ಪ್ರತಿಯೊಬ್ಬರಿಗೂ ಸಂವಿಧಾನದ ಜ್ಞಾನ ಅಗತ್ಯ- ಪ್ಯಾಟಿ
ಸಾಮಾಜಿಕ ಜನಜಾಗೃತಿ ವಿಚಾರ ಸಂಕಿರಣ
yadgiri, ಶಹಾಪುರಃ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿದರೆ ಮಾತ್ರ ಸಾಮಾಜಿಕವಾಗಿ ವಿವಿಧ ಕ್ಷೇತ್ರಗಳಲ್ಲಿ ಪ್ರಗತಿ ಹೊಂದಲು ಸಾಧ್ಯವಿದೆ. ಆ ನಿಟ್ಟಿನಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ ಮತ್ತು ಸುಶಿಕ್ಷಿತರು ಜಾಗೃತರಾಗಿ ಸಮಾಜದ ಜನರಿಗೆ ಸಂವಿಧಾನ, ಕಾನೂನು ಅರಿವು ಮೂಡಿಸಬೇಕೆಂದು ತಾಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಮರೆಪ್ಪ ಪ್ಯಾಟಿ ತಿಳಿಸಿದರು.
ತಾಲೂಕಿನ ಶಿರವಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲ್ಬುರ್ಗಿ ರಂಗಾಯಣದವತಿಯಿಂದ ನಡೆದ ಸಾಮಾಜಿಕ ಜನಜಾಗೃತಿ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶೈಕ್ಷಣಿಕವಾಗಿ ಬಲಾಢ್ಯರಾಗದಿಲ್ಲ ಸಮಾಜದಲ್ಲಿ ಬದುಕುವದು ಕಷ್ಟಕರವಿದೆ. ಅನಕ್ಷರಸ್ಥರು ದೌರ್ಜನ್ಯಕ್ಕೆ, ಅನ್ಯಾಯ, ವಂಚನೆಗೆ ಒಳಗಾಗಲಿದ್ದಾರೆ. ಅದನ್ನು ಹೋಗಲಾಡಿಸಲು ಶಿಕ್ಷಣ ಅತ್ಯಗತ್ಯವಿದೆ ಎಂದರು.
ಉಪನ್ಯಾಸಕ ರಂಗನಾಥ ದೊರೆ ಮಾತನಾಡಿ, ಗ್ರಾಮೀಣ ಭಾಗದ ಜನರು ಜಾಗೃತರಾದಾಗ ಮಾತ್ರ ಬದಲಾವಣೆ ತರಲು ಸಾಧ್ಯ. ಕಾರಣ ಸುಶಿಕ್ಷಿತರು ಗ್ರಾಮೀಣ ಭಾಗದ ಜನರಲ್ಲಿ ಜಾಗೃತಿ ಮೂಡಿಸಬೇಕು. ದೇಶದಲ್ಲಿ ಹೆಚ್ಚಾಗಿ ಶೋಷಿತರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ದೌರ್ಜನ್ಯ ತಡೆಗೆ ಕಾನೂನು ಜ್ಞಾನ ಅತ್ಯಗತ್ಯ. ಆ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಬೇಕು. ವಿಶ್ವಾಸ ತುಂಬಬೇಕು ಎಂದು ಕರೆ ನೀಡಿದರು.
ಶಾಲೆಯ ಮುಖ್ಯಗುರು ಭೀಮಣ್ಣ ಪಾಟೀಲ್ ಬೇವಿನಹಳ್ಳಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಲ್ಲಣ್ಣ ಹೊಸಮನಿ, ಮಂಜುನಾಥ್ ರಡ್ಡಿ ಬೆಳಗಾವಿ, ರೇವಣಸಿದ್ಧೇಶ್ವರ ಆಲ್ದಾಳ ಉಪಸ್ಥಿತರಿದ್ದರು.