Home

ಭಗವದ್ಗೀತೆ ಮನುಕುಲ ಉದ್ಧಾರದ ಮೌಲಿಕ ಗ್ರಂಥ

ಲಕ್ಷ್ಮೀ ದೇವಸ್ಥಾನ ಆವರಣದಲ್ಲಿ ಗೀತಾ ಅಭಿಯಾನ

ಯಾದಗಿರಿ: ವ್ಯಕ್ತಿ ನಿರ್ಮಾಣಕ್ಕೆ ಸಂಬಂಧಿಸಿದ ಜಗತ್ತಿನ ಅನಘ್ರ್ಯ ರತ್ನ ಭಗವದ್ಗೀತೆ. ವ್ಯಕ್ತಿತ್ವ ವಿಕಸನಕ್ಕೆ ಇದರಷ್ಟು ಪ್ರಖರವಾದ ಮಹಾಗ್ರಂಥ ಬೇರ್ಯಾವುದೂ ಇಲ್ಲ. ಎಲ್ಲ ಸಮಸ್ಯೆಗಳಿಗೂ ಪರಿಹಾರ ಸೂಚಿಸಬಲ್ಲ ಅದಮ್ಯ ಶಕ್ತಿ ಇದರಲ್ಲಿದ್ದು, ವಿಶ್ವಕ್ಕೆ ಭಾರತ ಕೊಟ್ಟ ಹೆಮ್ಮೆಯ ಕೊಡುಗೆಯಾಗಿದೆ ಎಂದು ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮೀಜಿ ನುಡಿದರು.

ಶನಿವಾರ ಇಲ್ಲಿನ ಲಕ್ಷ್ಮೀ ನಗರದಲ್ಲಿನ ಶ್ರೀ ಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಭಗವದ್ಗೀತಾ ಅಭಿಯಾನದ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ಗೀತಾ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ಭಗವದ್ಗೀತೆಯಲ್ಲಿನ 18 ಅಧ್ಯಾಯಗಳ ಎಲ್ಲ 700 ಶ್ಲೋಕಗಳಲ್ಲಿನ ಅಂಶಗಳು ವ್ಯಕ್ತಿಗೆ ಶ್ರೇಷ್ಠತೆಯತ್ತ ಒಯ್ಯುವ ಜತೆಗೆ ಉತ್ತಮ ಬದುಕಿಗೆ ಸರಳ ಮಾರ್ಗ ತೋರಿಸುತ್ತವೆ. ಇದು ಮನುಕುಲ ಉದ್ಧಾರದ ಮೌಲಿಕ ಗ್ರಂಥ ಎಂದರು.

ಭಗವಂತನ ನಿರಂತರ ಸಂಬಂಧದ ಆವಿರ್ಭಾವವೇ ಜ್ಞಾನ. ಅಂಥ ಜ್ಞಾನವನ್ನು ನಾವು ಗೀತೆಯಿಂದ ಪಡೆದುಕೊಳ್ಳಬಹುದಾಗಿದೆ. ಭಗವದ್ಗೀತೆ ಕೆಲವರಿಗಷ್ಟೇ ಸೀಮಿತ ಎಂದು ಹೇಳುತ್ತ ಜನರನ್ನು ಜ್ಞಾನಭಂಡಾರದ ಮಹಾ ಗ್ರಂಥದಿಂದ ವ್ಯವಸ್ಥಿತವಾಗಿ ದೂರವಿಡುತ್ತಿದ್ದಾರೆ. ಜನತೆ ವಾಸ್ತವ ಅರಿತು ಓದಬೇಕು. ಅಧ್ಯಾತ್ಮಯೋಗ, ಕರ್ಮಯೋಗ, ಜ್ಞಾನಯೋಗ, ಭಕ್ತಿಯೋಗ ಸೇರಿ ಇದರಲ್ಲಿನ ನಾನಾ ಅಂಶಗಳು ಮನುಷ್ಯನಿಗೆ ಅಗಾಧ ಸಾಧನೆಯತ್ತ ಒಯ್ಯುತ್ತವೆ ಎಂದು ಪ್ರತಿಪಾದಿಸಿದರು.

