ಪ್ರಮುಖ ಸುದ್ದಿ

ಕುಡಿದ ಅಮಲಿನಲ್ಲಿ ಅಡ್ಡಾದಿಡ್ಡಿ ಟಿಪ್ಪರ್ ಚಾಲನೆ ಓರ್ವ ಬಲಿ

ಟಿಪ್ಪರ್ ರಭಸಕ್ಕೆ ಬುಡ ಸಮೇತ ನೆಲಕ್ಕುರಳಿದ ಬೇವಿನ ಗಿಡ, ವಿದ್ಯುತ್ ಕಂಬಗಳು

ಕುಡಿದ ಅಮಲಿನಲ್ಲಿ ಅಡ್ಡಾದಿಡ್ಡಿ ಟಿಪ್ಪರ್ ಚಾಲನೆ ಓರ್ವ ಬಲಿ

ಟಿಪ್ಪರ್  ಚಲನೆಯ ಭಯಾನಕ ದೃಶ್ಯ ಸೆರೆ ಹಿಡಿದ ಜನತೆ, ಅಡ್ಡಾದಿಡ್ಡಿ ಚಾಲನೆ ಕಂಡು ಬೆಚ್ಚಿಬಿದ್ದ ವಾಹನ ಸವಾರರು

ಟಿಪ್ಪರ್ ರಭಸಕ್ಕೆ ಬುಡ ಸಮೇತ ನೆಲಕ್ಕುರಳಿದ ಬೇವಿನ ಗಿಡ, ವಿದ್ಯುತ್ ಕಂಬಗಳು

yadgiri, ಶಹಾಪುರಃ ಕುಡಿದ ಅಮಲಿನಲ್ಲಿ ಚಾಲಕನೋರ್ವ ಟಿಪ್ಪರನ್ನು ಅಡ್ಡಾದಿಡ್ಡಿಯಾಗಿ ಚಲಿಸಿದ ಪರಿಣಾಮ 18 ವರ್ಷದ ಯುವಕನೋರ್ವ ಸಾವನ್ನಪ್ಪಿದ ದಾರುಣ ಘಟನೆ ನಗರದ ಶಹಾಪುರ ಯಾದಗಿರಿ ಮುಖ್ಯ ರಸ್ತೆಯ ಕೃಷಿ ಇಲಾಖೆ ಎದುರಿಗೆ ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ.

ಸಾಹೇಬ ಪಟೇಲ್ ಚಾಂದಪಾಷ ನಾಡಗೌಡ (18) ಮೃತ ದುರ್ದೈವಿಯಾಗಿದ್ದಾನೆ. ಕಂಟಪೂರ್ತಿ ಕುಡಿದಿದ್ದ ಚಾಲಕ ಜೀವನ್ ಅಲಿಯಾಸ್ ವೆಂಕಟೇಶ್ ಮಲ್ಲಪ್ಪ ತೇಲಗರ ಶುಕ್ರವಾರ ರಾತ್ರಿ 10-40 ರ ಸುಮಾರಿಗೆ ಮೊದಲು ಹಿರೇಮಠ ಪೆಟ್ರೋಲ್ ಬಂಕ್ ಹತ್ತಿರ ನಿಂತಿರುವ ಟ್ರ್ಯಾಕ್ಟರ್‍ಗೆ ರಭಸವಾಗಿ ಗುದ್ದಿದ ಪರಿಣಾಮ ಟ್ರ್ಯಾಕ್ಟರ್ ನುಚ್ಚುನೂರಾಗಿದೆ. ಅಲ್ಲಿಂದ ಟಿಪ್ಪರ್ ಸಮೇತ ಪರಾರಿಯಾಗಲು ಯತ್ನಿಸುತ್ತ ವಾಹನವನ್ನು ಹಿಂದೆ ಮುಂದೆ ಮಾಡುವಾಗ ಎರಡು ವಿದ್ಯುತ್ ಕಂಬಗಳು ಧರೆಗುಳಿದಿವೆ. ಇದನ್ನು ಕಂಡ ಜನರು ಭಯಾನಕ ದೃಶ್ಯವನ್ನು ತಮ್ಮ ತಮ್ಮ ಮೊಬೈಲ್‍ಗಳಲ್ಲಿ ವಿಡಿಯೋ ಮಾಡಿದ್ದಾರೆ.

ವಿದ್ಯುತ್ ಕಂಬ ಧರೆಗುಳಿದಿರುವದನ್ನು ಲೆಕ್ಕಿಸದೆ ಅಡ್ಡಾದಿಡ್ಡಿಯಾಗಿ ಚಲಿಸಿಕೊಂಡು ಪರಾರಿಯಾಗಲು ಯತ್ನಿಸಿದ ಚಾಲಕನ ಟಿಪ್ಪರ್ ಹಿಂದೆ ಜನ ಬೆನ್ನು ಹತ್ತಿದ್ದಾರೆ. ಹಾಗೇ ಬಸವೇಶ್ವರ ಸರ್ಕಲ್ ದಿಂದ ಯಾದಗಿರಿ ರಸ್ತೆಗೆ ರಭಸದಿಂದಲೇ ಸಾಗಿದ ಟಿಪ್ಪರ್ ಕೃಷಿ ಇಲಾಖೆ ಎದುರುಗಡೆ ರಸ್ತೆ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿರುವ ಯುವಕನ ಮೇಲೆ ಟಿಪ್ಪರ್ ಹಾಯಿಸಿದ ಘಟನೆ ಪರಿಣಾಮ ಯುವಕ ಸ್ಥಳದಲ್ಲಿ ಪ್ರಾಣ ಬಿಟ್ಟಿದ್ದಾನೆ.

