ಅಭಿವೃದ್ಧಿ ಕಾರ್ಯಗಳಿಗೆ 6 ಕೋಟಿ ಅನುದಾನ-ದರ್ಶನಾಪುರ
ಶಹಾಪುರ ನಗರಸಭೆ ಮತ್ತು ಕೆಂಭಾವಿ ಪುರಸಭೆಗೆ ಅನುದಾನ
ಯಾದಗಿರಿ, ಶಹಾಪುರಃ ಮತಕ್ಷೇತ್ರದ ಶಹಾಪುರ ನಗರಸಭೆ ಮತ್ತು ಕೆಂಭಾವಿ ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಎಸ್‍ಎಫ್‍ಸಿ ವಿಶೇಷ ಅನುದಾನದಡಿ 6 ಕೋಟಿ ರೂ. ಅನುದಾನ ಮಂಜೂರಿಯಾಗಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ ಅವರು, ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ಕುರಿತಂತೆ ಮುಖ್ಯಮಂತ್ರಿಗಳಿಗೆ ವಿಶೇಷ ಅನುದಾನ ನೀಡುವಂತೆ ಮನವಿ ಮಾಡಲಾಗಿತ್ತು. ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳ ವಿವೇಚನಾ ನಿಧಿಯಡಿ ಎಸ್‍ಎಫ್‍ಸಿ ವಿಶೇಷ ಅನುದಾನವಾಗಿ ಹೆಚ್ಚುವರಿಯಾಗಿ 6 ಕೋಟಿ ರೂ. ಮಂಜೂರಿ ಮಾಡಲಾಗಿದೆ.
ಮಂಜೂರು ಮಾಡಲಾದ ಅನುದಾನದಡಿ ಶಹಾಪುರ ನಗರಸಭೆ ಮತ್ತು ಕೆಂಭಾವಿ ಪುರಸಭೆ ವ್ಯಾಪ್ತಿಯಲ್ಲಿ ಕೈಗೊಳ್ಳುವ ಕಾಮಗಾರಿಗಳ ಕ್ರಿಯಾ ಯೋಜನೆಗಳನ್ನು ತಯ್ಯಾರಿಸಿ ಅಂದಾಜು ಪಟ್ಟಿ ಸಿದ್ಧಪಡಿಸಿ ಸಕ್ಷಮ ಪ್ರಾಧಿಕಾರದಿಂದ ತಾಂತ್ರಿಕ ಮತ್ತು ಆಡಳಿತಾತ್ಮಕ ಅನುಮೋದನೆಯೊಂದಿಗೆ ಟೆಂಡರ್ ಪ್ರಕ್ರಿಯೆ ಕೈಗೊಳ್ಳುವಂತೆ ನಗರಾಭಿವೃದ್ಧಿ ಇಲಾಖೆಯ ಅಧೀನ ಕಾರ್ಯದರ್ಶಿ ತಿಳಿಸಿದ್ದಾರೆಂದು ಶಾಸಕ ದರ್ಶನಾಪುರ ಮಾಹಿತಿ ನೀಡಿದ್ದಾರೆ.
ಈ ಅನುದಾನದಲ್ಲಿ ಶಹಾಪುರ ನಗರಸಭೆ ಮತ್ತು ಕೆಂಭಾವಿ ಪುರಸಭೆ ವ್ಯಾಪ್ತಿಯಲ್ಲಿಯ ರಸ್ತೆ ಮತ್ತು ಚರಂಡಿಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.