ಸಿಂದಗಿಯ ಮಾಜಿ ಶಾಸಕ ಅಶೋಕ್ ಶಾಬಾದಿಗೆ ನೊಂದ ಬರಹಗಾರ ಉಪ್ಪಿನ್ ಬರೆದ ಪತ್ರ
ಸಿಂದಗಿಯ ಮಾಜಿ ಶಾಸಕ ಅಶೋಕ್ ಶಾಬಾದಿಯವರಿಗೊಂದು ಪ್ರೀತಿಯ ಪತ್ರ.. ..

ಸಿಂದಗಿಯ ಮಾಜಿ ಶಾಸಕ ಅಶೋಕ್ ಶಾಬಾದಿಯವರಿಗೊಂದು ಪ್ರೀತಿಯ ಪತ್ರ..
ಸಿಟ್ಟು ಕಡಿಮೆ ಮಾಡ್ಕೊಳ್ಳಿ, ಜರ ಚರ್ಚೆಗೆ ಬನ್ನಿ. ನೀವು ನಮ್ಮ ಅಮ್ಮನ ಅಣ್ಣನೇ ಆಗಿದ್ದಿರಿ. ಸೋದರ ಮಾವ. ನಮಸ್ಕಾರ..
ಹಲವು ವರ್ಷ ಕಾಂಗ್ರೆಸ್ನಲ್ಲಿದ್ರಿ. ಪ್ರಾಮಾಣಿಕ, ಸಂಭಾವಿತ ಅಂತ ನಾವು ತಿಳಿದೆವು. ೨೦೦೪ರಲ್ಲಿ ಬಿಜೆಪಿಯಿಂದ ಗೆದ್ದರಿ ತಾವು. ಇದಕ್ಕೂ ಮುಂಚೆ ಪಕ್ಷೇತರನಾಗಿ ೧೯ ಸಾವಿರ ಓಟು ಪಡೆದಿದ್ದಿರಿ. ತಾವು ಒಳ್ಳೆಯವರು ಅಂತ ತಿಳಿದು ನಾವೆಲ್ಲ ಹತ್ತು ವರ್ಷ ನಿಮ್ಮ ಬೆನ್ನು ಹತ್ತಿದ್ವಿ. ಅದೇನೊ ಗೊತ್ತಿಲ್ಲ- ಈಗಲೂ ನಮಗೆ ಇದು ಅತ್ಯಂತ ವಿಚಿತ್ರ ಸಂಗತಿಯೇ.
ಗೆದ್ದ ತಕ್ಷಣ ತಾವು ಬದಲಾದಿರಿ. ಜನರಿಂದ ಏಕಾಏಕಿ ದೂರವಾದಿರಿ. ಜನಪರವಾಗಿ ಯೋಚಿಸುತ್ತಿದ್ದ ನಮಗೆ ಆಘಾತವಾಯಿತು. ನಿಮ್ಮಿಂದ ನಾವೂ ದೂರವಾದೆವು. ನಮ್ಮೆಲ್ಲ ಶಕ್ತಿ, ಸಂಘಟನೆ ಸುರಿದಿದ್ದೆವು.
ಕಾರಣ ನನಗೆ ಜನ ಬೇಕಿತ್ತು. ಲಂಕೇಶ್, ರೈತ ನಾಯಕ ನಂಜುಂಡಸ್ವಾಮಿ, ಜಯಪ್ರಕಾಶ ನಾರಾಯಣ, ಬಸವಣ್ಣ, ಬುದ್ಧ, ಗಾಂಧೀಜಿ ಹಾಗೂ ಬಾಬಾಸಾಹೇಬ್ ಅಂಬೇಡ್ಕರ್ ಅವರಿಂದ ಪ್ರಭಾವಿತನಾಗಿದ್ದವ ನಾನು. ಬರಹಗಾರಿಕೆ ಗೊತ್ತಿದ್ದ, ಪತ್ರಕರ್ತನಾಗಿದ್ದ, ಸಾಮಾಜಿಕ ಕಳಕಳಿ ಬಯಸಿದ್ದ ನನಗೆ ಚುನಾವಣೆ ಮತ್ತು ಸಾರ್ವಜನಿಕ ಜೀವನ ಇಷ್ಟವಾಗಿ ತೊಡಗಿಸಿಕೊಂಡಿದ್ದೆ.