ಅಲ್ಲಿಂದ ಹೋಟೆಲ್‍ಗೆ ನುಗ್ಗಿದ್ದಲ್ಲದೆ ರಸ್ತೆ ಬದಿಯಲ್ಲಿರುವ ಎರಡು ಬೇವಿನ ಮರಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಮರಗಳು ಬುಡ ಸಮೇತ ನೆಲಕುರಳಿವೆ. ಗಿಡಗಳು ಅಡ್ಡ ಬಂದಿದ್ದರಿಂದ ಟಿಪ್ಪರ್ ಮುಂದೆ ಹೋಗದೆ ನಿಂತಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.  ಮೃತ ಯುವಕನ ತಂದೆ ಚಾಂದ್ ಪಾಷ ಮೈಬುಬ ಪಟೇಲ್ ನಾಡಗೌಡ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದೇವೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಎಸ್.ಎಂ.ಪಾಟೀಲ್ ತಿಳಿಸಿದ್ದಾರೆ.

ಟಿಪ್ಪರ್‍ಗಳಿಗೆ ಕಡಿವಾಣ ಹಾಕಲು ಒತ್ತಾಯಃ

ಟಿಪ್ಪರ್, ಲಾರಿಗಳ ಸಂಖ್ಯೆ ಹೆಚ್ಚಾಗಿದ್ದು, ಮರಳು ಹಾಗೂ ಮಣ್ಣು ಸಾಗಾಟದ ನೆಪದಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಗ್ರಾಮೀಣ, ರಾಜ್ಯ ಹೆದ್ದಾರಿಗಳಲ್ಲಿ ಹೆಚ್ಚಾಗಿ ಸಂಚರಿಸುವ ಈ ಟಿಪ್ಪರ್ ಲಾರಿಗಳ ಚಾಲಕರು ತಮಗೆ ತೋಚಿದ ರೀತಿಯಲ್ಲಿ ವಾಹನವನ್ನು ಚಲಾಯಿಸುವುದರಿಂದಾಗಿ ಪಾದಚಾರಿಗಳು, ದ್ವಿಚಕ್ರ ವಾಹನ ಹಾಗೂ ಇತರೆ ವಾಹನಗಳಿಗೆ ಇವುಗಳು ಯಮ ಸ್ವರೂಪಿಯಾಗುತ್ತಿವೆ.

ಸಾಕಷ್ಟು ಅನಾಹುತಗಳು ಸಂಭವಿಸುತ್ತಿದ್ದರೂ ಆರ್‍ಟಿಓ ಹಾಗೂ ಪೊಲೀಸ್ ಇಲಾಖೆಯವರು ಹಣದ ಆಸೆಗೆ ಮರಳು ಸಾಗಾಣಿಕೆಗೆ ಕಡಿವಾಣ ಹಾಕದೆ ನಿರ್ಲಕ್ಷ್ಯ ವಹಿಸಿದ್ದಾರೆ. ಯಾರು ಸತ್ತರು ಪರವಾಗಿಲ್ಲ ನಮಗೆ ಹಣ ಬರಲಿ ಎನ್ನುವ ಮನಸ್ಥಿತಿಯಲ್ಲಿರುವ ಇಲಾಖೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿಸಿಟಿವಿ ಏಕೆ ದುರಸ್ತಿಗೊಳಿಸುತ್ತಿಲ್ಲ..?

ನಗರದಲ್ಲಿ ದಿನಾಲು ಒಂದಿಲ್ಲ ಒಂದು ರಸ್ತೆ ಅಪಘಾತಗಳು ಸಂಭವಿಸುತ್ತಿವೆ. ಕೆಲ ವಾಹನಗಳು ಅಪಘಾತ ಮಾಡಿ ರಭಸವಾಗಿ ಚಲಾಸಿಕೊಂಡು ಹೋಗುತ್ತಾರೆ. ನಗರದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳು ಕಳೆದ ಎರಡು ವರ್ಷಗಳಿಂದ ಕೆಟ್ಟು ನಿಂತಿವೆ. ಕ್ಯಾಮೆರಾ ದುರಸ್ತಿಗೆ ಸಾರ್ವಜನಿಕರು ಒತ್ತಾಯಿಸಿದರೂ ನಗರ ಸಭೆ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಸಿಸಿಟಿವಿ ಕ್ಯಾಮೆರಾ ದುರಸ್ತಿಗೆ ಮುಂದಾಗುತ್ತಿಲ್ಲ ಏಕೆ.? ಎಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ.