ಲಯ ಬದ್ಧ, ವ್ಯಾಕರಣ ಶುದ್ಧವಾಗಿ ಶ್ಲೋಕ ಪಠಿಸುವುದರಿಂದ ಮನಸ್ಸಿನಲ್ಲಿ ಪ್ರಸನ್ನ ಭಾವ ಮೂಡುತ್ತದೆ. ಕರೊನಾದಿಂದ ಜನರಲ್ಲಿ ಧೈರ್ಯ ಕಡಿಮೆ ಆಗಿದೆ. ಭೀತಿಯಲ್ಲಿ ಜೀವನ ಸಾಗಿಸುವಂತಾಗಿದೆ. ಈ ಕಾಯಿಲೆ ತಡೆಯಲು ರೋಗ ನಿರೋಧಕ ಶಕ್ತಿ ಮತ್ತು ಮಾನಸಿಕ ಧೈರ್ಯ ಅಗತ್ಯ. ಗೀತೆಯಲ್ಲಿ ಅಭಯದ ಬಗ್ಗೆ ಪ್ರಸ್ತಾಪಿಸಲಾಗಿದೆ. ಭಯವಿಲ್ಲದ ಜೀವನ ಸಾಗಿಸುವುದಕ್ಕೆ ಸ್ಫೂರ್ತಿ, ಪ್ರೇರಣೆ ನೀಡುತ್ತದೆ. ಹೆದರಿಕೆ ಆದಾಗ ಮನಸ್ಸು ವಿಚಲಿತಗೊಂಡು ಹಲವು ರೋಗಗಳಿಗೆ ಕಾರಣವಾಗುತ್ತದೆ. ಗೀತೆಯಲ್ಲಿ ಇದಕ್ಕೆ ಪರಿಹಾರ ಬೋಧಿಸಲಾಗಿದೆ. ಈಗಿನ ಸ್ಥಿತಿಯಲ್ಲಿ ಮನಸ್ಸನ್ನು ಸದೃಢಗೊಳಿಸುವ ಶಕ್ತಿ ಭಗವದ್ಗೀತೆ ನೀಡುತ್ತದೆ ಎಂದರು. ಸಂಚಾಕಲ ಅನೀಲ ದೇಶಪಾಂಡೆ ಪ್ರಾಸ್ಥಾವಿಕ ಮಾತನಾಡಿದರು.

ಏಕದಂಡಗಿ ಮಠದ ಶ್ರೀ ಶ್ರೀನಿವಾಸ ಸ್ವಾಮಿಗಳು, ದಾಸಬಾಳ ಮಠದ ಶ್ರೀ ವೀರೇಶ್ವರ ಸ್ವಾಮಿಗಳು, ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ್, ಮಾಜಿ ಎಂಎಲ್ಸಿ ಚೆನ್ನಾರಡ್ಡಿ ಪಾಟೀಲ್ ತುನ್ನುರು, ಜೆಡಿಎಸ್ ರಾಜ್ಯ ನಾಯಕ ಶರಣಗೌಡ ಕಂದಕೂರ, ರಮೇಶ ದೊಡ್ಮನಿ, ಪ್ರಮುಖರಾದ ವೆಂಕಟರಮಣ ಹೆಗಡೆ, ರವೀಂದ್ರ ಕುಲಕರ್ಣಿ ಇದ್ದರು. ಪ್ರಾಚಾರ್ಯ ಡಾ.ಸುಭಾಶ್ಚಂದ್ರ ಕೌಲಗಿ ನಿರೂಪಿಸಿ, ವಂದಿಸಿದರು.
——–

Related Articles

Leave a Reply

Your email address will not be published. Required fields are marked *

Back to top button