ವಕೀಲರ ರಕ್ಷಣೆಗೆ ನೂತನ ಕಾಯ್ದೆ ಅಗತ್ಯ- ವನದುರ್ಗ
ಶಹಾಪುರ: ವಿಜಯನಗರ ಜಿಲ್ಲೆಯ ಹೊಸಪೇಟೆ ನ್ಯಾಯಾಲಯ ಆವರಣದಲ್ಲಿ ಡಾ.ವೆಂಕಟೇಶ ಅವರ ಹತ್ಯೆ ಹಾಗೂ ತೆಲಂಗಾಣದಲ್ಲಿ ವಕೀಲ ದಂಪತಿಯ ಬರ್ಬರ ಹತ್ಯೆಯನ್ನು ಖಂಡಿಸಿ ಸೋಮವಾರ ಶಹಾಪುರ ವಕೀಲರ ಸಂಘದ ಸದಸ್ಯರು ನ್ಯಾಯಾಲಯದ ಕಲಾಪದಿಂದ ದೂರ ಉಳಿದುಕೊಂಡು ತಹಶೀಲ ಕಚೇರಿಗೆ ಆಗಮಿಸಿ ತಹಶೀಲ್ದಾರ ಜಗನಥರಡ್ಡಿ ಅವರಿಗೆ ಮನವಿ ಸಲ್ಲಿಸಿದರು.
ದೇಶದಲ್ಲಿ ವಕೀಲರಿಗೆ ರಕ್ಷಣೆ ಇಲ್ಲದಂತೆ ಆಗಿದೆ. ಇಂದಿನ ಪರಿಸ್ಥಿತಿ ಗಮನಿಸಿದರೆ ನ್ಯಾಯಾಲಯದಲ್ಲಿ ವಾದ ಮಂಡಿಸಲು ಭಯ ಹಾಗೂ ಭೀತಿಯ ವಾತಾವರಣ ಉಂಟಾಗಿದೆ. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ವಕೀಲರ ಪಾತ್ರ ಬಹು ಮುಖ್ಯವಾಗಿದೆ.
ಸಮಾಜದ ನಿರಪರಾಧಿಯನ್ನು ಕಾನೂನು ಚೌಕಟ್ಟಿನಲ್ಲಿ ಬಿಡುಗಡೆ ಮಾಡಿಸುವ ಜವಾಬ್ದಾರಿ ಪ್ರತಿಯೊಬ್ಬ ವಕೀಲರ ಕರ್ತವ್ಯವಾಗಿದೆ. ಆದರೆ ವಕೀಲರ ರಕ್ಷಣೆಯ ಹೊಣೆ ಹೊತ್ತ ಸರ್ಕಾರಗಳು ತ್ವರಿತವಾಗಿ ವಕೀಲರ ಸಂರಕ್ಷಣೆ ಕಾಯ್ದೆಯನ್ನು ಜಾರಿಗೊಳಿಸುವುದು ಅಗತ್ಯವಿದೆ ಎಂದು ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್.ರಾಂಪುರೆ ತಿಳಿಸಿದರು.
ಹಿರಿಯ ವಕೀಲ ಆರ್.ಚನ್ನಬಸು ವನದುರ್ಗ ಮಾತನಾಡಿ, ಪ್ರಸಕ್ತ ಸಂದರ್ಭ ವಕೀಲರ ಸಂರಕ್ಷಣೆಗೆ ನೂತನ ಕಾಯ್ದೆ ಜಾರಿ ಅಗತ್ಯವಿದೆ. ವಕೀಲರು ಜೀವ ಭಯದೊಂದಿಗೆ ವಾದ ಮಾಡುವಂತಾಗಿದೆ. ವಕೀಲರ ಪರಿಸ್ಥಿತಿ ಹೀಗಾದರೆ ಇನ್ನೂ ಜನ ಸಾಮಾನ್ಯರ ಪರಿಸ್ಥಿತಿ ಹೇಗಿರಬೇಡ. ಹೀಗಾಗಿ ಕೂಡಲೇ ವಕೀಲರ ಸಂರಕ್ಷಣೆ ಕೇಂದ್ರ ಸರ್ಕಾರ ಕಾನೂನು ರೂಪಿಸಬೇಕೆಂದು ಆಗ್ರಹಿಸಿದರು.
ಅಲ್ಲದೆ ಹತ್ಯೆಯಾದ ವಕೀಲರ ಕುಟುಂಬಗಳಿಗೆ ಸರ್ಕಾರ ತಕ್ಷಣ 10ಲಕ್ಷ ಪರಿಹಾರ ನೀಡಬೇಕು. ತಪ್ಪಿತಸ್ಥರನ್ನು ಬಂಧಿಸಬೇಕು ಎಂದು ಮನವಿ ಮಾಡಿದರು. ಸೋಮವಾರ ಇಲ್ಲಿನ ವಕೀಲರು ನ್ಯಾಯಾಲಯದ ಕಲಾಪದಲ್ಲಿ ಭಾಗವಹಿಸದೆ ದೂರು ಉಳಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಸಂದೀಪ ದೇಸಾಯಿ, ಲಕ್ಷ್ಮಿಕಾಂತ ಶಿಬರಬಂಡಿ, ವಿನೋದ ದೊರೆ ಹಾಗೂ ಹಿರಿಯ ವಕೀಲರಾದ ಶಾಂತಗೌಡ ಪಾಟೀಲ್, ಯೂಸೂಫ್ ಸಿದ್ದಕಿ, ಟಿ.ನಾಗೇಂದ್ರ, ಮಲ್ಕಪ್ಪ ಪಾಟೀಲ್, ಅಮರೇಶ ದೇಸಾಯಿ, ನಾಗರಡ್ಡಿ, ಮಲ್ಲಪ್ಪ ಪೂಜಾರಿ, ವಾಸುದೇವ ಕಟ್ಟಿಮನಿ, ಬಸುಗೌಡ ಯಕ್ಷಿಂತಿ, ಹೇಮರಡ್ಡಿ ಕೊಂಗಂಡಿ, ಶರಣಪ್ಪ ಕನ್ಯಾಕೊಳ್ಳುರ, ಜೈಲಾಲ ತೋಟದಮನೆ ಸೇರಿದಂತೆ ಇತರರಿದ್ದರು.