ಹಿಂದೂ ಸಾಮ್ರಾಟ ಶಿವಾಜಿ ಮಹಾರಾಜ ಜಯಂತ್ಯುತ್ಸವ
ತಾಲೂಕು ಆಡಳಿತದಿಂದ ಶಿವಾಜಿ ಮಹಾರಾಜರ ಜಯಂತಿ ಆಚರಣೆ
yadgiri,ಶಹಾಪುರಃ ಹಿಂದೂ ಸಾಮ್ರಾಟ ಶಿವಾಜಿ ಮಹಾರಾಜರ ಜಯಂತ್ಯುತ್ಸವ ನಗರದ ತಹಸೀಲ್ ಕಚೇರಿಯಲ್ಲಿ ಅತ್ಯಂತ ಸರಳವಾಗಿ ಅವರ ಭಾವಚಿತ್ರಕ್ಕೆ ಪೂಜೆ ನೆರವೇರಿಸುವ ಮೂಲಕ ಜರುಗಿತು.
ನಗರದ ತಹಸೀಲ್ ಕಚೇರಿಯಲ್ಲಿ ಕೋವಿಡ್ ಹಿನ್ನೆಲೆ ತಾಲೂಕು ಆಡಳಿತದಿಂದ ಸರಳವಾಗಿ ನಡೆದ ಶಿವಾಜಿ ಮಹಾರಾಜರ ಜಯಂತಿ ಆಚರಣೆಯಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಮರಾಠ ಸಮಾಜದ ಮುಖಂಡ ರಾಜೂ ಚಿಲ್ಲಾಳ, ರಾಷ್ಟ್ರವನ್ನು ಮೊಘಲರಿಂದ ಕಾಪಾಡಿದ ಕೀರ್ತಿ ಶಿವಾಜಿ ಮಹಾರಾಜರಿಗೆ ಸಲ್ಲುತ್ತದೆ, ಶಿವಾಜಿ ಮಹಾರಾಜರೂ ಓರ್ವ ಧೀರ ರಾಷ್ಟ್ರ ಪ್ರೇಮಿಯಾಗಿದ್ದಾರೆ. ಶಿವಾಜಿ ಮಹಾರಾಜರನ್ನು ಹಿಂದೂಗಳು ದೇವರನ್ನಾಗಿ ಪೂಜಿಸುತ್ತಾರೆ.
ಅವರ ಸಾಮ್ರಾಜ್ಯದಲ್ಲಿ ಹಿಂದೂ ದೇವಾಲಯಗಳ ರಕ್ಷಣೆ, ಧಾರ್ಮಿಕ ಸಹಿಷ್ಣುತೆ ಇತ್ತು. ಮುಸ್ಲಿಂ ಸೈನಿಕರು ಸಹ ಅವರ ಸಾಮ್ರಾಜ್ಯದಲ್ಲಿದ್ದರು. ಹಿಂದೂ ದೇವಾಲಯಗಳ ಜೊತೆ ಮಸೀದಿ ಕಟ್ಟಲು ಸಹ ಅವರು ಅನುಕೂಲ ಕಲ್ಪಿಸಿದ್ದರು. ಅವರ ಧೈರ್ಯ ಸಾಹಸದಿಂದಲೇ ಭಾರತದಲ್ಲಿ ಹಿಂದೂ ಸಂಪ್ರದಾಯ, ಪರಂಪರೆ, ದೇವಾಲಯಗಳು ಉಳಿವಿಗೆ ಸಾಧ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಯ್ಯ ಸಾಹು ಫಿರಂಗಿ, ಶಿರಸ್ತೆದಾರ ಚಂದ್ರಕಾಂತ, ಶ್ರೀಕಾಂತ, ತಾನಾಜಿ, ಅನುರಾಧ ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.