ಶಹಾಪುರಃ ಆನೆಕಾಲು ಸ್ವಚ್ಛ ಮಾಡುವ ಕಾರ್ಯಕ್ರಮ
ಆನೆಕಾಲು ರೋಗ ನಿವಾರಣೆ ಮಾತ್ರೆ ಸೇವಿಸಲು ಸಲಹೆ
ಶಹಾಪುರಃ ರಾಷ್ಟ್ರೀಯ ಆನೆಕಾಲು ರೋಗ ತಡೆಯುವ ನಿಮಿತ್ತ ಶನಿವಾರ ಆನೆಕಾಲು ರೋಗಿಗಳ ಕಾಲು ತೊಳೆಯುವ ಮೂಲಕ ರೋಗ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಗರದ ಜಾಲಗಾರ ಓಣಿಯಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ರೋಗಿಯ ಆನೆಕಾಲು ತೊಳೆದು ಮಾತನಾಡಿದ ಹಿರಿಯ ಆರೋಗ್ಯ ಸಹಾಯಕ ಮಲ್ಲಪ್ಪ ಕಾಂಬ್ಳೆ, ಆನೆಕಾಲು ರೋಗ ನಿರ್ಮೂಲನೆಗಾಗಿ ಪ್ರತಿ ವರ್ಷ ಎಲ್ಲರಿಗೂ ಔಷಧಿ ವಿತರಣೆ ಮಾಡಲಾಗುತ್ತಿದೆ. ಎಲ್ಲರೂ ಔಷಧಿ ಸೇವಿಸಿದ್ದಲ್ಲಿ ಆನೆಕಾಲು ರೋಗ ನಮ್ಮ ದೇಶದಿಂದಲೇ ಓಡಿಸಬಹುದು. ರೋಗ ನಿರ್ಮೂಲನೆಗೆ ಔಷಧಿ ಸೇವನೆ ಬಹುಮುಖ್ಯವಾಗಿದೆ.
ಎರಡು ವರ್ಷದೊಳಗಿನ ಮಕ್ಕಳು ಮತ್ತು ಗರ್ಭೀಣಿಯರು ಮಾತ್ರ ಆನೆಕಾಲು ಮಾತ್ರೆ ಸೇವಿಸಬಾರದು. ಉಳಿದವರೆಲ್ಲರೂ ಪ್ರತಿ ವರ್ಷ ಆನೆಕಾಲು ಮಾತ್ರೆ ಸೇವಿಸಿದ್ದಲ್ಲಿ ಈ ರೋಗ ಕಳೆಯಬಹುದು ಎಂದರು.
ಈ ಸಂದರ್ಭದಲ್ಲಿ ಆನೆಕಾಲು ರೋಗಿಗಳಾದ ಅಂಬಾಜಿ, ಪಾರ್ವತಮ್ಮ, ಸಯ್ಯದ್ ಮೂಸಾ ಅವರ ಕಾಲುಗಳನ್ನು ತೊಳೆಯಲಾಯಿತು. ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಪ್ರಮೀಳಾ, ಕಿರಿಯ ಆರೋಗ್ಯ ಸಹಾಯಕರಾದ ಸಂತೋಷ ಗುಡಿಮನಿ, ನಾಗೇಶ್ವರಿ, ಸೋಮಶೇಖರ ಇದ್ದರು.