ಶರಣಬಸವೇಶ್ವರ ಮಠದ ಪೀಠ ತ್ಯಾಗ ವಿಚಾರಃ ಪೀಠಾಧಿಪತಿಯನ್ನು ವಾಪಸ್ ಕರೆ ತಂದ ಭಕ್ತರು
ಶರಣಬಸವೇಶ್ವರ ಮಠದ ಪೀಠ ತ್ಯಾಗ ವಿಚಾರಃ ಪೀಠಾಧಿಪತಿಯನ್ನು ವಾಪಸ್ ಕರೆ ತಂದ ಭಕ್ತರು
ಯಾದಗಿರಿಃ ನಗನೂರ ಗ್ರಾಮದ ಶ್ರೀಶರಣಬಸವೇಶ್ವರ ಮಠದ ಪೀಠಾಧಿಪತಿಗಳನ್ನು ಭಕ್ತರು ಮರಳಿ ಮಠಕ್ಕೆ ಕರೆ ತರುವ ಮೂಲಕ ಪೀಠಾಧಿಪತಿ ಸ್ಥಾನಕ್ಕೆ ತಿಂಗಳ ಹಿಂದೆ ರಾಜೀನಾಮೆ ನೀಡಿರುವದನ್ನು ವಾಪಸ್ ಪಡೆಯುವಂತೆ ಮನವೊಲಿಸುವಲ್ಲಿ ಭಕ್ತರು ಯಶಸ್ವಿಯಾಗಿದ್ದಾರೆ.

ಇದೀಗ ಅವರನ್ನು ಭಕ್ತ ಸಮೂಹ ಮೆರವಣಿಗೆ ಮೂಲಕ ಶ್ರೀಮಠಕ್ಕೆ ಕರೆ ತಂದರೂ. ಕಳಶ ಬೆಳಗಿ ಪಾದ ಪೂಜೆ ನೆರವೇರಿಸಿ ಅವರನ್ನು ಶ್ರೀಮಠದೊಳಗೆ ಬರಮಾಡಿಕೊಂಡಿದ್ದಾರೆ.
ಜಿಲ್ಲೆಯ ಸುರಪುರ ತಾಲೂಕಿನ ನಗನೂರ ಗ್ರಾಮದ ಶ್ರೀಶರಣಬಸವೇಶ್ವರ ದಾಸೋಹ ಮಠದ ಪೀಠಾಧಿಪತಿ ಶರಣಪ್ಪ ಶರಣರು ಕಾರಣಾಂತರದಿಂದ ಪೀಠಾಧಿಪತಿ ಹಾಗೂ ಅರ್ಚಕ ಸ್ಥಾನಕ್ಕೆ ಕಳೆದ ತಿಂಗಳು ತಹಶೀಲ್ದಾರ ಅವರಿಗೆ ರಾಜೀನಾಮೆ ನೀಡಿದ್ದರು.
ಶ್ರೀಮಠದಲ್ಲಿ ಏನೇನೋ ನಡೆದಿದೆ ಎಂಬ ಸುದ್ದಿಗಳು ಹೊರ ಬಂದಿದ್ದವು. ಶ್ರೀಮಠದ ನೂತನ ರಥ ನಿರ್ಮಿಸುವ ಕಾರ್ಯದಲ್ಲಿ ಶ್ರೀಮಠದ ಶರಣಪ್ಪ ಶರಣರು ಪ್ರಮುಖ ಪಾತ್ರವಹಿಸಿದ್ದರು.
ಈ ನಡುವೆ ಕೆಲ ಮಾತುಗಳು ಕೇಳಿ ಬಂದ ಹಿನ್ನೆಲೆ ನೂತನ ರಥ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಲ್ಲಿಸಿ ಶರಣಪ್ಪ ಶರಣರು ರಾಜೀನಾಮೆ ನೀಡಿದ್ದರು. ಇದೀಗ ಉಹಾಪೋಹ ವಿಚಾರಗಳಿಗೆ ಭಕ್ತ ಸಮೂಹವೇ ತೆರೆ ಎಳೆದು ಶರಣಪ್ಪ ಶರಣರನ್ನು ಶ್ರೀಮಠಕ್ಕೆ ಕರೆ ತಂದಿದ್ದಾರೆ.
ಈ ಬಾರಿ ಜಾತ್ರಾಮಹೋತ್ಸವ ವೇಳೆಗೆ ನೂತನ ರಥದ ಕಾರ್ಯ ಮುಗಿಸಿ ಭಕ್ತ ಸಮೂಹಕ್ಕೆ ದರ್ಶನ ಭಾಗ್ಯ ಕಲ್ಪಿಸಲಾಗುವದು ಎಂದು ಶ್ರೀಮಠದ ಮೂಲಗಳಿಂದ ತಿಳಿದು ಬಂದಿದೆ.