ಯಾದಗಿರಿ: ಮೂರುದಿನದಿಂದ ಕೃಷ್ಣಾ ನದಿಯ ನಡುಗಡ್ಡೆಯಲ್ಲಿ ಸಿಲುಕಿರುವ ಮೂವರ ಆಕ್ರಂದನ!
ಯಾದಗಿರಿ: ಸುರಪುರ ತಾಲೂಕಿನ ಮೇಲಿನಗಡ್ಡಿ ಗ್ರಾಮದ ಮೂವರು ಕುರಿಗಾಹಿಗಳು ಕಳೆದ ಸೋಮವಾರ ಕುರಿ ಮೇಯಿಸಲು ತೆರಳಿದ್ದಾರೆ. ಆದರೆ, ಭಾರೀ ಮಳೆಯಾದ ಪರಿಣಾಮ ಬಸವಸಾಗರ ಜಲಾಶಯ ಭರ್ತಿಯಾಗಿದೆ. ಜಲಾಶಯದಿಂದ ನೀರು ಬಿಡಲಾಗಿದೆ. ಅಲ್ಲದೆ ಕೃಷ್ಣಾನದಿ ತುಂಬಿ ಹರಿಯುತ್ತಿದೆ. ಪರಿಣಾಮ ಕೃಷ್ಣಾ ನದಿಯಲ್ಲಿ ಸಿಲುಕಿರುವ ಮೂವರು ಕುರಿಗಾಹಿಗಳು ಗ್ರಾಮಕ್ಕೆ ಮರಳಲು ಸಾಧ್ಯವಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷ್ಣಾ ನದಿಯ ನಡುಗಡ್ಡೆಯಂತ ಪ್ರದೇಶದಲ್ಲಿ ಕುರಿಗಾಹಿಗಳು ಸಿಲುಕಿದ್ದು ಮೂರು ದಿನಗಳಿಂದ ಊಟ, ನಿದ್ದೆ ಇಲ್ಲದೆ ಕಂಗಾಲಾಗಿದ್ದಾರೆಂದು ತಿಳಿದು ಬಂದಿದೆ.
ಕಳೆದ ಸೋಮವಾರ 80 ಕುರಿಗಳೊಂದಿಗೆ ಸೋಮಣ್ಣಗೌಡ, ಶೇಖರಪ್ಪ ಮತ್ತು ಗದ್ದೆಪ್ಪ ತೆರಳಿದ್ದರು. ಇದೀಗ ಸಂಕಷ್ಟಕ್ಕೆ ಸಿಲುಕಿರುವ ಕುರಿಗಾಹಿಗಳು ಜೀವಭಯದಲ್ಲಿದ್ದಾರೆ. ಅಲ್ಲದೆ ಮೂರು ದಿನಗಳಿಂದ ಆಹಾರವಿಲ್ಲದ ಪರಿಣಾಮ ಹಸಿವಿನಿಂದ ಬಳಲುತ್ತಿದ್ದಾರೆ. ಅಲ್ಲದೆ ಅನ್ನ ನೀಡುವಂತೆ ಅಂಗಲಾಚುತ್ತಿರುವ ಆಕ್ರಂದನ ಪ್ರತಿಧ್ವನಿಸುತ್ತಿದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಈ ಬಗ್ಗೆ ಕುರಿಗಾಹಿಗಳ ಕುಟುಂಬಸ್ಥರು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ರಕ್ಷಿಸುವಂತೆ ಮನವಿ ಮಾಡಿದ್ದಾರೆ. ಮೇಲಿನಗಡ್ಡಿ ಬಳಿಯ ಕೃಷ್ಣಾ ನದಿ ತೀರಕ್ಕೆ ಪೊಲೀಸ್ ಅಧಿಕಾರಿಗಳು, ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುರಿಗಾಹಿಗಳ ರಕ್ಷಣೆಗೆ ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳಲಿ ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.