ನಿಮ್ಮಿಂದ ಯಾವ ವ್ಯಕ್ತಿಗತ ಸ್ವಾರ್ಥಕ್ಕೆ ಅಲ್ಲ. ಮೊದಲು ಇದನ್ನು ಸ್ಪಷ್ಟಪಡಿಸುವೆ. ಈಗಲೂ ನಾನು ಕಷ್ಟವೋ ಸುಖವೊ ಪ್ರಾಮಾಣಿಕನಾಗಿಯೇ ಇರುವೆ. ನಮ್ಮ ಮುತ್ತ್ಯಾ ಗಂಗಾಧರಪ್ಪ ಉಪ್ಪಿನರು ನಮಗೆ ಮಾಡಿಟ್ಟ ಆಸ್ತಿ ಇದೆ. ನನಗೆ ದುಡಿವ, ಬರೆವ ಶಕ್ತಿ ಇದೆ.
ಬದುಕುತ್ತಿರುವೆ. ನಾವೇ ನಿಮಗೆ ಅದೆಷ್ಟೋ ಆರ್ಥಿಕವಾಗಿ ಸಹಾಯ ಮಾಡಿದ್ದೇವೆ. ನಮ್ಮವ್ವಳ ಬಂಗಾರವೂ ನಿಮಗೆ ಕೊಟ್ಟಿದ್ದೆವು, ನೆನಪಿರಲಿ. ಗೆದ್ದ ನಂತರದ ನಿಮ್ಮ ನಡೆಯಿಂದ ಬೇಸತ್ತೆವು. ಒಂದು ತಿಂಗಳೂ ನಿಮ್ಮ ಹತ್ತಿರ ಇರಲಿಲ್ಲ. ಪ್ರತಿಭಟಿಸಿ ಹೊರ ಬಂದೆವು. ನಿಮ್ಮ ಸಹೋದರರೊಬ್ಬರಿಗೆ ಜೀವವೇ ತೇಯ್ದಿದ್ದೆ. ಡಾಕ್ಟರ್ ಆಗಿದ್ದ ಅವರು ನಿಮಗೆ ಎಲ್ಕದಕ್ಕೂ ಸಾಥ್ ನೀಡಿದ್ದರು, ಸೋತಿದ್ದರು.
ಅವರು ನಿಮ್ಮನ್ನು ದೇವರೆಂದೇ ತಿಳಿದಿದ್ದರು. ಹಗಲೂ ರಾತ್ರಿ ದುಡಿದು ದುಡಿದು ಕೊಟ್ಟಿದ್ದರು. ನೀವು ಯಾವುದೂ ನೆನಪು ಇಟ್ಟುಕೊಳ್ಳದೇ ಏಕದಂ ಬದಲಾದಿರಿ. ನಿಮ್ಮ ಸುಖ, ಸಂಸಾರ ನೋಡಿಕೊಂಡಿರಿ. ಇದು ಮೋಸವಲ್ಲವೇ? ಜನ ಅಷ್ಟಕ್ಕೂ ಬಯಸಿದ್ದು ನಿಮ್ಮಿಂದ ಎರಡು ಮಾತು ಅಷ್ಟೇ. ಅದೇ ಕೊಡದೆ ಹೋದಿರಿ.
ಒಳಗೊಳಗೇ ಜನ ವಿರೋಧಿಯಾಗಿದ್ರಿ ನೀವು. ಹೊರಗೂ ತೋರಿಸಿದಿರಿ. ಜನ ನೋಡಿದರೇ ಹಾವು ತುಳಿದಂತೆ ಆಡಿದಿರಿ. ಮನೆ ಗೇಟಿಗೆ ಬೀಗ ಹಾಕೊಂಡು, ಬಂದವರಿಗೆ ಬೈದು, ಯಾಕೆ ಬರ್ತೀರಿ ಅಂತ ನಿಕೃಷ್ಟವಾಗಿ ಅವಮಾನಿಸಿದಿರಿ! ಯಾಕೆ? ಅವರೇನು ನಿಮ್ಮ ಆಸ್ತಿ ಕೇಳಲು ಬಂದ್ರೆ?
