ಉಪಕಾರ ಸ್ಮರಣೆಗಾಗಿ ಶ್ರೀಮಂತನಿಗೆ ಚಿನ್ನದ ಇಲಿ ನೀಡಿದ ಯುವಕ
ಬಾಳು ಬೆಳಗಿಸಿದ ಇಲಿ..
ಗುರುಪುರ ಎಂಬಲ್ಲಿ ಗುರುದತ್ತನೆಂಬ ತೀರಾ ಬಡವನಿದ್ದ. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಆತನನ್ನು ತಾಯಿ ಕಣ್ಣಿನ ಮೇಲೆ ಕಣ್ಣಿಟ್ಟು ಸಾಕಿದ್ದಳು. ಜೀವನೋಪಾಯಕ್ಕೆಂದೇ ಸಮೀಪದ ಶ್ರೀಮಂತನಲ್ಲಿ ಬಂದು ಬೇಡಿದಾಗ ಆತ ಕೋಪದಿಂದ “ಎಂಥ ಮುಠ್ಠಾಳ ನೀನು? ಪದೇ ಪದೇ ಸಾಲ ಕೇಳುವುದು… ತಿರುಗಾಡುವುದು… ತರವಲ್ಲ ನಿಜವಾದ ಜಾಣ ನೀನಾದರೆ ನಿನಗೆ ವ್ಯಾಪಾರಕ್ಕೆ ಬಂಡವಾಳವೇ ಬೇಕಿಲ್ಲ. ಒಂದು ಸತ್ತ ಇಲಿ ಆದರೂ ಸಾಕಾಗುತ್ತದೆ. ತಿಳಿದು ಚುರುಕಾಗು, ತೊಲಗಾಚೆ…’
ತುಸು ಹೊತ್ತು ಅಲ್ಲೇ ನಿಂತಿದ್ದ ಗುರುದತ್ತ ಕಣ್ಣುಂಬಿ ಬೇಡಿಯೇ ಬಿಟ್ಟ – ಸ್ವಾಮಿ, ಈ ಬಾರಿ ಬಂಡವಾಳವಾಗಿ ನೀವು ಕೊಟ್ಟದ್ದನ್ನು ಖಂಡಿತ ಉಪಯೋಗಿಸಿಕೊಂಡು ಮೇಲೇರುವೆ. ದ…ಮ್ಮ…ಯ್ಯಾ…’
ಆತನ ಕರುಣೆದೋರಿ ಧನಿಕನು ಮನೆಯ ಬೋನಿನಲ್ಲಿ ಬಿದ್ದಿದ್ದ ಇಲಿಯನ್ನೇ ಕೊಂದು ಗುರುದತ್ತನಿಗೆ ನೀಡಿ ತನ್ನ ಲೆಕ್ಕಪುಸ್ತಕದಲ್ಲಿ ಬರೆದಿಟ್ಟುಕೊಳ್ಳುತ್ತಾನೆ.
ಗುರುದತ್ತ ಆ ಇಲಿಯನ್ನು ಹಿಡಿದುಕೊಂಡು ‘ಇಲಿ ಬೇಕೇ ಇಲಿ’ ಎಂದು ಕೂಗುತ್ತಲೇ ಹೊರಟ. ತಕ್ಷಣ ಬಟ್ಟೆ ವ್ಯಾಪಾರಿಯೊಬ್ಬ ‘ನಮ್ಮನೆ ಬೆಕ್ಕಿಗೆ ಬೇಕಾಗಿದೆ’ ಎಂದು ಅರ್ಧ ಸೇರು ಕಡಲೆಕಾಯಿ ಕೊಟ್ಟು ಅದನ್ನು ಪಡೆದ.
