ಪ್ರಮುಖ ಸುದ್ದಿವಿನಯ ವಿಶೇಷ

ಖ್ಯಾತ ಕವಿ ಸಿದ್ಲಿಂಗಯ್ಯ ವಿಧಿವಶಃ ಸಾಹಿತಿ ಹೊನ್ಕಲ್ ಶೋಕ

ನಾಡಿನ ಖ್ಯಾತ ದಲಿತ ಕವಿ ಆತ್ಮೀಯರಾದ ಡಾ.ಸಿದ್ದಲಿಂಗಯ್ಯರ ಆತ್ಮಕ್ಕೆ ಚಿರಶಾಂತಿ ಕೋರುವೆ. ಸದಾ ತಮ್ಮ ಸುತ್ತಲಿನ ಆತ್ಮೀಯರಿಗೆ ನಗು ನಗಿಸುತ್ತಲೇ ಮಾತಾಡುವ ಈ ಜೀವ ಇನ್ನೆಲ್ಲಿ. ಅಂತಹ ಖ್ಯಾತ ಕವಿ ಸಿದ್ದಲಿಂಗಯ್ಯನವರು ಇನ್ನಿಲ್ಲ ಎಂಬುದು ಅತ್ಯಂತ ನೋವಿನ‌ ವಿಷಯ ಎಂದು ಲೇಖಕ ಸಿದ್ಧರಾಮ ಹೊನ್ಕಲ್ ಶೋಕ ವ್ಯಕ್ತಪಡಿಸಿದ್ದಾರೆ.

ಕವಿ ಸಿದ್ಧಲಿಂಗಯ್ಯನವರು ಬಡ ಕುಟುಂಬವೊಂದರಲ್ಲಿ ದೇವಯ್ಯ ಮತ್ತು ವೆಂಕಟಮ್ಮನವರ ಪುತ್ರರಾಗಿ 1954 ರ ಫೆಬ್ರವರಿ 3 ರಂದು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಮಂಚನಬೆಲೆಯಲ್ಲಿ ಜನಿಸಿದರು.

ಮಾಗಡಿಯ ಹೊಸಹಳ್ಳಿಯ ಬಿಸಿಲಮ್ಮನ ಗುಡಿಯಲ್ಲಿ ಅಕ್ಷರಾಭ್ಯಾಸ ಪ್ರಾರಂಭಿಸಿದ ಸಿದ್ಧಲಿಂಗಯ್ಯನವರು 1974ರ ವರ್ಷದಲ್ಲಿ ಬೆಂಗಳೂರಿನ ಸರಕಾರಿ ಕಲಾಕಾಲೇಜಿನಿಂದ ಬಿ.ಎ. ಆನರ್ಸ್ (ಐಚ್ಛಿಕ ಕನ್ನಡ) ಪದವಿಯನ್ನು ಪಡೆದರಲ್ಲದೆ. 1976ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪ್ರೊ. ಡಿ.ಎಲ್‌. ನರಸಿಂಹಾಚಾರ್ಯರ ಸ್ವರ್ಣಪದಕದೊಂದಿಗೆ ಪ್ರಥಮ ಶ್ರೇಣಿಯಲ್ಲಿ ಎಂ.ಎ. ಪದವಿಯನ್ನೂ, ಪ್ರೊ. ಜಿ.ಎಸ್‌. ಶಿವರುದ್ರಪ್ಪನವರ ಮಾರ್ಗದರ್ಶನದಲ್ಲಿ ‘ಗ್ರಾಮ ದೇವತೆಗಳು’ ಎಂಬ ಪ್ರೌಢ ಪ್ರಬಂಧವನ್ನು ಮಂಡಿಸಿ 1989ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ. ಪದವಿಯನ್ನು ಗಳಿಸಿದವರಾಗಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದ ಸಿದ್ಧಲಿಂಗಯ್ಯನವರು, ಪ್ರಾಧ್ಯಾಪಕರಾಗಿ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ವಿದ್ಯಾರ್ಥಿ ದೆಸೆಯಿಂದಲೇ ಸಮಾಜದಲ್ಲಿನ ಅಸಮಾನತೆಗಳ ಬಗ್ಗೆ ತಮ್ಮೊಳಗೆ ಮೊಳೆಯುತ್ತಿದ್ದ ಸಿಟ್ಟು, ಆಕ್ರೋಶಗಳನ್ನೂ ವ್ಯಕ್ತಿಪಡಿಸಲು ಸಿದ್ಧಲಿಂಗಯ್ಯನವರು ಆಯ್ದುಕೊಂಡದ್ದು ಕಾವ್ಯ ಮಾಧ್ಯಮ. ಹೀಗೆ ಅವರು ಬರೆದ ಹಲವಾರು ಕವನಗಳ ಸಂಕಲನ ‘ಹೊಲೆಮಾದಿಗರ ಹಾಡು’ 1975ರಲ್ಲಿ ಪ್ರಕಟಗೊಂಡಿತು. ಮುಂದೆ ಅವರ ‘ಸಾವಿರಾರು ನದಿಗಳು’, ‘ಕಪ್ಪುಕಾಡಿನ ಹಾಡು’, ‘ಮೆರವಣಿಗೆ’, ‘ನನ್ನ ಜನಗಳು ಮತ್ತು ಇತರ ಕವಿತೆಗಳು’, ‘ಆಯ್ದ ಕವನಗಳು’ ಮುಂತಾದ ಕವನ ಸಂಕಲನಗಳು ಪ್ರಕಟಗೊಂಡಿವೆ.

