ಮಾವು ಬೆಳೆಗಳಿಗೆ ಚಳಿ ತಂದ ಆಪತ್ತು, ಜಿಗಿ ಹುಳದ ನಿರ್ವಹಣೆ ಹೇಗೆ ಗೊತ್ತೆ.?
ಮಾವು ಬೆಳೆಗೆ ಜಿಗಿಹುಳ ರೋಗಃ ಬೆಳೆಗಾರರಲ್ಲಿ ಆತಂಕ
ಯಾದಗಿರಿಃ ಮಾವು ಬೆಳೆ ಜಿಲೆಯಾದ್ಯಂತ ಹೂವಾಡುವ ಮತ್ತು ಕಾಯಿ ಕಟ್ಟುವ ಹಂತದಲ್ಲಿದೆ. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ತಂಡವು ಹಲವಾರು ತೋಟಗಳಿಗೆ ಭೇಟಿ ನೀಡಲಾಗಿ ಕಳೆದ 10 ದಿನಗಳಿಂದ ವಾತಾವರಣದಲ್ಲಿ ಛಳಿಯ ಪ್ರಮಾಣ ಹೆಚ್ಚಾದಂತೆ, ಮಾವಿನಲ್ಲಿ ಜಿಗಿ ಹುಳದ ಬಾಧೆ ಕಂಡುಬರುತ್ತಿದೆ
ಗಿಡದ ಟೊಂಗೆಗಳನ್ನು ತಟ್ಟಿದಾಗ ಜಿಗಿ ಹುಳಗಳು ಹಾರಾಡುವದನ್ನು ಗಮನಿಸಬಹುದು. ಬಾಧೆಗೊಳಗಾದ ಗಿಡಗಳ ಎಲೆಗಳಮೇಲೆ ಎಣ್ಣೆ ಸವರಿದಂತೆ ಕಂಡು ಬರುತ್ತವೆ. ತೀವ್ರವಾಗಿ ಬಾಧೆಗೊಳಗಾದ ಗಿಡಗಳ ಎಲೆಗಳಿಂದ ಜಿಗಿಯು ಬರುತ್ತಿದ್ದು, ಈ ಜಿಗಿಯು ಎಲೆಗಳ ಮೇಲೆ ಹರಡಿ ಕ್ರಮೇಣ ಶಿಲೀಂದ್ರಗಳ ಬೆಳವಣಿಗೆಗೆ ಅವಕಾಶವನ್ನುಂಟು ಮಾಡುತ್ತದೆ.
ಇದರೊಂದಿಗೆ ಬೂದು ರೋಗವು ಸಹ ಕಂಡುಬರುತ್ತಿದ್ದು ಒಟ್ಟಾರೆ ಹೂವು ಮತ್ತು ಕಾಯಿಗಳಿಗೆ ಬಾಧೆಯಾಗುವದನ್ನು ಕಂಡುಕೊಳ್ಳಲಾಗಿದೆ. ಜಿಗಿ ಹುಳಗಳ ನಿರ್ವಹಣೆಗೆ ಇಮಿಡಾಕ್ಲೋಪ್ರಿಡ್ 0.5 ಮಿ.ಲೀ. ಅಥವಾ ಥೈಯೋಮೀಥಾಕ್ಸಿಮ್ 0.25 ಗ್ರಾಂ. ಅಥವಾ ಲ್ಯಾಂಬ್ಡಾಚೈಲೊಥ್ರೀನ್ 0.5 ಮಿ.ಲೀ. ಪ್ರತಿ ಲೀಟರ ನೀರಿಗೆ ಬೆರಸಿ ಸಿಂಪರಣೆ ಮಾಡಬೇಕು.
ಬೂದು ರೋಗವಿದ್ದಲ್ಲಿ ಹೆಕ್ಸಾಕೊನಾಜೋಲ್ 1 ಮಿ.ಲೀ. ಅಥವಾ ಡೈಫೆನ್‍ಕೊನಾಜೋಲ್ 1 ಮಿ.ಲೀ. ಪ್ರತಿ ಲೀಟರ ನೀರಿಗೆ ಬೆರಸಿ ಸಿಂಪರಣೆ ಮಾಡವುದು ಸೂಕ್ತ. ಕೀಟನಾಶಕ ಮತ್ತು ರೋಗನಾಶಕಗಳು ಎರಡು ಅವಶ್ಯಕವಿದ್ದಲ್ಲಿ ಬೆರಸಿ ಸಿಂಪರಣೆ ಮಾಡಬಹುದು. ಹೂವುಗಳಿದ್ದಲ್ಲಿ ಸಿಂಪರಣೆಯನ್ನು ನೇರವಾಗಿ ಹೆಚ್ಚು ರಭಸದಿಂದ ಮಾಡದೆ ಹೊಗೆ ಹೊರಸೂಸುವಂತೆ ಸಿಂಪರಣೆ ಮಾಡುವದು ಒಳ್ಳೆಯದು.
ಕಾಯಿ ಕಟ್ಟಿದ ಗಿಡಗಳಿಗೆ ಒಳ್ಳೆಯ ಫಸಲು ಪಡೆಯಲು ಲಘು ಪೋಷಕಾಂಶಗಳನ್ನು ಒದಗಿಸುವದು ಒಳ್ಳೆಯದು. ಸಾದ್ಯವಿದ್ದಲ್ಲಿ ಮ್ಯಾಂಗೊ ಸ್ಪೇಷಲ್ 5 ಗ್ರಾಂ. ಪ್ರತಿ ಲೀಟರ ನೀರಿಗೆ ಬೆರಸಿ ಬೆಳೆ ಕಟಾವು ಆಗುವವರೆಗೆ ಒಟ್ಟು ಎರಡರಿಂದ ಮೂರು ಬಾರಿ ಸಿಂಪರಣೆ ಮಾಡುವದರಿಂದ ಒಳ್ಳೆಯ ಗುಣಮಟ್ಟದ ಮಾವಿನ ಇಳುವರಿ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಕೃಷಿ ವಿಜ್ಞಾನ ಕೇಂದ್ರ, ಯಾದಗಿರಿಯ ವಿಜ್ಞಾನಿಗಳಾದ ಡಾ. ಮಲ್ಲಿಕಾರ್ಜುನ ಕೆಂಗನಾಳ ದೂ: 9845364708 ಹಾಗೂ ತೋಟಗಾರಿಕೆ ತಜ್ಞರಾದ ಡಾ. ಸತೀಶ ಕಾಳೆ ಇವರನ್ನು ಸಂಪರ್ಕಿಸಬಹುದು.