ಕಾವ್ಯ
ಯೋಚಿಸಬೇಕಾಗಿತ್ತು ..ಕಿರಣಗಿ ರಚಿತ ಕಾವ್ಯ
ಯೋಚಿಸಬೇಕಾಗಿತ್ತು ..
ಯೋಚಿಸಬೇಕಾಗಿತ್ತು
ಮಗನೆ….
ಹೆಂಡತಿಯ ಕರೆದುಕೊಂಡು
ಬೇರೆಯಾಗುವ ಮುನ್ನ…
ಹಳೆಯ ಚಪ್ಪಲಿಯನ್ನೆ
ಮತ್ತೆ ಮತ್ತೆ ಹೊಲಿಸಿ
ಅಪ್ಪ ಯಾಕೆ
ಮೆಟ್ಟುತ್ತಿದ್ದನೆಂದು…
ಗುಂಜೆದ್ದ ಕಾಲರ್ ಅಂಗಿ
ಬಣ್ಣ ಮಾಸಿದ ಪ್ಯಾಂಟ್
ಅಪ್ಪ ಯಾಕೆ
ತೊಡುತ್ತಿದನೆಂದು…
ಹಳೆಯ ಕನ್ನಡಕದ ಫ್ರೆಮಗೆ
ಬದಲಾದ ನಂಬರ ಗಾಜನ್ನ
ಅಪ್ಪ ಯಾಕೆ
ಹಾಕಿಸುತ್ತಿದ್ದನೆಂದು…
ಹೊಸ ಮೊಬೈಲ್ ಬಂದರೂ,
ಹಳೆಯದನ್ನೆ ಒತ್ತಿ ಒತ್ತಿ
ಅಪ್ಪ ಯಾಕೆ
ಬಳಸುತ್ತಿದ್ದನೆಂದು…
ತಾಳಿಯ ಕರಿಮಣಿಯಲಿ
ಬ್ಯಾಳಿಮಣಿ ಇರದಿದ್ದರೂ,
ಅವ್ವ ಯಾಕೆ ಸೆರಗ್ಹೊದ್ದು
ನಗುತ್ತಿದ್ದಳೆಂದು…
ಇರುವೆರಡು ಸೀರೆಗಳಿಗೆ
ಅಲ್ಲಲ್ಲಿ ದಿಂಡ್ಹಾಕಿ, ಹೆಂಗಸರ ನಡುವೆ
ಅವ್ವ ಯಾಕೆ ಮುಚ್ಚಿ
ಇರುತ್ತಿದ್ದಳೆಂದು…
ಹೊರಹೋಗುವ ಮುನ್ನ
ಯೋಚಿಸಬೇಕಾಗಿತ್ತು
ಮಗನೇ… ಇಂದಿನ ನಿನ್ನ ಸುಖ
ಅಪ್ಪ-ಅವ್ವಳ ತ್ಯಾಗದ ಭಿಕ್ಷೆಯಂದು…
–ಬಸವರಾಜ.ಎಂ.ಕಿರಣಗಿ.
ಇಂಡಿ.