ಸಿದ್ಧಲಿಂಗಯ್ಯನವರ ‘ಪಂಚಮ ಮತ್ತು ನೆಲಸಮ’, ‘ಏಕಲವ್ಯ’ ಪ್ರಮುಖ ನಾಟಕಗಳಾದರೆ ‘ಅವತಾರಗಳು’ ಪ್ರಬಂಧ ಕೃತಿ. ಇವಲ್ಲದೆ ರಸಗಳಿಗೆಗಳು, ಎಡಬಲ, ಹಕ್ಕಿನೋಟ, ಜನಸಂಸ್ಕೃತಿ, ಉರಿಕಂಡಾಯ ಮುಂತಾದ ಲೇಖನ ಸಂಗ್ರಹಗಳು, ಸದನದಲ್ಲಿ ಸಿದ್ಧಲಿಂಗಯ್ಯ ಭಾಗ ೧-೨ ಮತ್ತು ಆತ್ಮಕಥನ ಊರು-ಕೇರಿ ಭಾಗ ೧-೨ ಪ್ರಕಟಗೊಂಡಿವೆ. ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಾರಂಗಕ್ಕಾಗಿ ‘ಸಮಕಾಲೀನ ಕನ್ನಡ ಕವಿತೆಗಳು’ ಭಾಗ-೩ ಮತ್ತು ಭಾಗ-೪ ನ್ನು ಸಂಪಾದಿಸಿಕೊಟ್ಟಿದ್ದಾರೆ.

ಸಿದ್ಧಲಿಂಗಯ್ಯನವರ ‘ಊರು ಕೇರಿ’ ಆತ್ಮಕಥೆ ಇಂಗ್ಲಿಷ್‌ ಹಾಗೂ ತಮಿಳಿಗೂ ಅನುವಾದಗೊಂಡಿದ್ದು ಇಂಗ್ಲಿಷ್‌ ಅನುವಾದವನ್ನು ಕೇಂದ್ರ ಸಾಹಿತ್ಯ ಅಕಾಡಮಿಯು ಪ್ರಕಟಿಸಿದೆ.

ಸಿದ್ಧಲಿಂಗಯ್ಯನವರ ಹಲವಾರು ಕವಿತೆಗಳು ಇಂಗ್ಲಿಷ್‌, ಹಿಂದಿ, ತಮಿಳು, ಬಂಗಾಳಿ, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ಅನುವಾದಗೊಂಡಿವೆ.

ಸಿದ್ಧಲಿಂಗಯ್ಯನವರು ಪುಟ್ಟಣ್ಣ ಕಣಗಾಲರು ನಿರ್ದೇಶಿಸಿದ ‘ಧರಣಿಮಂಡಲ ಮಧ್ಯದೊಳಗೆ’ ಚಿತ್ರಕ್ಕೆ ಬರೆದ ಗೀತೆಗೆ 1983-84ರಲ್ಲಿ ರಾಜ್ಯಪ್ರಶಸ್ತಿ ಸಂದಿದೆ.

ಸಿದ್ಧರಾಮ ಹೊನ್ಕಲ್. ಹಿರಿಯ ಸಾಹಿತಿ.

Related Articles

Leave a Reply

Your email address will not be published. Required fields are marked *

Back to top button