ವಯೋವೃದ್ಧರಿಗೆ ಲಸಿಕೆ ಃ ಉಚಿತ ಆಟೋಗಳ ವ್ಯವಸ್ಥೆ
ವಯೋವೃದ್ಧರಿಗೆ ಲಸಿಕೆ ಃ ಉಚಿತ ಆಟೋಗಳ ವ್ಯವಸ್ಥೆ
ಶಹಾಪುರಃ ರವಿವಾರ ನಗರದ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ ವಯೋವೃದ್ಧರಿಗೆ ಕೊರೊನಾ ನಿಯಂತ್ರಣ ಲಸಿಕೆ ಹಾಕಲಾಯಿತು.
ಈ ಸಂದರ್ಭದಲ್ಲಿ ನಗರದ ವಿವಿಧ ಬಡಾವಣೆಗಳಿಂದ 60 ವರ್ಷ ಮೇಲ್ಪಟ್ಟ ವಯೋವೃದ್ಧರನ್ನು ಇಲ್ಲಿನ ಸರ್ಕಾರಿ ಆಸ್ಪತೆಗೆ ಆಟೋ ಮೂಲಕ ಕರೆ ತಂದು ಕೊರೊನಾ ಲಸಿಕೆ ಹಾಕಿಸುವಲ್ಲಿ ಉಚಿತ ಸಾರಿಗೆ ವ್ಯವಸ್ಥೆಯನ್ನು ನಗರಸಭೆ ಕಲ್ಪಿಸಿತ್ತು.
ವಾರ್ಡವಾರು ವಯೋವೃದ್ಧರನ್ನು ಆಸ್ಪತ್ರೆಗೆ ಕರೆ ತಂದು ಲಸಿಕೆ ಹಾಕಿಸಿ ಮತ್ತೆ ವಾಪಸ್ ಮನೆಗೆ ಬಿಡುವ ಕೆಲಸಕ್ಕಾಗಿ ಸುಮಾರು 6 ರಿಂದ 8 ಆಟೋಗಳನ್ನು ನಗರಸಭೆ ವ್ಯವಸ್ಥೆ ಮಾಡಿತ್ತು. ಅಲ್ಲದೆ ಪೌರ ಕಾರ್ಮಿಕರಿಗೂ ಈ ಸಂದರ್ಭದಲ್ಲಿ ಲಸಿಕೆಯನ್ನು ಹಾಕಿಸಲಾಗಿದೆ ಎಂದು ನಗರಸಭೆ ಆಯುಕ್ತ ರಮೇಶ ಪಟ್ಟೇದಾರ ತಿಳಿಸಿದ್ದಾರೆ.
ಒಟ್ಟು ರವಿವಾರ 130 ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಮಲ್ಲಪ್ಪ ಕಣಜಗಿಕರ್ ಮಾಹಿತಿ ನೀಡಿದ್ದು, ಇನ್ನೂ ಹದಿನೈದು ದಿನಗಳವರೆಗೆ ಲಸಿಕೆ ಹಾಕಲಾಗುತ್ತಿದ್ದು, ಸಾರ್ವಜನಿಕರು ಅರ್ಹರು ಲಸಿಕೆ ಪಡೆಯಬೇಕೆಂದು ಅವರು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ಸಹಾಯಕ ಮಲ್ಲಪ್ಪ ಕಾಂಬ್ಳೆ ಸೇರಿದಂತೆ ಆರೋಗ್ಯ ಸಿಬ್ಬಂದಿ, ನಗರಸಭೆ ಅಧಿಕಾರಿಗಳು ಹಾಜರಿದ್ದರು.
10 ದಿನಗಳ ವರೆಗೆ ಉಚಿತ ಆಟೋ ವ್ಯವಸ್ಥೆ
ನಗರದ ಸರ್ಕಾರಿ ಆಸ್ಪತ್ರೆಗೆ ಲಸಿಕೆ ಹಾಕಿಸಿಕೊಳ್ಳಲು ಬರುವ 60 ವರ್ಷ ಮೇಲ್ಪಟ್ಟ ವೃದ್ಧರಿಗೆ ನಗರಸಭೆಯಿಂದ ಉಚಿತವಾಗಿ ಆಟೋ ವ್ಯವಸ್ಥೆ ಕಲ್ಪಿಸಲಾಗಿದ್ದು, ಇನ್ನೂ ಹತ್ತು ದಿನಗಳವರೆಗೆ ಉಚಿತ ಸಾರಿಗೆ ವ್ಯವಸ್ಥೆ ಮುಂದುವರೆಯಲಿದೆ. ನಾಗರಿಕರು ಸದುಪಯೋಗ ಪಡೆಯಬೇಕು. ಅರ್ಹರಿಗೆ ಲಸಿಕೆ ಹಾಕಿಸುವ ಮೂಲಕ ಅವರ ಆರೊಗ್ಯವೃದ್ಧಿಗೆ ಸಹಕರಿಸಬೇಕು.
–ರಮೇಶ ಪಟ್ಟೇದಾರ. ನಗರಸಭೆ ಆಯುಕ್ತರು.