ಕೆಪಿಟಿಸಿಎಲ್‌ನಲ್ಲಿ 902 ಹುದ್ದೆಗಳ ನೇಮಕ ಆದೇಶ: ಇಲ್ಲಿವೆ ಸಂಪೂರ್ಣ ವಿವರ
ಬೆಂಗಳೂರು: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು (ಕೆಪಿಟಿಸಿಎಲ್) ಒಟ್ಟು 902 ಹುದ್ದೆಗಳ ಭರ್ತಿಗೆ ನೇಮಕ ಆದೇಶ ಹೊರಡಿಸಿದೆ. ಚುನಾವಣಾ ನೀತಿ ಸಂಹಿತೆ ಜಾರಿಗೊಳ್ಳುವ ಮುನ್ನ ಅಂದರೆ ಕಳೆದ ಮಾರ್ಚ್‌ನಲ್ಲಿ ನೇಮಕ ಪ್ರಕ್ರಿಯೆ ಅಂತಿಮಗೊಂಡ 368 ಸಹಾಯಕ ಇಂಜಿನಿಯರ್(ವಿದ್ಯುತ್), 17 ಸಹಾಯಕ ಇಂಜಿನಿಯರ್(ಸಿವಿಲ್), 15-ಕಿರಿಯ ಇಂಜಿನಿಯರ್(ಸಿವಿಲ್) ಅಭ್ಯರ್ಥಿಗಳಿಗೆ ಕೌನ್ಸಿಲಿಂಗ್ ನಡೆಸಿ ನೇಮಕ ಆದೇಶ ನೀಡಲಾಗಿದೆ.
535 ಅಭ್ಯರ್ಥಿಗಳ ಪೈಕಿ 502 (ಕಿರಿಯ ಇಂಜಿನಿಯರ್) ಅಭ್ಯರ್ಥಿಗಳಿಗೆ ಬುಧವಾರ ಮತ್ತು ಗುರುವಾರ ಕೌನ್ಸಿಲಿಂಗ್ ನಡೆಸಿ ನೇಮಕ ಆದೇಶ ನೀಡಲಾಗಿದೆ. ಈ ಪೈಕಿ 73 ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕ ಪ್ರದೇಶ ವೃಂದಕ್ಕೆ ಸೇರಿದವರಾಗಿದ್ದು, ಉಳಿದ 429 ಅಭ್ಯರ್ಥಿಗಳು ಇತರೆ ವೃಂದದವರು.
ಇನ್ನುಳಿದಂತೆ, 360 ಕಿರಿಯ ಸಹಾಯಕ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಶುಕ್ರವಾರ (ಮೇ 24, 2024) ಕಡೆಯ ದಿನವಾಗಿದೆ. ಸ್ವೀಕರಿಸಿದ ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಅಂತಿಮ ಆಯ್ಕೆ ಪಟ್ಟಿ ಪ್ರಕಟಿಸಲು ಕ್ರಮವಹಿಸಲಾಗುವುದು. ಅಂತಿಮ ಆಯ್ಕೆ ಪಟ್ಟಿ ಪ್ರಕಟಣೆಗೊಂಡ ನಂತರ, ಎಲ್ಲಾ ಅಭ್ಯರ್ಥಿಗಳ ವಿದ್ಯಾರ್ಹತೆ ಹಾಗೂ ಮೀಸಲು ಕೋರಿರುವ ದಾಖಲೆಗಳ ಬಗ್ಗೆ ಸಂಬಂಧಿಸಿದ ಪ್ರಾಧಿಕಾರದಿಂದ ದೃಢೀಕರಣ ಪಡೆದು ತ್ವರಿತವಾಗಿ ಸ್ಥಳ ನಿಯುಕ್ತಿ ಹಾಗೂ ನೇಮಕ ಆದೇಶ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕೆಪಿಟಿಸಿಎಲ್ ಪ್ರಕಟಣೆ ತಿಳಿಸಿದೆ.