ಗುರುದತ್ತ ಅದನ್ನು ಮನೆಗೆ ತೆಗೆದುಕೊಂಡು ಹೋಗಿ ಹುರಿದು ಒಂದು ಬಿಂದಿಗೆಯಲ್ಲಿ ನೀರಿನ ಜತೆ ರಸ್ತೆಬದಿಯಲ್ಲಿ ಕುಳಿತುಕೊಂಡ. ಕಾಡಿನಿಂದ ಸೌದೆ ತರುವ ಬಡ ಜನರು ಆ ಕಡಲೆಕಾಯಿ ತಿಂದು ನೀರು ಕುಡಿದು ಬದಲಿಗೆ ಅವನಿಗೆ ಸೌದೆ ನೀಡಿದರು. ಹೀಗೆ ದೊರೆತ ಸೌದೆ ಮಾರಾಟಮಾಡಿ ಪುನಃ ಕಡಲೆಕಾಯಿ ತಂದು ಹುರಿದು ಮಾರುವ ಉದ್ಯೋಗ ಬೆಳೆಸಿದನು.
ತಾನು ಪಡೆದ ಸೌದೆಯನ್ನೆಲ್ಲ ಸಂಗ್ರಹಿಸಿಟ್ಟುಕೊಂಡು ಮಳೆಗಾಲದಲ್ಲಿ ಜಾಸ್ತಿ ಬೆಲೆಗೆ ಮಾರಿ ಸಾಕಷ್ಟು ಹಣ ಸಂಗ್ರಹಿಸಿ ಒಂದು ದಿನಸಿ ಅಂಗಡಿ ತೆರೆದ. ಹೀಗೆ ಕ್ರಮೇಣ ದೊಡ್ಡ ವ್ಯಾಪಾರಿ ಆದ.
ಒಂದು ದಿನ ಅದೇ ಸಿರಿವಂತನ ಮನೆಗೆ ಚಿನ್ನದ ಇಲಿ ಮಾಡಿಕೊಂಡು ಹೋದ. ಅವನಿಗೆ ಅದನ್ನು ಕೊಟ್ಟು ಲೆಕ್ಕದ ಪುಸ್ತಕ ತೆರೆಯಿಸಿ ‘ಉಪಕಾರ ಸ್ಮರಣೆಗಾಗಿ’ ಎಂದು ಬರೆಯಿಸಿ ಈ ಇಲಿಕೊಟ್ಟು ನಮಿಸಿದ ಗುರುದತ್ತ.
ತಕ್ಷಣ ಜಿಪುಣ ಶ್ರೀಮಂತನಿಗೆ ಜ್ಞಾನೋದಯವಾಯಿತು. ‘ನಾನು ದ್ವೇಷದಿಂದ ಸತ್ತ ಇಲಿಯನ್ನು ಕೊಟ್ಟರೂ, ನೀವು ಸೌಜನ್ಯದಿಂದ ಅದನ್ನೇ ಪಡೆದು ವಿವೇಕದಿಂದ ಬೆಳೆದು ಗೌರವಾದರದಿಂದ ಮೇರುವ್ಯಕ್ತಿಯೇ ಆಗಿದ್ದೀರಿ. ನನ್ನ ಒಬ್ಬಳೇ ಮಗಳನ್ನು ನಿಮಗೇನೇ ಕೊಟ್ಟು ನನ್ನ ವಿಶಾಲ ಆಸ್ತಿಗೆ ನಿಮ್ಮನ್ನೇ ಒಡೆಯನನ್ನಾಗಿಸುವೆ. ದಯಮಾಡಿ ಒಪ್ಪಬೇಕು’ ಎಂದೇ ವಿನಮ್ರ ಮೊರೆ ಸಲ್ಲಿಸಿದ.
ನೀತಿ :– ಉದ್ಯೋಗಂ ಪುರುಷ ಲಕ್ಷಣಂ.
🖊️ಸಂಗ್ರಹ🖋️
ಡಾ.ಈಶ್ವರಾನಂದ ಸ್ವಾಮೀಜಿ.
📞 – 9341137882.