ಸೇರಿದ್ದರು. ಸಭೆಯ ಒಮ್ಮತದ ಅಭಿಪ್ರಾಯ ಮೂಡದ ಕಾರಣ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದ ಸಾಹಿತಿ ಡಾ.ಅಬ್ದುಲ್ ಕರೀಂ ಮತ್ತು ಶಶಿಕಲಾ ಅಡಗಿಲ್ಲ ಸ್ಪರ್ಧೆಯಿಂದ ಹಿಂದೆ ಸರಿದರು ಎನ್ನಲಾಗಿದೆ. ಇನ್ನುಳಿದ ಐವರಲ್ಲಿ ತೀವ್ರ ಪೈಪೋಟಿ ನಡೆದಿರುವ ಕಾರಣ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ ಅವರು ತಮ್ಮ ಪದದತ್ತ ಅಧಿಕಾರ ಉಪಯೋಗಿಸಿ ಫೆ. 14 ರೊಳಗೆ ಓರ್ವರ ಹೆಸರನ್ನು ಘೋಷಿಸುವದಾಗಿಯೂ ಅದಾದ ನಂತರ ಎಲ್ಲರೂ ಸಹಮತದೊಂದಿಗೆ ಕಸಾಪ ಮುನ್ನಡೆಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಸಿದ್ಲಿಂಗಪ್ಪ ಆನೇಗುಂದಿ, ಸಾಹಿತಿ ಸಿದ್ಧರಾಮ ಹೊನ್ಕಲ್, ಶಿವಣ್ಣ ಇಜೇರಿ, ವಿಶ್ವರಾಧ್ಯ ಸತ್ಯಂಪೇಟ, ನೀಲಕಂಠ ಬಡಿಗೇರ, ಬಸವರಾಜ ಹಿರೇಮಠ, ಮಲ್ಲಿಕಾರ್ಜುನ ಪೂಜಾರಿ, ಸುಧೀರ ಚಿಂಚೋಳಿ, ಅಡಿವೆಪ್ಪ ಜಾಕಾ, ಬಸವರಾಜ ಅರುಣಿ, ಶಿವಶರಣಪ್ಪ ಕಲ್ಬುರ್ಗಿ, ಸಂಗಣ್ಣ ಮೋಟಗಿ, ದೇವಿಂದ್ರ ಹೆಗಡೆ, ಹಣಮಂತಿ ಗುತ್ತೇದಾರ, ಹುಸನಪ್ಪ ಕಟ್ಟಿಮನಿ ಸೇರಿದಂತೆ ವ್ಯಾಪಾರಸ್ತರು, ಸಾಹಿತ್ಯಾಸಕ್ತರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button