ಅಕಾಲಿಕ ಮಳೆಗೆ 210 ಕ್ಕೂ ಅಧಿಕ ಹೆಕ್ಟೇರ್ ಬೆಳೆ ನಷ್ಟ -ಸುನೀಲಕುಮಾರ

ಅಕಾಲಿಕ ಮಳೆಗೆ 210 ಕ್ಕೂ ಅಧಿಕ ಹೆಕ್ಟೇರ್ ಬೆಳೆ ನಷ್ಟ -ಸುನೀಲಕುಮಾರ
yadgiri, ಶಹಾಪುರಃ ಈಚೆಗೆ ಹವಾಮಾನದ ವೈಪರಿತ್ಯದಿಂದ ಉಂಟಾದ ಗಾಳಿ ಮತ್ತು ಅಕಾಲಿಕ ಮಳೆಗೆ ತಾಲೂಕಿನಲ್ಲಿ ಅಂದಾಜು 210ಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟ ಉಂಟಾಗಿದ್ದು, ಇನ್ನೂ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಸುನೀಲಕುಮಾರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ಉತ್ತಮ ಬೆಳೆ ಫಸಲು ಬರಲು ತಾಲೂಕಿನಲ್ಲಿ 27.6 ಮಿ.ಮಿ. ಮಳೆ ಅವಶ್ಯಕವಾಗಿತ್ತು. ಆದರೆ ಮಾನ್ಸೂನ್ ಏರಿಳಿತದಿಂದ ಮಳೆ ಅವಾಂತರ ಸೃಷ್ಟಿಯಾಗಿ 46.9 ಮಿ.ಮೀ.ನಷ್ಟು ಮಳೆ ಹೆಚ್ಚಾದ ಹಿನ್ನೆಲೆಯಲ್ಲಿ ಬೆಳೆ ನಷ್ಟಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
ಮುಂಗಾರು 72,497 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದು, ಭತ್ತ 14,245 ಹೆಕ್ಟೇರ್, ಹತ್ತಿ 37,772 ಹೆಕ್ಟೇರ್ ಮತ್ತು ತೊಗರಿ 20,480 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಅತಿ ಹೆಚ್ಚು ಹತ್ತಿ ಬೆಳೆ ಬಿತ್ತನೆ ಮಾಡಿದ್ದಾರೆ. ಮಳೆ ಆರ್ಭಟಕ್ಕೆ ಸುಮಾರು 13 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಬೆಳೆ ನಷ್ಟ ಮಾಹಿತಿ ದೊರೆತಿದ್ದು, ಇನ್ನೂ ಸರ್ವೆ ಕಾರ್ಯ ನಡೆದಿದ್ದು, ಸಮರ್ಪಕವಾಗಿ ಸರ್ವೇ ಕಾರ್ಯ ಮುಗಿದ ನಂತರ ನಷ್ಟದ ಸಂಪೂರ್ಣ ಮಾಹಿತಿ ದೊರೆಯಲಿದೆ ಎಂದರು.
ಹಿಂಗಾರು ಹಂಗಾಮುನಲ್ಲಿ 24,935 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈಗಾಗಲೇ 23 ಸಾವಿರ ಹೆಕ್ಟೇರನಲ್ಲಿ ಬಿತ್ತನೆ ಮಾಡಿದ್ದಾರೆ. ಇನ್ನೂ ಸಾವಿರ ಹೆಕ್ಟೇರ್ ಜಮೀನಿನಲ್ಲಿ ಬಿತ್ತನೆ ಬಾಕಿ ಉಳಿದಿದೆ ಸಹಾಯಕ ನಿರ್ದೇಶಕರು ಮಾಹಿತಿ ನೀಡಿದರು. ಜೋಳ 6,255 ಹೆಕ್ಟೇರ್, ಸೇಂಗಾ 12,975 ಹೆಕ್ಟೇರ್, ಕಡಲೆ 3,760 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತಿದ್ದಾರೆ ವಿವರಿಸಿದರು.