ನಮಗೆ ನೀವು ಹೀಗಂತ ಗೊತ್ತಾಗಿರಲಿಲ್ಲ.
ಈ ಘೋಮುಖ ವ್ಯಾಘ್ರತೆ ಬಯಲಾದಾಗೇ ಜನಕ್ಕೆ, ನಮಗೆ ಗೊತ್ತಾಗಿದ್ದು. ಸಿಂದಗಿಯ ಸಾಮಾನ್ಯ ಜನ ಮನೆಯಿಂದ ಬುತ್ತಿಕಟ್ಟಿಕೊಂಡು ಬಂದು, ಅವರಿಗೇ ತಿನ್ನಲು ಕೂಳಿಲ್ಲದ್ದಿರೂ ಪಟ್ಟಿ ಹಾಕಿ ಎರಡು ಬಾರಿ ನಿಮ್ಮನ್ನು ಆರಿಸಲು ಸತ್ತು ಹುಟ್ಟಿದ್ದರು.
ಏನಾದರೂ ಒಂಚೂರಾದ್ರೂ ಇವರ ಬಗ್ಗೆ ಕರುಣೆ ಇತ್ತೇ ನಿಮಗೆ? ಕೇವಲ ಐವತ್ತು ಲಕ್ಷ ರು. ನಲ್ಲಿ ಎಲೆಕ್ಷನ್ ಮಾಡಿದ್ದೆವು ನಾವೆಲ್ಲ, ಜನರೆಲ್ಲ ಸೇರಿ! ಮಾಡಿದವರಿಗೇ ನಿಮಗ್ಯಾರು ಮಾಡು ಅಂದಿದ್ರು ಅಂದಿರಿ.. ಇರಲಿ. ಹೊಸ ಪರ್ವ ಸಿಂದಗಿಯಲ್ಲಿ ಶುರುವಾಗಬೇಕಿತ್ತು. ಆದರೆ ನಮ್ಮಂತವರಿಗೆಲ್ಲ ಭ್ರಮನಿರಸನವಾಯ್ತು ನಿಮ್ಮ ಈ ನಡೆಯಿಂದ.
ಇಷ್ಟು ದಿನ ಈ ನೋವು ನನ್ನಲ್ಲಿ ಮಡುಗಟ್ಟಿತ್ತು. ಈಗ ಬಹಳ ತ್ರಾಸಿನಿಂದ, ಮನಸ್ಸಿಗೆ ಬೇಡವಿದ್ದರೂ ಅನಿವಾರ್ಯವಾಗಿ ಹೇಳುತ್ತಿರುವೆ.
ಕ್ಷಮಿಸಿ ಬಿಡಿ, ಅಶೋಕ್ ಶಾಬಾದಿಯವರೇ.. ನಾವು ನಿಮ್ಮನ್ನು ನಂಬಿದ್ದಕ್ಕೆ. ಶರಣು ಶರಣಾರ್ಥಿ.
ಈಗಲೂ ನಿಮಗೆ ಒಳಿತೇ ಬಯಸುವೆ. ತಾವು ದೊಡ್ಡವರು, ನಾವು ಸಣ್ಣವರು. ನಾವೇ ತಪ್ಪು ಮಾಡಿದ್ದೇವೆ. ನೀವು ಸರಿಯಾಗೇ ಇದೀರಿ. ಧನ್ಯವಾದಗಳು ನಿಮ್ಮ ಈ ಪ್ರೀತಿಗೆ. ಒಳ್ಳೆಯತನಕ್ಕೆ. ನಾವೇ ಕೆಟ್ಟವರು, ಬಿಡಿ.
“ನೀವು ದೊಡ್ಡವರಿರಬಹುದು, ನಾವೇನೂ ಸಣ್ಣವರಲ್ಲ” ಎನ್ನುವ ಕವಿ ಮಾತೂ ಇದೆ. ಕಾಲವೇ ಎಲ್ಲದಕ್ಕೂ ಉತ್ತರ ನೀಡಲಿದೆ. ನಿಮಗೂ, ನಮಗೂ!
–ಶಿವಕುಮಾರ್ ಉಪ್ಪಿನ, ಪತ್ರಕರ್ತ-ಬರಹಗಾರ