ಅಕ್ರಮ ಮರಳು ಸಾಗಾಣಿಕೆ ವಿಷಯ ಸಿಸಿಟಿವಿ ಸೆರೆ ಹಿಡಿಯಲಿದೆ ಇದರಿಂದ ಪೊಲೀಸರಿಗೆ ನಿತ್ಯ ವಸೂಲಿ ಬಂದ್ ಆಗಲಿದೆ ಈ ಹಿನ್ನೆಲೆಯಲ್ಲಿ ಸಿಸಿಟಿವಿ ದುರಸ್ತಿ ಕಾರ್ಯಕ್ಕೆ ಪೊಲೀಸರು ಸೇರಿದಂತೆ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂಬ ಆರೋಪ ಬಲವಾಗಿ ಕೇಳಿ ಬರುತ್ತಿದೆ.

ಪೊಲೀಸರನ್ನು ಕೇಳಿದರೆ ರಿಪೇರಿ ಅಥವಾ ಹೊಸ ಸಿಸಿಟಿವಿ ಕೂಡಿಸುವುದು ನಗರ ಸಭೆಯವರ ಜವಾಬ್ದಾರಿಯನ್ನುತ್ತಾರೆ. ನಗರಸಭೆ ಅಧಿಕಾರಿಗಳು ಇದರ ಕಡೆ ಗಮನ ವಹಿಸುತ್ತಿಲ್ಲ. ಕೇಳಿದರೆ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಸಿಸಿಟಿವಿ ಕ್ಯಾಮೆರಾ ಸದ್ಯಕೂಡಿಸಲು ಬರುವದಿಲ್ಲ ಚುನಾವಣೆ ಮುಗಿದ ಮೇಲೆ ಕೂಡಿಸುವದಾಗಿ ಪ್ರಸ್ತುತ ಹೇಳಿಕೆಯಾಗಿದೆ.

ಕಾನೂನು ಸುವ್ಯವಸ್ಥೆ ಹಾಗು ನಾಗರಿಕರ ರಕ್ಷಣೆ ಸಿಸಿಟಿವಿ ಅಗತ್ಯವಿದೆ. ಇದಕ್ಕೆ ಚುನಾವಣೆ ನೀತಿ ಸಂಹಿತೆ ಜಾರಿಗೂ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಯಾವುದೇ ಸಂಬಂಧವಿಲ್ಲ. ಇದು ಯಾವುದೇ ಪಕ್ಷದ ಕೆಲಸವಲ್ಲ. ಅಲ್ಲದೆ ಚುನಾವಣೆ ವೇಳೆ ಸಿಸಿಟಿವಿ ದುರಸ್ತಿಗೊಳಿಸಿದ್ದಲ್ಲಿ ಇನ್ನಷ್ಟು ಅನುಕೂಲತೆಗಳಿವೆ. ನಗರಸಭೆ ಅಧಿಕಾರಿಗಳು ಕುಂಟು ನೆಪ ಹೇಳದೆ ಕೂಡಲೇ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು ಇಲ್ಲದಿದ್ದರೆ ನಗರಸಭೆ ಮುಂದೆ ಪ್ರತಿಭಟನೆ ಮಾಡುವುದಾಗಿ ಪ್ರಾಂತ ರೈತ ಸಂಘ ದಲಿತ ಪರ ಸಂಘಟನೆ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕ ಸಂಘದ ಮುಖಂಡರು ನಗರಸಭೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

 

ಬೀದರ್ ಬೆಂಗಳೂರು ರಾಜ್ಯ ಹೆದ್ದಾರಿ ಶಹಾಪುರ ಮಧ್ಯದಲ್ಲಿ ಹಾದು ಹೋಗಿದೆ. ನಗರದ ಮುಖ್ಯ ರಸ್ತೆಯಲ್ಲಿ ಜನನಿಬೀಡ ಪ್ರದೇಶವಾಗಿದ್ದು ಮರಳು ಹಾಗೂ ಮಣ್ಣು ಸಾಗಾಟದ ನೆಪದಲ್ಲಿ ಟಿಪ್ಪರ್‍ಗಳು ಬೇಕಾಬಿಟ್ಟಿಯಾಗಿ ಚಲಾಯಿಸುತ್ತಿದ್ದು ಪಾದಚಾರಿಗಳು, ವಾಹನ ಸವಾರರು ಭಯಭೀತರಾಗಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೂ ಹಾಗೂ ಪೊಲೀಸ್ ಇಲಾಖೆಗೆ ದೂರು ಕೊಟ್ಟರು ಯಾವುದೇ ಪ್ರಯೋಜನವಾಗಿಲ್ಲ.

ಮಾನಪ್ಪ ಹಡಪದ್.
ಸಾಮಾಜಿಕ ಕಾರ್ಯಕರ್ತ ಶಹಾಪುರ.

Related Articles

Leave a Reply

Your email address will not be published. Required fields are marked *

Back to top button